ಮೈಸೂರು ಟಾಪ್ 3 ನ್ಯೂಸ್..!
– ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಗಂಭೀರ..!
– ಕೆಆರ್ ಎಸ್ ನಿಂದ ನದಿಗೆ ಹರಿದ ನೀರು: ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ತಾತ್ಕಾಲಿಕ ಬಂದ್
– ಮನೆಯ ಗೋಡೆ ಕುಸಿದು ಗೃಹಿಣಿ ಸಾವು!
NAMMUR EXPRESS NEWS
ಮೈಸೂರು: ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೈಸೂರಿನ ಹೊರ ವಲಯದ ರಿಂಗ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಚಂದ್ರು ಮತ್ತು ಪ್ರೇಮಾ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿಯಾದ ಈ ದಂಪತಿ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಬೈಕ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಚಂದ್ರು ಅವರು ಗಂಭೀರ ಗಾಯಗೊಂಡರೆ, ಸಣ್ಣ-ಪುಟ್ಟ ಗಾಯದಿಂದ ಪ್ರೇಮಾ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ರಸ್ತೆ ಪೂರ್ತಿ ರಕ್ತಸಿಕ್ತವಾಗಿತ್ತು. ಸ್ಥಳಕ್ಕೆ ವಿವಿ ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕೆಆರ್ ಎಸ್ ನಿಂದ ನದಿಗೆ ಹರಿದ ನೀರು: ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ತಾತ್ಕಾಲಿಕ ಬಂದ್!
ಮಂಡ್ಯ: ಕೆಆರ್ಎಸ್ ಜಲಾಶಯದಿಂದ ಹೆಚ್ಚಾಗಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದಿನಿಂದ ಮುಂದಿನ ಆದೇಶದವರೆಗೆ ದೋಣಿ ವಿಹಾರ ಬಂದ್ ಇರಲಿದೆ. ಪ್ರವಾಸಿಗರಿಗೆ ರಂಗನತಿಟ್ಟು ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿ ಅಂಚಿಗೆ ತಲುಪಿದ ಹಿನ್ನೆಲೆಯಲ್ಲಿ ಇಂದು (ಜು.20) ಕಾವೇರಿ ನದಿಗೆ ಸದ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂನ 10 ಕ್ರೆಸ್ಟ್ ಗೇಟ್ ಗಳ ಮೂಲಕ ಹಾಲ್ಗೊರೆಯಂತೆ ನೀರು ರಭಸವಾಗಿ ಹೊರ ಬರುತ್ತಿದೆ. ಸಂಜೆ ವೇಳೆಗೆ ಡ್ಯಾಂ ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಒಳಹರಿವು ಹೆಚ್ಚಳವಾದರೆ ಹೊರಹರಿವು ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಸದ್ಯಕ್ಕೆ 10 ರಿಂದ 25 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಕಾವೇರಿ ನದಿ ಪಾತ್ರದ 92 ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದೆ. ಪ್ರವಾಸಿ ತಾಣಗಳಲ್ಲೂ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಡ್ಯ ಜಿಲ್ಲಾಡಳಿತ ಈಗಾಗಲೇ ಕಂಟ್ರೋಲ್ ರೂಂ ಸ್ಥಾಪಿಸಿದೆ.
ಕೆಆರ್ಎಸ್ ಜಲಾಶಯಕ್ಕೆ ಕಳೆದ ಐದು ದಿನಗಳಲ್ಲಿ 15 ಟಿಎಂಸಿ ನೀರು ಹರಿದು ಬಂದಿದೆ. ಕೆಆರ್ಎಸ್ ಡ್ಯಾಂನಲ್ಲಿ ಸದ್ಯ 120 ಅಡಿ ನೀರು ಸಂಗ್ರಹವಾಗಿದೆ. ಸಂಪೂರ್ಣ ಭರ್ತಿಗೆ ಕೇವಲ 4 ಅಡಿ ಮಾತ್ರ ಭಾಕಿ ಇದೆ. ಡ್ಯಾಂ ರವಿವಾರ ಸಂಜೆ ವೇಳೆಗೆ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ. ಸದ್ಯ ಡ್ಯಾಂಗೆ 51,374 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಹೇಮಲತಾ (22) ಮೃತ ದುರ್ದೈವಿ. ಅವಘಡದಲ್ಲಿ ತಾಯಿ ಮೃತಪಟ್ಟರೆ ಜತೆಗಿದ್ದ ಮಗುವನ್ನು ರಕ್ಷಣೆ ಮಾಡಲಾಗಿದೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.