– ಗಂಡ ಬೇರೆ ಮನೆ ಮಾಡಲಿಲ್ಲ ಎಂದು ಅತ್ತೆಯನ್ನೇ ಕೊಂದಳಾ ಸೊಸೆ!
– ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದ ಕಾಮುಕ ಅರೆಸ್ಟ್
– ಒಂದೂವರೆ ಬಕೆಟ್ ನೀರು ಕುಡಿಸಿದಕ್ಕೆ ಸಾವು ಕಂಡಳಾ ವಿದ್ಯಾರ್ಥಿನಿ?
NAMMUR EXPRESS NEWS
ಬೆಳಗಾವಿ: ಗಂಡ ಬೇರೆ ಮನೆ ಮಾಡಲಿಲ್ಲ ಅಂತ ಅತ್ತೆಯನ್ನೇ ಹೊಡೆದು ಸೊಸೆ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಗಂಡ ಬೇರೆ ಮನೆ ಮಾಡಲಿಲ್ಲವೆಂದು ಆರೋಪಿಸಿ ಅತ್ತೆ ಹಾಗೂ ಗಂಡನ ಮೇಲೆ ಹೆಂಡತಿಯೊಬ್ಬಳು ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಅತ್ತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಮೃತ ಅತ್ತೆಯನ್ನು ಮೆಹಾಬೂಬಿ ಯಾಕೂಶಿ(53) ಎಂದು ಗುರುತಿಸಲಾಗಿದೆ. ಮೇ.22ರಂದು ಸೊಸೆ ಮೇಹರೂಣಿ ತನ್ನ ಇಬ್ಬರು ಸಹೋದರರ ಜತೆ ಸೇರಿ ರಾಡ್ನಿಂದ ಗಂಡ ಸುವಾನ್ ಮತ್ತು ಅತ್ತೆ ಮೆಹಬೂಬಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅತ್ತೆ ಮೆಹಬೂಬಿ ಇಂದು(ಜೂ.13) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಾವಿಗೆ ಸೊಸೆ ಮೇಹರೂಣಿ ಮತ್ತು ಆಕೆಯ ಇಬ್ಬರು ತಮ್ಮಂದಿರೇ ಕಾರಣ ಅಂತಾ ಪತಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದ ಕಾಮುಕ!:
ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ಇಣುಕಿ ನೋಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ಮುನ್ನೇಕೊಳಲುನಲ್ಲಿ ನಡೆದಿದೆ.
ನಿತಿನ್ ಬಂಧಿತ ಕಾಮುಕ.ಬಾಡಿಗೆ ಮನೆಯಲ್ಲಿದ್ದ ನಿತಿನ್, ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಬಳಿಕ ಸ್ಥಳೀಯರು ನಿತೀನ್ನನ್ನು ಹಿಡಿದು ಮಾರತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ವಿದ್ಯಾರ್ಥಿನಿ ಸಾವು: ಶಾಲೆ ಮುಖ್ಯಸ್ಥ ಬಂಧನ
ಸಾಗರದ ಖಾಸಗಿ ಶಿಕ್ಷಣ ಸಂಸ್ಥೆ ವನಶ್ರೀ ವಸತಿ ಶಾಲೆಯಲ್ಲಿ ಹದಿಹರೆಯದ ವಿದ್ಯಾರ್ಥಿನಿ ಸಂಶಯಾಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಸ್ಥಾಪಕ ಎಚ್.ಪಿ. ಮಂಜಪ್ಪ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜಪ್ಪನ ವಿರುದ್ಧ ಜಾತಿನಿಂದನೆ, ಪೋಕ್ರೋ ಸೇರಿ ವಿವಿಧ ಕೇಸು ದಾಖಲಾಗಿದೆ.
ಜೂ.8ರಂದು ವನಶ್ರೀ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೊರಬ ತಾಲೂಕಿನ 13 ವರ್ಷದ ದಲಿತ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಯೋಗ ಮಾಡಿಸುವಾಗ ಅಸ್ವಸ್ಥಳಾದ ವಿದ್ಯಾರ್ಥಿನಿಗೆ ಮಂಜಪ್ಪ ಒಂದೂವರೆ ಬಕೆಟ್ ನೀರು ಕುಡಿಸಿದ್ದು ಸಾವಿಗೆ ಕಾರಣ ಎಂದು ಅರೋಪಿಸಲಾಗಿದೆ. ಶನಿವಾರ ವಿದ್ಯಾರ್ಥಿನಿ ಸಾವಿನ ತನಿಖೆ ನಡೆಸುವಂತೆ ಪೋಷಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಾಲೆ ಎದುರುಪ್ರತಿಭಟನೆ ನಡೆಸಿದ್ದರು.
ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೆಲವು ವಿದ್ಯಾರ್ಥಿನಿಯರು ಮಂಜಪ್ಪ ಲೈಂಗಿಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಮಾಡುತ್ತಿದ್ದರು. ಅಶ್ಲೀಲ ಪದ ಬಳಸಿ ಬೈಯುತ್ತಿದ್ದರು ಎಂದು ಆರೋಪಿಸಿದ್ದರು. ಭಾನುವಾರ ಆರೋಪಿ ಮಂಜಪ್ಪನನ್ನು ಉಪವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.