ಬಾಲಕನ ಕೊಂದ ಮೊಸಳೆ ಹೊಡೆದು ಸಾಯಿಸಿದ ಜನ!
– 62ನೇ ವರ್ಷದಲ್ಲಿ ಮೂರು ಮಕ್ಕಳಿಗೆ ಅಪ್ಪನಾದ ಅಜ್ಜ
– ಬೆಂಗಳೂರಲ್ಲಿ ಬಿಎಂಟಿಸಿ ಬಸ್: ಇಬ್ಬರು ಸಾವು..!
– ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ!
NAMMUR EXPRESS NEWS
ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಘಟನೆ ಬೆಂಗಳೂರಲ್ಲಿ ನಡೆದಿದೆ.
ರಸ್ತೆ ದಾಟುತ್ತಿದ್ದ ಯುವಕರಿಬ್ಬರು ಮೃತಪಟ್ಟ ಘಟನೆ ಲಗ್ಗೆರೆಯ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿ ನಡೆದಿದೆ. ಮೃತಪಟ್ಟ ಓರ್ವ ಯುವಕನನ್ನು ಸುರೇಶ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಪತ್ತೆ ಆಗಿಲ್ಲ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕನ ಕೊಂದ ಮೊಸಳೆ!:
ಬಾಲಕನನ್ನು ಮೊಸಳೆ ಕೊಂದಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ಮೊಸಳೆಯನ್ನು ಹೊಡೆದು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್ ಎಂಬುವವರು ಇತ್ತೀಚೆಗೆ ಬೈಕ್ ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಲು ತಮ್ಮ ಕುಟುಂಬದೊಂದಿಗೆ ಗಂಗಾ ನದಿಯ ದಡಕ್ಕೆ ಬಂದಿದ್ದಾರೆ. ದಾಸ್ ಅವರ ಮಗ ಅಂಕಿತ್ ಕೂಡಾ ನೀರನ್ನು ತರಲು ಗಂಗಾನದಿಯ ದಡಕ್ಕೆ ಹೋಗಿದ್ದಾಗ ಮೊಸಳೆಯು ಅವನನ್ನು ನದಿಗೆ ಎಳೆದುಕೊಂಡು ಹೋಗಿದೆ.ಇದೇ ವೇಳೆ ಬಾಲಕ ಅಂಕಿತ್ ಕಿರುಚಾಡಿದ್ದನ್ನು ನೋಡಿದ ಕುಟುಂಬಸ್ಥರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಆವಾಗಲೇ ಬಾಲಕ ಮೃತಪಟ್ಟಿದ್ದ.
ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ!
ಮಾರಕಾಸ್ತ್ರದಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಲಿ ವಾಸಿ ಆಸಿಫ್ (25) ಹತ್ಯೆಯಾದವನು. ಜಬಿ (25) ಎಂಬಾತ ಕೊಲೆ ಮಾಡಿದವನು. ಇಲಿಯಾಸ್ ನಗರದ 100 ಅಡಿ ರಸ್ತೆಯಲ್ಲಿ ಬುಧವಾರ ರಾತ್ರಿ ಘಟನೆ ಸಂಭವಿಸಿದೆ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಅಪ್ಪನಾದ ಅಜ್ಜ: ಮೂವರು ಮಕ್ಕಳಿಗೆ ಜನ್ಮ ನೀಡಿದ ಪತ್ನಿ
ಯುವ ದಂಪತಿಗಳಿಗೆ ಮಕ್ಕಳಾಗುವುದೇ ಸವಾಲಿನ ಕೆಲಸವಾಗುತ್ತದೆ. ಆದರೆ ಇಲ್ಲೊಬ್ಬ ವೃದ್ಧ ತನ್ನ ಕಡೇಗಾಲದಲ್ಲಿ ಜೀವನ ಸವೆಸುವ ಸಮಯದಲ್ಲಿ ಮೂರು ಮಕ್ಕಳಿಗೆ ತಂದೆಯಾಗಿದ್ದಾರೆ.62ನೇ ವಯಸ್ಸಿನಲ್ಲಿ ಏಕಕಾಲದಲ್ಲಿ ಒಂದಲ್ಲ, ಎರಡಲ್ಲ ಮೂವರು ಮಕ್ಕಳಿಗೆ ಆ ಅಜ್ಜ ತಂದೆಯಾಗಿದ್ದಾರೆ. ಆತನ 2ನೇ ಪತ್ನಿ ಜೂನ್ 13 ರಂದು ತ್ರಿಮೂರ್ತಿಗಳಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ. ಜಿಲ್ಲೆಯ ಉಚ್ಚೆಹ್ರಾ ಬ್ಲಾಕ್ನ ಅತರ್ವೇಡಿಯಾ ಖುರ್ದ್ ಗ್ರಾಮದ ನಿವಾಸಿ ಗೋವಿಂದ್ ಕುಶ್ವಾಹ್ (62 ವರ್ಷ) ಅವರ 2ನೇ ಪತ್ನಿ ಹೀರಾಬಾಯಿ ಕುಶ್ವಾಹ್(30 ವರ್ಷ) ದಂಪತಿ 3 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೋಮವಾರ ರಾತ್ರಿ ವೃದ್ಧನ ಪತ್ನಿ ಹೀರಾಬಾಯಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿಯ ವೈದ್ಯರು ಗರ್ಭಿಣಿಯನ್ನು ಹೆರಿಗೆ ವಾರ್ಡ್ಗೆ ಸೇರಿಸಿದ್ದಾರೆ. ಪ್ರಸವ ನೋವು ಹೆಚ್ಚಾದ ಕಾರಣ, ಹೀರಾಬಾಯಿ ಅವರಿಗೆ ಆಪರೇಷನ್ ನಡೆಸಿದ್ದಾರೆ. ಈ ವೇಳೆ ಮೂವರು ಮಕ್ಕಳು ಜನಿಸಿವೆ.