ಎರಡು ಹೊತ್ತು 90 ಬಾಟಲ್ ಉಚಿತ ಮದ್ಯ ಯೋಜನೆ ಮಾಡಲು ಪಟ್ಟು!
– ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ ಮದ್ಯಪ್ರಿಯರು
– ಸಾಮಾಜಿಕ ಜಾಲತಾಣಗಳ ಮೇಲೆ ಮಂಗಳೂರು ಪೊಲೀಸರ ಕಣ್ಣು
– ಕುಡುಕ ಗಂಡದ ಕಿರುಕುಳಕ್ಕೆ ಕುಟುಂಬ ಬಲಿ
– ಕಾರ್ಕಳ: ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ
NAMMUR EXPRESS NEWS
ಉಡುಪಿ: ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡಿದ ಹಿನ್ನಲೆಯಲ್ಲಿ ಇದೀಗ ಮದ್ಯಪ್ರಿಯರು ಮದ್ಯ ಮಾರಾಟ ನಿಲ್ಲಿಸಿ ಇಲ್ಲವಾದಲ್ಲಿ ಮದ್ಯವನ್ನು ಉಚಿತವಾಗಿ ನೀಡಿ ಎನ್ನುವ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.
ನಾಗರಿಕ ಸಮಿತಿ ಸದಸ್ಯರಾದ ನಿತ್ಯಾನಂದ ಒಳಕಾಡು ಹಾಗೂ ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ನೀಡುವಂತೆ ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಾದ ‘ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಟ್ವಿಟರ್ ಗಳಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಸಂದೇಶಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಇದೀಗ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.
ಒಂದು ತಿಂಗಳಿನಲ್ಲಿ 21 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.
‘ಧರ್ಮಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಸಂದೇಶಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಹಾಗೂ ಅವುಗಳ ಕುರಿತ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಗಳ ಮೇಲೆ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಹಾಗೂ ಸಾಮಾಜಿಕ ಮಾಧ್ಯಮ ಕೋಶದ ಮೂಲಕ ನಿಗಾ ವಹಿಸುತ್ತಿದ್ದೇವೆ. ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸಂದೇಶ ಹಂಚಿಕೊಂಡು ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಅಪರಾಧ ಪುನರಾವರ್ತನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡುಕ ಗಂಡನ ಕಿರುಕುಳದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ
ಕುಡುಕ ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.
ಮಾದೇಶ್ ಎಂಬಾತನ ಪತ್ನಿ ಶೀಲಾ ಹಾಗೂ ಮಕ್ಕಳು ವಿಷ ಸೇವಿಸಿದವರಾಗಿದ್ದು, ವಿಷ ಸೇವಿಸಿದ ಪರಿಣಾಮ 8 ವರ್ಷದ ಮಗಳು ಸಿಂಧು ಸಾವನ್ನಪ್ಪಿದ್ದು, ಶೀಲಾ(25) ಹಾಗೂ ಪುತ್ರ ಯಶವಂತ (14)ನ ಸ್ಥಿತಿ ಗಂಭೀರವಾಗಿದೆ. ಇವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಮಾದೇಶ್ ಅವರು ಪ್ರತಿನಿತ್ಯ ಕುಡಿದು ಬರುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಬುಧವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ತಾಯಿ ಹಾಗೂ ಮಕ್ಕಳು ವಿಷ ಸೇವಿಸಿದ್ದಾರೆ.
ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ
ಬಸ್ ಚಾಲಕರೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಕುಂಟಿಬೈಲು ಅಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಹರೀಶ್ ಶೆಟ್ಟಿ (50) ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಬಸ್ ಒಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಹರೀಶ್ ಶೆಟ್ಟಿ ರಿಕ್ಷಾ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು.
ಕಾರ್ಕಳ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023