ಬಿಟ್ ಕಾಯಿನ್ ವಂಚನೆ ಪ್ರಕರಣಕ್ಕೆ ಮರು ಜೀವ?
– ಕರ್ನಾಟಕಕ್ಕೆ ಇಸ್ರೇಲ್ ಸಹಾಯ: ಅಂದರ್ ಆಗ್ತಾರಾ ಆರೋಪಿಗಳು!?
– ಆನ್ಲೈನ್ ಬೆಟ್ಟಿಂಗ್: ತನ್ನ ಅತ್ತಿಗೆ ಚಿನ್ನ ಕದ್ದು ಸಿಕ್ಕಿಬಿದ್ದ!
– ಟೊಮ್ಯಾಟೊ ಕಾಯಲು ಬೌನ್ಸರ್ಸ್ ನೇಮಕ!
– 1 ರೂ.ಹಾಕಿ 50 ಸಾವಿರ ಕಳೆದುಕೊಂಡರು!
NAMMUR EXPRESS NEWS
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರವಾಗಿ ಬಿಟ್ ಕಾಯಿನ್ ವಶಕ್ಕೆ ಪಡೆಯಲು ಕರ್ನಾಟಕ ಸರ್ಕಾರವು ಇಸ್ರೇಲ್ ಸಹಾಯ ಕೇಳುವ ಸಾಧ್ಯತೆಯಿದೆ.
ಇಸ್ರೇಲ್ ರಕ್ಷಣಾ ಇಲಾಖೆಯು ಉಗ್ರರಿಗೆ ಸಂದಾಯವಾಗುವ ಬಾಬತ್ತಿನಲ್ಲಿ ಹಮಾಸ್ ಉಗ್ರ ಸಂಘಟನೆಗೆ ಸೇರಿದ ಹಲವು ಕ್ರಿಪ್ಟೋ ವಾಲೆಟ್ ಗಳನ್ನ ವಶಕ್ಕೆ ಪಡೆದಿತ್ತು. ಇಸ್ರೇಲ್ ರಕ್ಷಣಾ ಇಲಾಖೆಯು ದೆಹಲಿ ಪೊಲೀಸರಿಗೂ ಈ ಬಗ್ಗೆ ಕಳೆದ ವರ್ಷ ಮಾಹಿತಿ ನೀಡಿತ್ತು. ಹೀಗಾಗಿ ಬಿಟ್ ಕಾಯಿನ್ ಹಗರಣದಲ್ಲಿ ಇಸ್ರೇಲ್ ನ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ಸಂಸ್ಥೆಯ ಸಹಾಯ ಕೇಳುವ ಸಾಧ್ಯತೆಯಿದೆ.
ಇಸ್ರೇಲ್ ಕ್ರಿಪ್ಟೋ ವಾಲೆಟ್ ಗಳನ್ನ ವಶಪಡಿಸಿಕೊಳ್ಳುವಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದೆ. ಆದರೆ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯನ್ನ ವಶಪಡಿಸಿಕೊಳ್ಳಲು ಬೇಕಾದ ಟೆಕ್ನಾಲಜಿ ಕೊರತೆ ಇದೆ. ಇದಲ್ಲದೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಕ್ರಿಪ್ಟೋ ಕರೆನ್ಸಿ ಹಗರಣಗಳು ನಡೆದಿಲ್ಲ. ಹೀಗಾಗಿ ಇಸ್ರೇಲ್ ಸಹಾಯ ಕೇಳುವ ಸಾಧ್ಯತೆಯಿದೆ. ಈ ಹಿಂದೆ ಬೇರೆ ತನಿಖಾ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು.
ಆನ್–ಲೈನ್ ಬೆಟ್ಟಿಂಗ್ ಗಾಗಿ ತನ್ನ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ!
ಆನ್–ಲೈನ್ ಬೆಟ್ಟಿಂಗ್ ಗಾಗಿ ತನ್ನ ಮನೆಯಲ್ಲಿರುವ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನ ಮಾಡಿದ್ದ, ಆರೋಪಿಯ ಬಂಧನವಾಗಿದೆ.
ಬೆಂಗಳೂರು ನಗರದ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ಜಯನಗರದ ದೂರುದಾರನ ತಮ್ಮನೇ ಆರೋಪಿಯಾಗಿದ್ದಾನೆ. ಆನ್–ಲೈನ್ ಬೆಟ್ಟಿಂಗ್ ಗಾಗಿ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ, ರೂಂ ನಲ್ಲಿನ ಕಬೋರ್ಡ್ನಲ್ಲಿ ಇಟ್ಟಿದ್ದ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನವಾಗಿತ್ತು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಕಾರ್ಯಪ್ರವೃತ್ತಾರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ 78.3 ಗ್ರಾಂ ಚಿನ್ನದ ಒಡವೆಗಳು, ಬೆಳ್ಳಿಯ ಒಡವೆಗಳು, ಮತ್ತು ಒಂದು ಲಾಂಗಿನ್ಸ್ ಮೆನ್ಸ್ ವಾಚ್ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಪ್ರಕರಣದಲ್ಲಿ ಆರೋಪಿ ತನ್ನ ಅತ್ತಿಗೆಯ ಚಿನ್ನ ಕದ್ದಿದ್ದ.
ಟೊಮ್ಯಾಟೊ ಕಾಯಲು ಬೌನ್ಸರ್ಸ್ ನೇಮಿಸಿದ ವ್ಯಾಪಾರಿ..!
ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬಂಗಾರ ಬಲೆ ಬಂದಿದೆ. ಇದನ್ನು ಕಾಯಲೆಂದೇ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಬೌನ್ಸರ್ಸ್ ಗಳನ್ನು ನೇಮಿಸಿಕೊಂಡಿದ್ದಾರೆ.
ಟೊಮ್ಯಾಟೊ ಬೆಲೆ ಹೆಚ್ಚಾಗುತ್ತಿದ್ದಂತೆ ಖರೀದಿಸುವ ಬದಲು ಜನರು ಕಳ್ಳತನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತೊಂದರೆ ನೀಡುತ್ತಿದ್ದಾರೆ.ಈ ಕುರಿತು ಮಾತನಾಡಿರುವ ಅವರು, ‘ನನ್ನ ಅಂಗಡಿಯಲ್ಲಿ ಟೊಮ್ಯಾಟೋಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಟೊಮ್ಯಾಟೋ 160 ರೂ. ಕೆಜಿ ಗೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರ ಅಜಯ್ ಫೌಜಿ ಪಿಟಿಐಗೆ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಸೈಬರ್ ಕಳ್ಳರ ಕರಾಮತ್ತು!
ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರನ್ನು ವಂಚಿಸಿ 53 ಸಾವಿರ ರೂ. ಎಗರಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿಕೊಂಡು ನಾರಾಯಣ್ ಪ್ರಸಾದ್ ಅವರಿಗೆ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದಾಗ ನಾರಾಯಣ್ ಬಿಲ್ ಪಾವತಿಸಲು ಒಪ್ಪಿಕೊಂಡಿದ್ದಾರೆ.ನಂತರ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡಿ ಫಾಲೋ ಮಾಡಿ ಎಂದು ಅವರು ಹೇಳಿದಂತೆ ನಾರಾಯಣ್ ಲಿಂಕ್ ಕ್ಲಿಕ್ ಮಾಡಿ 1 ರೂ. ಕಳುಹಿಸಿದ್ದಾರೆ.ನಂತರ ತಮ್ಮ ಕೈಚಳಕ ತೋರಿಸಿದ ಸೈಬರ್ ಕಳ್ಳರು ಹಂತ ಹಂತವಾಗಿ ಅಕೌಂಟ್ನಿಂದ 53 ಸಾವಿರ ಎಗರಿಸಿದ್ದಾರೆ. ಸಂಬಂಧಪಟ್ಟ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಪ್ರಸಾದ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023