ಗಗನಕ್ಕೇರುತ್ತಿದೆ ಈರುಳ್ಳಿ ದರ!
– ಟೊಮೆಟೊ, ಬೆಳ್ಳುಳ್ಳಿ ಬಳಿಕ ಈಗ ಈರುಳ್ಳಿ ಏರಿಕೆ
– ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರದಿಂದ ಪ್ಲಾನ್
NAMMUR EXPRESS NEWS
ನವ ದೆಹಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ಹಲವು ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 85 ರೂ. ದಾಟಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಕೆಲವು ದಿನಗಳ ಹಿಂದೆ ಕೆ.ಜಿಗೆ 35 ರೂ. ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದ್ದ ಕೇಂದ್ರವು, ಈಗ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಮಹಾರಾಷ್ಟ್ರದಿಂದ 1,600 ಟನ್ ಈರುಳ್ಳಿ ತರಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಈರುಳ್ಳಿಯನ್ನು ತುಂಬಿಕೊಂಡು ‘ಕಾಂದಾ ಎಕ್ಸ್ಪ್ರೆಸ್’ ರೈಲು ಮಹಾರಾಷ್ಟ್ರದ ಲಾಸನ್ಗಾಂವ್ನಿಂದ ಗುರುವಾರ ಹೊರಟಿದೆ. ಈ ರೈಲು ದಿಲ್ಲಿಯ ಕಿಶನ್ಗಂಜ್ಗೆ ಅಕ್ಟೋಬರ್ 20ರಂದು ತಲುಪಲಿದೆ. ಮಾರುಕಟ್ಟೆಗೆ ಈರುಳ್ಳಿಯ ಹೆಚ್ಚಿನ ಹರಿವು ಬೆಲೆ ಇಳಿಕೆಗೆ ನೆರವಾಗಲಿದೆ,” ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. ಈರುಳ್ಳಿ ಬೆಳೆಯುವ ಪ್ರದೇಶಗಳಿಂದ ಮುಂದಿನ ದಿನಗಳಲ್ಲಿ ಲಖನೌ, ವಾರಾಣಸಿ, ನಾಗಾಲ್ಯಾಂಡ್ ಮತ್ತು ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಿಗೂ ಸರಬರಾಜು ಮಾಡಲಾಗುವುದು,” ಎಂದು ತಿಳಿಸಿದ್ದಾರೆ.
ಈಗಾಗಲೇ ಹಲವು ರಾಜ್ಯಗಳಲ್ಲಿ ಕೆ.ಜಿ ಈರುಳ್ಳಿಯನ್ನು 35 ರೂ. ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೀಪಾವಳಿಗೆ ಮುಂಚಿತವಾಗಿ ದೇಶಾದ್ಯಂತ ಮೊಬೈಲ್ ವ್ಯಾನ್ಗಳ ಸಂಖ್ಯೆಯನ್ನು 600ರಿಂದ 1,000ಕ್ಕೆ ಹೆಚ್ಚಿಸಲಾಗುವುದು, ಈಗಾಗಲೇ ಕಾಪು ದಾಸ್ತಾನಿನಿಂದ 4.7 ಲಕ್ಷ ಟನ್ ಎತ್ತುವಳಿ ಮಾಡಲಾಗಿದ್ದು, ಇದರಲ್ಲಿ 91,960 ಟನ್ ಈರುಳ್ಳಿಯನ್ನು ಎನ್ಸಿಎಫ್ ಹಾಗೂ ನಾಫೆಡ್ಗೆ ಹಂಚಿಕೆ ಮಾಡಲಾಗಿದೆ. ಈವರೆಗೆ 86 ಸಾವಿರ ಟನ್ ಈರುಳ್ಳಿಯನ್ನು ಕರ್ನಾಟಕ, ಗುಜರಾತ್, ಗೋವಾ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ ಮತ್ತು ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳಿಗೆ ರವಾನಿಸಲಾಗಿದೆ,” ಎಂದು ನಿಧಿ ಖರೆ ಹೇಳಿದ್ದಾರೆ.
– ಟೊಮೆಟೊ ಬೆಲೆ ಇಳಿಕೆಗೆ ಕ್ರಮ
ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬಯಿಗಳಲ್ಲಿ ಮೂರಂಕಿ ದಾಟಿರುವ ಟೊಮೆಟೋ ಬೆಲೆ ಇಳಿಕೆಗೂ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮೂಲಕ ದಿಲ್ಲಿ-ಎನ್ಸಿಆರ್ ಮತ್ತು ಮುಂಬಯಿಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ.ಗಳ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟವನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ. ಅಧಿಕ ಮಳೆಯಾಗುತ್ತಿರುವುದರಿಂದ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಇದಕ್ಕೆ ಹಬ್ಬಗಳು ಕೂಡ ಕಾರಣವಾಗಿವೆ.