ಲೈವ್ ವಿಡಿಯೋದಲ್ಲೇ ವಿಷ ಸೇವಿಸಿ ಶಿಕ್ಷಕ ಆತ್ಮಹತ್ಯೆ
– ಹಣ ಡಬಲ್ ಮಾಡಿಕೊಡುವುದಾಗಿ ಮೋಸಕ್ಕೆ ಹತಾಶೆ
– ತೆಂಗಿನ ಕಾಯಿ ತಲೆ ಮೇಲೆ ಬಿದ್ದು ಬಾಲಕ ಸಾವು
– ಸರ್ಕಾರಿ ಕೆಲಸ ಕೊಡುವುದಾಗಿ ಲಕ್ಷ ಲಕ್ಷ ಗೋಲ್ ಮಾಲ್!
NAMMUR EXPRESS NEWS
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಲೈವ್ ವಿಡಿಯೋ ಮಾಡುತ್ತಲೇ ಕ್ರಿಮಿನಾಶಕ ಸೇವಿಸಿ ಖಾಸಗಿ ಶಾಲೆಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ರಾಜು ಬ್ಯಾಡಗಿ (45) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಶಾಲೆಯ ಶಿಕ್ಷಕ ಎಂದು ತಿಳಿದುಬಂದಿದೆ. ಇವರು ಕುಷ್ಟಗಿ ಪಟ್ಟಣದಲ್ಲಿರುವ ಬುತ್ತಿ ಬಸವೇಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ರಾಜು, ಕುಷ್ಟಗಿ ಸಾಯಿಬಾಬಾ ದೇವಸ್ಥಾನ ಹಿಂಭಾಗ ತನ್ನ ಕೆಲವು ಮಿತ್ರರಿಗೆ ಲೈವ್ ವಿಡಿಯೋ ಮಾಡಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದರು. ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಲೈವ್ ವಿಡಿಯೋದಲ್ಲಿ ಏನಿದೆ.?:
ಹಣ ಡಬಲ್ ಮಾಡಿಕೊಡುವುದಾಗಿ ಅನೇಕ ಜನರಿಂದ ಎಂಬಿಬಿ ಹೆಸರಿನ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಹಣ ಹೂಡಿಕೆ ಮಾಡಿದವರು ಹಣ ವಾಪಸ್ ಕೊಡಿಸುವಂತೆ ಕೇಳುತ್ತಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ರಾಜು ಬ್ಯಾಡಗಿ ಪದೇ ಪದೇ ಹಣ ಕೊಡಿಸಿ ಎಂದು ಪೀಡಿಸುತ್ತಿದ್ದಾರೆ. ಕಂಪನಿಯ 1 ರೂ. ಇಟ್ಟುಕೊಂಡಿಲ್ಲ. ಎಂಬಿಬಿ ಕಂಪನಿಗೆ ಹೂಡಿಕೆ ಮಾಡಿದ ಹಣ ಎಲ್ಲವೂ ಎಂಬಿಬಿ ಮಾಲೀಕ ಮಹೇಶ ಬಿರಾದಾರಗೆ ಮುಟ್ಟಿಸಿದ್ದೇನೆ ಎಂದು ಶಿಕ್ಷಕ ಹೇಳಿಕೊಂಡಿದ್ದಾರೆ.
ಶ್ರವಣಬೆಳಗೊಳದಲ್ಲಿ ತಲೆ ಮೇಲೆ ತೆಂಗಿನ ಕಾಯಿ, ಬಿದ್ದು ಸಾವು
ತೆಂಗಿನಕಾಯಿ ತಲೆ ಮೇಲೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (16) ಮೃತ ಬಾಲಕ. ಶ್ರವಣಬೆಳಗೊಳ ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ.
ಗುರುವಾರ ರಾತ್ರಿ ಸುರಿದ ಭಾರೀ ಮಳೆ- ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದವು. ಹೀಗಾಗಿ ಪ್ರಜ್ವಲ್ ಬೆಳಗ್ಗೆ ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ಈ ವೇಳೆ ಏಕಾಏಕಿ ತೆಂಗಿನಮರದಿಂದ ತೆಂಗಿನಕಾಯಿ ಬಾಲಕನ ಮೇಲೆ ಬಿದ್ದಿದೆ. ಪ್ರಜ್ವಲ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಪ್ರಜ್ವಲ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ನಕಲಿ ಸರ್ಕಾರಿ ಉದ್ಯೋಗ ನೀಡಿ ಲಕ್ಷ ಲಕ್ಷ ವಂಚನೆ
ಕೆಎಂಎಫ್ ಹೆಸರಿನಲ್ಲಿ ನಕಲಿ ಉದ್ಯೋಗವನ್ನು ನೀಡಿ, ತಿಂಗಳ ವೇತನವನ್ನೂ ನೀಡಿರುವ ಪ್ರಕರಣ ವರದಿಯಾಗಿದೆ. 2020-21ನೇ ಸಾಲಿನಲ್ಲಿ ಧಾರವಾಡದ ಕೆಎಂಎಫ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಗುರುನಾಥ್ ಜೋಶಿ ಎನ್ನುವ ವ್ಯಕ್ತಿಯಿಂದ ಕುಮಾರಸ್ವಾಮಿ ಎಂಬಾತನೂ ಸೇರಿದಂತೆ ವಂಚಕರು ಸುಮಾರು 20 ಲಕ್ಷ ರು. ಪಡೆದಿದ್ದಾರೆ. ಇದಿಷ್ಟೇ ಅಲ್ಲದೇ, ಸರಕಾರಿ ಕೆಲಸ ಕೊಡಿಸಿರುವ ಬಗ್ಗೆ ನಂಬಿಸಲು ಕೆಎಂಎಫ್ ಹೆಸರಲ್ಲಿ ನಕಲಿ ಇಮೇಲ್ ಐಡಿ ಮೂಲಕ ಆಫ ಲೆಟರ್ ರವಾನಿಸಿ ಹೊಣೆಗಾರಿಕೆಯನ್ನೂ ಸೂಚಿಸಿದ್ದಾರೆ. ಮಾತ್ರವಲ್ಲ, ಕಚೇರಿ ಕೆಲಸ ನಿಮಿತ್ತ ವಿವಿಧ ಊರುಗಳಿಗೆ ಹೋಗುವಂತೆ ಸೂಚನೆ ನೀಡಿ, ಅದಕ್ಕೆ ಟಿಎ-ಡಿಎ ಸಹ ನೀಡಿದ್ದಾರೆ. ಗುರುನಾಥ್ ಜತೆ ಈ ಸಂಬಂಧ ಸುಮಾರು 500ಕ್ಕೂ ಹೆಚ್ಚು ಬಾರಿ ಇಮೇಲ್ ಸಂವಹನ ನಡೆಸಿರುವ ದಾಖಲೆಗಳಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ನಂಬಿದ ಗುರುನಾಥ್, ಸುಮಾರು ಆರು ತಿಂಗಳ ಕಾಲ ವಂಚಕರು ಹೇಳಿದಂತೆ ಕೆಲಸ ಮಾಡಿದ್ದು, ಅದಕ್ಕಾಗಿ ಗುರುನಾಥ್ಗೆ 28 ಸಾವಿರ ರು. ವೇತನವನ್ನೂ ವಂಚಕರೇ ನೀಡಿದ್ದಾರೆ. ತಾಂತ್ರಿಕ ಕಾರಣದಿಂದ ಕೆಎಂಎಫ್ ಮೂಲಕ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಸಬೂಬು ಹೇಳಿ, ವೈಯಕ್ತಿಕವಾಗಿ ಹಣ ಪಾವತಿಸಿದ್ದಾರೆ. ಇದಾದ ಬಳಿಕ ಮದ್ದೂರು, ವಿಜಾಪುರ ಘಟಕಗಳಲ್ಲಿ ಕೆಲಸ ಖಾಲಿಯಿರುವುದಾಗಿ ಹೇಳಿದ ವಂಚಕರು, ಗುರುನಾಥ್ಗೆ ಅಭ್ಯರ್ಥಿಗಳನ್ನು ಕರೆತರಲು ಸೂಚನೆ ನೀಡಿದ್ದಾರೆ.
50 ಲಕ್ಷ ವಂಚನೆ:
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹೆಸರಲ್ಲಿ ಕುಮಾರಸ್ವಾಮಿ ಇಷ್ಟೆಲ್ಲ ವಂಚನೆ ನಡೆಸಿದ್ದು, ಇದನ್ನು ಅರಿಯದ ಗುರುನಾಥ್ ತಮ್ಮ ಸ್ನೇಹಿತರಿಗೂ ಕೆಲಸ ಆಫರ್ ನೀಡಿದ್ದಾರೆ. ಇದಕ್ಕಾಗಿ 10ಕ್ಕೂ ಹೆಚ್ಚು ಸ್ನೇಹಿತರು ಸುಮಾರು 50 ಲಕ್ಷ ರು.ಗಳನ್ನು ಗುರುನಾಥ್ಗೆ ನೀಡಿದ್ದು, ಅದನ್ನವರು ವಂಚಕರಿಗೆ ವರ್ಗಾಯಿಸಿದ್ದಾರೆ. ಬಳಿಕ 10 ಅಭ್ಯರ್ಥಿಗಳನ್ನು ಊರಿಂದೂರಿಗೆ ಅಲೆಸಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆ ಬಯಲಾಗಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023