ಬಾವಿಗೆ ಬಿದ್ದಿದ್ದ ತಮ್ಮನ ಪ್ರಾಣ ರಕ್ಷಿಸಿದ 8 ವರ್ಷದ ಹುಡುಗಿ
– ತುಮಕೂರಲ್ಲಿ ನಡೆದ ಘಟನೆ: ಜನರ ಮೆಚ್ಚುಗೆ
– ಚಿರತೆ ದಾಳಿಗೊಳಗಾಗಿದ್ದ ಬಾಲಕಿ ಸಾವು
– ವಿದ್ಯಾರ್ಥಿಗಳಿಗೆ ವಿಷ ಹಾಕಿ ಗಂಜಿ ಕೊಟ್ಟ ಶಿಕ್ಷಕಿ!?
NAMMUR EXPRESS NEWS
ತುಮಕೂರು: ಜೀವದ ಹಂಗು ತೊರೆದು 8 ವರ್ಷದ ಬಾಲಕಿ ತನ್ನ ಸಹೋದರನ ಜೀವ ರಕ್ಷಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಬಿದ್ದಿದ್ದ ತಮ್ಮ ಹಿಮಾಂಶುನನ್ನು ಸಹೋದರಿ ಶಾಲೂ ರಕ್ಷಿಸಿದ್ದಾಳೆ. ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕುಚ್ಚಂಗಿಯಲ್ಲಿನ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದಾರೆ. ದಂಪತಿಗೆ ಶಾಲೂ(8), ಹಿಮಾಂಶು(7), ರಾಶಿ(3), ಹಾಗೂ ಕಪಿಲ್(2) ಎಂಬ ನಾಲ್ಕು ಮಕ್ಕಳಿದ್ದಾರೆ.
ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾವಿಗೆ ಬಿದ್ದ ಚೆಂಡು ತೆಗೆಯಲು ಹೋಗಿ ಹಿಮಾಂಶು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಇದನ್ನ ನೋಡಿದ ಸಹೋದರಿ ಶಾಲೂ ಲೈಫ್ ಜಾಕೀಟ್ ಧರಿಸಿ ಬಾವಿಗೆ ಜಿಗಿದಿದ್ದಾಳೆ. ಇದೇ ವೇಳೆ ಶಾಲೂ ಸಹಾಯಕ್ಕೆ ಅಕ್ಕಪಕ್ಕದ ಜನರು ದೌಡಾಯಿಸಿದ್ದು, ನಂತರ ಸ್ಥಳೀಯರು ಬಾವಿಯಿಂದ ಇಬ್ಬರನ್ನು ಮೇಲಕ್ಕೆ ಎತ್ತಿದ್ದಾರೆ. ಶಾಲೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮನೆ ಮಾಲೀಕ ಧನಂಜಯ್ಯ ಬಳಿ ಈಜು ಕಲಿಯುತ್ತಿದ್ದಳು. ಈಜು ಕಲಿಯುವ ವೇಳೆ ಲೈಫ್ ಜಾಕೀಟ್ ಧರಿಸುತ್ತಿದ್ದಳು. ಇದೀಗ 8 ವರ್ಷದ ಬಾಲಕಿ ಶಾಲೂ ಸಾಹಸವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ವಿದ್ಯಾರ್ಥಿಗಳಿಗೆ ವಿಷ ಹಾಕಿ ಗಂಜಿ ಕೊಟ್ಟ ಶಿಕ್ಷಕಿ!?
ಶಿಕ್ಷಕಿಯೇ 25 ನರ್ಸರಿ ಮಕ್ಕಳಿಗೆ ಗಂಜಿಯಲ್ಲಿ ವಿಷ ಹಾಕಿ ತಿನ್ನಿಸಿ ಒಂದು ಮಗುವನ್ನು ಕೊಂದ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿ ವಾಂಗ್(40) ಎಂಬ ಶಿಕ್ಷಕಿ 2019 ರಲ್ಲಿ ಈ ಪೈಶಾಚಿಕ ಕೃತ್ಯ ನಡೆಸಿದ್ದಳು. ಮೆಂಗ್ ಮೆಂಗ್ ಪ್ರೀಸ್ಕೂಲ್ ನಲ್ಲಿ ಕೆಲಸ ಮಾಡುತ್ತಿದ್ದ ವಾಂಗ್, ಮಕ್ಕಳಿಗೆ ನೀಡುವ ಗಂಜಿಯಲ್ಲಿ ಸೋಡಿಯಂ ನೈಟ್ರೇಟ್ ಎಂಬ ವಿಷವನ್ನು ಬೆರೆಸುತ್ತಿದ್ದ ಸಂಗತಿ ಸಹೋದ್ಯೋಗಿ ಒಬ್ಬರಿಂದ ಬಯಲಾಗಿತ್ತು.
ತಕ್ಷಣವೇ ಮಕ್ಕಳನ್ನು ಚಿಕಿತ್ಸೆಗೆ ಕರೆದೊಯ್ದಿದ್ದರಿಂದ ಎಲ್ಲಾ ಮಕ್ಕಳೂ ಚೇತರಿಸಿಕೊಂಡರೂ ಒಂದು ಮಗು ಮಾತ್ರ ಬಹು ಅಂಗಾಂಗ ವೈಫಲ್ಯದಿಂದ ಹತ್ತು ತಿಂಗಳು ನರಳಿ ಸಾವನ್ನಪ್ಪಿತ್ತು. ಈಕೆಗೆ ಈ ಮುನ್ನ 9 ತಿಂಗಳ ಕಾಲ ತಾತ್ಕಾಲಿಕ ಶಿಕ್ಷೆ ವಿಧಿಸಲಾಗಿದ್ದು, ಈಗ ಅದನ್ನು ಮರಣದಂಡನೆಯಾಗಿ ಪರಿವರ್ತಿಸಲಾಗಿದೆ. ವಾಂಗ್ ಎರಡು ವರ್ಷಗಳ ಹಿಂದೆ ತನ್ನ ಗಂಡನಿಗೂ ಸಹ ಊಟದಲ್ಲಿ ವಿಷ ಹಾಕಿದ್ದಳು. ಆದರೆ ಆತ ಅನಾರೋಗ್ಯಕ್ಕೀಡಾದ ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮೃತ್ಯುವಿನ ದವಡೆಯಿಂದ ಪಾರಾಗಿದ್ದ. ಬಳಿಕ ವಾಂಗ್ ಆನ್ ಲೈನ್ ಮೂಲಕ ಸೋಡಿಯಂ ನೈಟ್ರೈಟ್ ತರಿಸಿಕೊಂಡು ವಿಷ ಹಾಕಿದ್ದಳು ಎಂದು ತಿಳಿದುಬಂದಿತ್ತು.
ಚಾಮರಾಜನಗರ: ಮನೆಮುಂದೆಯೇ ಚಿರತೆ ದಾಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಬಾಲಕಿ ಸುಶೀಲ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಕಳೆದ ಜೂ. 26 ರಂದು ಮನೆಯ ಮುಂಭಾಗ ಆಟವಾಡುತ್ತಿದ್ದ ಸುಶೀಲಾ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ಯುವ ಪ್ರಯತ್ನ ನಡೆಸಿತ್ತು. ಇದರ ಪರಿಣಾಮ, ತೀವ್ರವಾಗಿ ಗಾಯಗೊಂಡು ಮೈಸೂರಿನ ಚೆಲುವಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ದವಡೆ ಮೂಳೆ ಮುರಿದಿದ್ದ ಪರಿಣಾಮ ಮುಖ ಊದಿಕೊಂಡಿತ್ತು. ಕಳೆದ 14 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಜು. 11ರಂದು ಆಪರೇಷನ್ ಕೂಡ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಅಸುನೀಗಿದ್ದಾಳೆ. ಇನ್ನು, ಚಿರತೆ ದಾಳಿ ಪ್ರಕರಣ ನಡೆದು ಸುಮಾರು 14 ದಿನಗಳು ಕಳೆದಿದೆ. ಚಿರತೆ ಸೆರೆಗಾಗಿ ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಅಕ್ಕಪಕ್ಕದಲ್ಲಿ ಮೂರು ಬೋನ್ ಗಳನ್ನು ಸಹ ಇಡಲಾಗಿತ್ತು .ಆದರೆ ಇದುವರೆಗೂ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮೀ ಯೋಜನೆಗೆ ಜು.16ಕ್ಕೆ ಚಾಲನೆ!
HOW TO APPLY : NEET-UG COUNSELLING 2023