ಎಷ್ಟೊಂದು ಸುಂದರ ಮೈಸೂರು ದಸರಾ!
– ಜಂಬೂ ಸವಾರಿ ನೋಡಲು ಲಕ್ಷ ಲಕ್ಷ ಜನ: ಅರಮನೆ ಸಿಂಗಾರ
– ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ 51 ಸ್ತಬ್ಧ ಚಿತ್ರ
NAMMUR EXPRESS NEWS
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಬಂಬೂ ಸವಾರಿ ಲಕ್ಷ ಲಕ್ಷ ಜನರ ಸಮ್ಮುಖದಲ್ಲಿ ನಡೆಯಿತು. ನವರಾತ್ರಿಯ 9 ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ಜನಮನ ಸೂರೆಗೊಂಡಿದ್ದು, ೧೦ನೇ ದಿನವಾದ ಶನಿವಾರ ವಿಜಯ ದಶಮಿ ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಸಾಗಿದ್ದು, ಮೈಸೂರು ಜಂಬೂಸವಾರಿಗೆ ಸಿಂಗರಿಸಿಕೊಂಡಿತ್ತು. ದೇಶ ವಿದೇಶಗಳಿಂದ ಉತ್ಸವ ವೀಕ್ಷಿಸಲು ಜನರು ಬಂದಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದಾರೆ. ಅರಮನೆ ಮುಂಭಾಗ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.
750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ನಾಯಕ ಅಭಿಮನ್ಯು ಐದನೇ ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿದ್ದಾನೆ.ಹಿರಣ್ಯ ಮತ್ತು ಲಕ್ಷ್ಮಿ ಕುಮ್ಮಿ ಆನೆಗಳಾಗಿ ಹೆಜ್ಜೆ ಹಾಕಲಿವೆ. ನಿಶಾನೆ ಆನೆಯಾಗಿ ಧನಂಜಯ್, ನೌಥ್ ಆನೆಯಾಗಿ ಗೋಪಿ ಭಾಗವಹಿಸಿವೆ.
– ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ 51 ಸ್ತಬ್ಧ ಚಿತ್ರ
ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ವೇಳೆ ಒಟ್ಟು ಐವತ್ತೊಂದು ಸ್ತಬ್ಧ ಚಿತ್ರಗಳು ಭಾಗವಹಿಸಿವೆ. ಸ್ತಬ್ಧ ಚಿತ್ರಗಳ ಪಾಲ್ಗೊಳ್ಳುವಿಕೆ ಕುರಿತಾಗಿ ಮೈಸೂರು ದಸರಾ ಮಹೋತ್ಸವ 2024ರ ಸ್ತಬ್ಧ ಚಿತ್ರ ಉಪ ಸಮಿತಿಯಿಂದ ಕೈಪಿಡಿ ಬಿಡುಗಡೆಯಾಗಿದ್ದು, ಈ ವರ್ಷ ಅತೀ ಹೆಚ್ಚು ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತಿವೆ. ಅತ್ಯುತ್ತಮ ಮೂರು ಸ್ತಬ್ಧ ಚಿತ್ರಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನೂ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಮೂವತ್ತೊಂದು ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ಜಂಬೂ ಸವಾರಿ ಮೆರವಣಿಗೆಯುದ್ದಕ್ಕೂ ಸಾಗಲಿವೆ. ಶುಕ್ರವಾರ ಸಂಜೆ ವೇಳೆಗೆ ಎಲ್ಲಾ ಸ್ತಬ್ಧ ಚಿತ್ರಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಮೈಸೂರಿನಲ್ಲಿಯೇ ಎಲ್ಲಾ ಸ್ತಬ್ಧ ಚಿತ್ರಗಳನ್ನು ಸಿದ್ಧಗೊಳಿಸಲಾಗುತ್ತಿದೆ.