ಆನ್ಲೈನ್ ಹೊಡೆತಕ್ಕೆ ದೇಶದಲ್ಲಿ ಒಂದೇ ವರ್ಷ 2 ಲಕ್ಷ ಕಿರಾಣಿ ಅಂಗಡಿ ಬಂದ್!
– ಆನ್ಸೆನ್ ಶಾಪಿಂಗ್, ರಿಯಾಯಿತಿಗಳಿಗೆ ಜನ ಮರುಳು
– ಸಣ್ಣ ವ್ಯಾಪಾರಿಗಳ ಮರೆಯಿತೇ ಸರ್ಕಾರ?
NAMMUR EXPRESS NEWS
ನವದೆಹಲಿ : ದೇಶದಲ್ಲಿ ಇ-ಕಾಮರ್ಸ್ ಸಂಸ್ಕೃತಿ ವೃದ್ಧಿಯಾಗಿ ಜನತೆ ಆನ್ಲೈನ್ ಶಾಪಿಂಗ್ ಕಡೆ ಮುಖ ಮಾಡುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ ಬೀಗ ಬಿದ್ದಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.4 ಲಕ್ಷಕ್ಕೂ ಅಧಿಕ ವಿತರಕರ ಸಂಘಟನೆಯಾಗಿರುವ ‘ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆದಾರರ ಸಂಘಟನೆ’ ನಡೆಸಿದ ಈ ಅಧ್ಯಯನ ದೇಶದಲ್ಲಿ ಇ-ಕಾಮರ್ಸ್ ಉದ್ಯಮ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಗೊಂಡ ಬಳಿಕ ನಡೆದ ಮೊದಲ ಸಮಗ್ರ ಅಧ್ಯಯನ ಎನ್ನಲಾಗಿದೆ.
ಅಧ್ಯಯನ ವರದಿ ಅನ್ವಯ, ಮಹಾನಗರಗಳಲ್ಲಿ ಮಾಸಿಕ ಸರಾಸರಿ 5.5 ಲಕ್ಷ ರೂಪಾಯಿ ವಹಿವಾಟು ನಡೆಸುವ 17 ಲಕ್ಷ ಅಂಗಡಿಗಳಿದ್ದು, ಇವುಗಳಲ್ಲಿ ಶೇ.45ರಷ್ಟು ಮುಚ್ಚಿವೆ. ಅತ್ತ ಮಾಸಿಕ ಸರಾಸರಿ 3.5 ಲಕ್ಷ ರು.ನಷ್ಟು ವ್ಯಾಪಾರ ನಡೆಸುವ 12 ಲಕ್ಷ ಅಂಗಡಿಗಳಿರುವ ಟೈರ್ 1 ನಗರಗಳಲ್ಲಿ ಶೇ.30 ಅಂಗಡಿಗಳು ಮುಚ್ಚಿದ್ದು, ಟೈರ್ 2 ನಗರಗಳಲ್ಲಿ ಶೇ.25 ಅಂಗಡಿಗಳು ಬಾಗಿಲು ಹಾಕಿವೆ. ದೇಶದಲ್ಲಿ ಒಟ್ಟು 1.3 ಕೋಟಿ ಕಿರಾಣಿ ಅಂಗಡಿಗಳಿವೆ. ಈ ಪೈಕಿ ಟೈರ್ 1 ಸಿಟಿಗಳು ಅಂದರೆ ದೊಡ್ಡ ನಗರಗಳು 12 ಲಕ್ಷ ಅಂಗಡಿಗಳನ್ನು ಹೊಂದಿದ್ದರೆ, ಟೈರ್ 2 ಮತ್ತು ಟೈರ್ 3 ನಗರಗಳು ಉಳಿದ 1 ಕೋಟಿಗಿಂತ ಹೆಚ್ಚಿನ ಕಿರಾಣಿ ಅಂಗಡಿಗಳನ್ನು ಹೊಂದಿವೆ.
ಅಧ್ಯಯನ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ವಿತರಕರ ಒಕ್ಕೂಟದ ಅಧ್ಯಕ್ಷ ಧೈರ್ಯಶಾಲಿ ಪಾಟೀಲ್, ‘ಸೂಪರ್ ಮಾರ್ಕೆಟ್ಗಳಿಗೂ ಸಡ್ಡು ಹೊಡೆದಿದ್ದ ಕಿರಾಣಿ ಅಂಗಡಿಗಳು ಇದೀಗ ಇ-ಕಾಮರ್ಸ್ ಹಾಗೂ ಆರ್ಥಿಕ ಹಿಂಜರಿತದ ಕಾರಣ ಅಪಾಯದಲ್ಲಿವೆ. ಜನರನ್ನು ಸೆಳೆಯುವ ಸಲುವಾಗಿ ಕಡಿಮೆ ಅಥವಾ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರುತ್ತಿರುವ ಆನ್ಲೈನ್ ವಾಣಿಜ್ಯ ಸಂಸ್ಥೆಗಳು ಕಿರಾಣಿ ಅಂಗಡಿಗಳ ಗ್ರಾಹಕರನ್ನು ಕಸಿಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಣ್ಣ ವ್ಯಾಪಾರಿಗಳ ರಕ್ಷಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಲುವ ಬಗ್ಗೆ ಚಿಂತನೆ ನಡೆಸಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.