ಬಸ್ ಚಾಲಕ ಮೊಬೈಲಲ್ಲಿ ಮಾತಾಡಂಗಿಲ್ಲ!
– ಶಿವಮೊಗ್ಗದಲ್ಲಿ 5000 ರೂ ದಂಡ ಹಾಕಿದ ಪೊಲೀಸರು
– ಬಿಸಿಯೂಟದಲ್ಲಿ ಹಲ್ಲಿ: 42 ವಿದ್ಯಾರ್ಥಿಗಳು ಅಸ್ವಸ್ಥ!
– ಶಾಲಾ ಬಸ್ ಹಾಯ್ದು ಬಾಲಕಿ ದುರ್ಮರಣ!
– ಬಸ್ಸಿನ ಕಿಟಕಿ ಒಡೆದ ಮಹಿಳೆಗೆ ದಂಡ!
NAMMUR EXPRESS NEWS
ಶಿವಮೊಗ್ಗ: ಖಾಸಗಿ ಬಸ್ ಚಾಲಕನೋರ್ವ ಮೊಬೈಲ್ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದಕ್ಕೆ ಶಿವಮೊಗ್ಗ ಸಂಚಾರಿ ಪೊಲೀಸರು ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಮೂಲಕ ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗ ಸಕ್ರೆಬೈಲ್ ನಿವಾಸಿ ಮನ್ಸೂರ್ ಅಲಿ ಎಂಬವರಿಗೆ ದಂಡ ವಿಧಿಸಲಾಗಿದೆ. ಮನ್ಸೂರ್ ಅವರು ಶಿವಮೊಗ್ಗದಿಂದ ಸಾಗರಕ್ಕೆ ಸಂಚರಿಸುವ ಖಾಸಗಿ ಬಸ್ನಲ್ಲಿ ಚಾಲಕನಾಗಿದ್ದಾರೆ. ಇವರು ಬಸ್ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪ್ರಯಾಣಿಕರೋರ್ವರು ಮೊಬೈಲ್ನಲ್ಲಿ ಸೆರೆ ಹಿಡಿದು ಶಿವಮೊಗ್ಗ ಸಂಚಾರಿ ಪೊಲೀಸರಿಗೆ ರವಾನಿಸಿದ್ದರು. ಈ ಬಗ್ಗೆ ಎಚ್ಚೆತ್ತ ಸಂಚಾರಿ ಪೊಲೀಸರು ಚಾಲಕನಿಗೆ 5 ಸಾವಿರ ರೂ. ದಂಡ ಹಾಕಿದ್ದಾರೆ.
ಬಸ್ಸಿನ ಗಾಜು ಒಡೆದು 5000 ರೂ ದಂಡ ಪಾವತಿಸಿದ ಮಹಿಳೆ!
ಕೊಪ್ಪಳ ಘಟಕದ ಸರ್ಕಾರಿ ಬಸ್ನ ಗಾಜಿಗೆ ಹಾನಿಯಾದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ನಿರ್ವಾಹಕರು ಪ್ರಯಾಣಿಕರ ಸಮೇತ ಬಸ್ನ್ನು ತಂದಿದ್ದರು. ಆದರೆ ಈ ವೇಳೆ ಡಿಪೋ ಮ್ಯಾನೇಜರ್ 5000 ರೂ ದಂಡ ಪಾವತಿ ಮಾಡುವಂತೆ ಮಹಿಳೆಯಲ್ಲಿ ಕೇಳಿದ್ದಾರೆ. ಇಲ್ಲವಾದರೆ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ತನ್ನ ತಪ್ಪಿನ ಅರಿವಾಗಿ ಪೊಲೀಸರಿಗೆ ಮನವಿ ಮಾಡಿ, ಕೊನೆಗೆ 5000 ದಂಡ ಪಾವತಿಸಿ ಅದೇ ಬಸ್ನಲ್ಲಿ ತೆರಳಿದ್ದರು.
ಚಾಲಕ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲು :
ಮಂಗಳೂರಿನಲ್ಲಿ ಬಸ್ ಅಪಘಾತದಿಂದ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಈ ಸಂಬಂಧ ಬಸ್ ಚಾಲಕ ಮತ್ತು ಪಾದಚಾರಿ ಮಹಿಳೆಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪಾದಚಾರಿ ಮಹಿಳೆಯೊಬ್ಬರು ತೌಡುಗೋಳಿ ಸಮೀಪದ ನರಿಂಗಾನದಲ್ಲಿ, ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ಗಮನಿಸದೇ ತನ್ನ ಪಾಡಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಖಾಸಗಿ ಬಸ್ ಬಂದಿದೆ. ಈ ವೇಳೆ ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಚಾಲಕ ಕೂಡಲೇ ಎಡಕ್ಕೆ ಬಸ್ ತಿರುಗಿಸುವ ಮೂಲಕ ಮಹಿಳೆಗೆ ಡಿಕ್ಕಿ ಆಗುವುದನ್ನು ತಪ್ಪಿಸಿದ್ದನು. ಬಳಿಕ ಅಲ್ಲಿದ್ದವರು ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಸಂಬಂಧ ಮಂಗಳೂರು ನಗರ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದೇ ರೀತಿ ಪಾದಚಾರಿ ಮಹಿಳೆಯ ನಿರ್ಲಕ್ಷ್ಯದ ನಡಿಗೆಗಾಗಿ ಆಕೆಯ ಮೇಲೂ ಸೆಕ್ಷನ್ 13 ಟ್ರಾಫಿಕ್ ಕಂಟ್ರೋಲ್ ರೂಲ್ಸ್ ಮತ್ತು ಸೆಕ್ಷನ್ 92ಜಿ ಕೆಪಿ ಆಕ್ಟ್ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿತ್ತು.
ಬಿಸಿಯೂಟದಲ್ಲಿ ಹಲ್ಲಿ: 42 ವಿದ್ಯಾರ್ಥಿಗಳು ಅಸ್ವಸ್ಥ
ಯಾದಗಿರಿ ಜಿಲ್ಲೆ ಕೆಂಭಾವಿ ಪಟ್ಟಣದ ಕನ್ಯಾ ಪ್ರೌಢ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಬಿಸಿಯೂಟ ಸೇವಿಸಿದ ಸುಮಾರು 42 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಯಲ್ಲಿ 260 ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಉಪ್ಪಿಟು ಸೇವಿಸಿದ್ದಾರೆ. ಇದರಲ್ಲಿ ಒಬ್ಬರಿಗೆ ಹಲ್ಲಿ ಕಾಣಿಸಿದೆ. ಇದರಿಂದ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಇಬ್ಬರು ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲು ದಾಖಲಾಗಿದ್ದರು. ಇದಾದ ನಂತರ ಹಲವು ವಿದ್ಯಾರ್ಥಿಗಳು ಚಿಕಿತ್ಸೆಗಾಗಿ ಬಂದಿದ್ದಾರೆ. ಆದರೆ, ಯಾರಿಗೂ ಪ್ರಾಣಾಪಾಯವಿಲ್ಲ’ ಎಂದು ಸುರಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜಾ ವೆಂಕಟಪ್ಪನಾಯಕ ತಿಳಿಸಿದರು.
“ಉಪ್ಪಿಟು ಸೇವಿಸಿದ ನಂತರ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಬಂದಿದ್ದಾರೆ. ಸದ್ಯ ಯಾವುದೇ ಅಪಾಯವಿಲ್ಲ’ ಎಂದು ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೌರೀಶ ಕುಲಕರ್ಣಿ ಮಾಹಿತಿ ನೀಡಿದರು.
‘ಬಿಸಿಯೂಟ ಸಿಬ್ಬಂದಿ ಸರಿಯಾದ ನಿರ್ವಹಣೆ ಮಾಡದೆ ಬಿಸಿಯೂಟ ತಯಾರಿಸಿದ್ದರಿಂದ ಈ ಘಟನೆ ಸಂಭವಿಸಿದೆ’ ಎಂದು ಪಾಲಕ ಮುರ್ತುಜಾ ಆರೋಪಿಸಿದರು
ಶಾಲಾ ಬಸ್ ಹಾಯ್ದು ಬಾಲಕಿ ಸಾವು!
ಖಾಸಗಿ ಶಾಲಾ ಬಸ್ ಹಾಯ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಗೋತಗಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗೋತಗಿ ಗ್ರಾಮದ ಚೈತ್ರಾ ಬಸವರಾಜ ಭಾವಿಕಟ್ಟಿ (3) ಮೃತ ಬಾಲಕಿ. ಇಳಕಲ್ ತಾಲ್ಲೂಕು ಹಿರೇಓತಗೇರಿ ಗ್ರಾಮದ ಜ್ಞಾನಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಬಸ್ ಗೋತಗಿಯಿಂದ ಮಕ್ಕಳನ್ನು ಕರೆದೊಯ್ಯಲು ಬಂದಾಗ ಈ ಘಟನೆ ಸಂಭವಿಸಿದೆ.
ತನ್ನ ಅಕ್ಕನನ್ನು ಅದೇ ಶಾಲಾ ಬಸ್ಗೆ ಹತ್ತಿಸಲು ಬಂದಿದ್ದ ಬಾಲಕಿ ಮನೆಗೆ ಮರಳುವಾಗ ಬಾಲಕಿ ಬಸ್ ಮುಂಭಾಗದಲ್ಲಿ ಇದ್ದುದನ್ನು ಗಮನಿಸದ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಮುಂದಿನ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಸ್ನ ಚಾಲಕ ಹಿರೇಓತಗೇರಿಯ ಪ್ರವೀಣಕುಮಾರ ಕಂದಕೂರು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023