ನಕಲಿ ವೀಸಾ ನೀಡಿ,ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುವ ಗ್ಯಾಂಗ್!
* ಐದು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದ ಗ್ಯಾಂಗ್?
* ಸುಮಾರು 2,000 ನಕಲಿ ವೀಸಾ ವಿತರಣೆ!
NAMMUR EXPRESS NEWS
ನವದೆಹಲಿ: ಅಮೆರಿಕಕ್ಕೆ ಉದ್ಯೋಗ ಅಥವಾ ಶಿಕ್ಷಣ ನಿಮಿತ್ತ ಅಮೆರಿಕಕ್ಕೆ ಹೋಗುವ ಕನಸು ಹಲವರದ್ದು. ಆದರೆ, ವೀಸಾದ್ದೇ ಸಮಸ್ಯೆ. ಸೀಮಿತ ವ್ಯಕ್ತಿಗಳಿಗೆ ಅದರಲ್ಲೂ ವರ್ಷಕ್ಕೆ ಇಂತಿಂಥ ದೇಶದಿಂದ ಇಷ್ಟೇ ಮಂದಿಗೆ ವೀಸಾ ನೀಡಬೇಕೆಂಬ ಕೋಟಾವನ್ನು ಅಲ್ಲಿನ ಸರ್ಕಾರ ನಿಗದಿಗೊಳಿಸಿರುವುದರಿಂದ ಹಲವರ ಅಮೆರಿಕ ಕನಸು ಕನಸಾಗಿಯೇ ಉಳಿಯುತ್ತದೆ.
ಇದನ್ನೇ ಬಂಡವಾಳವಾಗಿಸಿಕೊಂಡ ದೆಹಲಿಯಲ್ಲಿನ ಒಂದು ಗ್ಯಾಂಗ್, ನಕಲಿ ವೀಸಾಗಳನ್ನು ನೀಡಿ, ಭಾರತೀಯರನ್ನು ಅಮೆರಿಕಕ್ಕೆ ಕಳುಹಿಸುತ್ತಿತ್ತು. ಇದೀಗ, ಆ ಗ್ಯಾಂಗ್ ಅನ್ನು ಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ದೆಹಲಿಯ ಮನೆಯೊಂದರಲ್ಲಿ ನಕಲಿ ವೀಸಾ ತಯಾರಿಸಲಾಗುತ್ತಿದ್ದು ಅಲ್ಲಿಂದ ಲ್ಯಾಪ್ ಟಾಪ್ ಗಳು, ಪ್ರಿಂಟರ್ ಗಳು, ಸ್ಕ್ಯಾನರ್ ಗಳು ಹಾಗೂ ಂಬಾಸಿಂ್ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದ ಗ್ಯಾಂಗ್!
ಬಂಧಿತರನ್ನು ಮನೋಜ್ ಕುಮಾರ್ ಮೋಂಗಾ, ಶಿವ ಗೌತಮ್, ನವೀನ್ ರಾಣಾ, ಬಲ್ಬೀರ್ ಸಿಂಗ್, ಜಸ್ವಿಂದರ್ ಸಿಂಗ್, ಆಶಿಫ್ ಅಲಿ ಎಂದು ಗುರುತಿಸಲಾಗಿದೆ. ಅಚ್ಚರಿಯೆಂದರೆ, ಕಳೆದ ಐದು ವರ್ಷಗಳಿಂದ ಈ ಆರು ಮಂದಿ ನಕಲಿ ವೀಸಾಗಳನ್ನು ನೀಡುತ್ತಾ ಬಂದಿದ್ದರು. ಅವುಗಳನ್ನು ಬಳಸಿಕೊಂಡು ಅಮೆರಿಕಕ್ಕೆ ಹೋಗಿ ಬರುತ್ತಿದ್ದರು!
ಐದು ವರ್ಷಗಳಲ್ಲಿ 1,800 ರಿಂದ 2,000 ನಕಲಿ ವೀಸಾಗಳನ್ನು ವಿತರಿಸಿದ್ದು, ಈ ಪ್ರತಿಯೊಂದು ವೀಸಾಕ್ಕೂ 8ರಿಂದ 10 ಲಕ್ಷ ರೂ.ಗಳನ್ನು ಈ ಖದೀಮರು ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಸುಮಾರು ವರ್ಷಗಳಿಂದ ಈ ದಂಧೆಯಲ್ಲಿ ನಿರತರಾಗಿದ್ದ ಈ ವ್ಯಕ್ತಿಗಳು ಅಂದಾಜು 100 ಕೋಟಿ ರೂ. ಬ್ಯುಸಿನೆಸ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.