ಕಳೆ ನಾಶಕ ಮುಟ್ಟಿ ಜೀವ ಕಳೆದುಕೊಂಡ ಅಧಿಕಾರಿ!
– ಕುಮುಟಾ ಮೂಲದ ಅರಣ್ಯಾಧಿಕಾರಿ ಸಾವು
– ಬೆತ್ತಲೆಯಾಗಿ ಮೊಬೈಲ್ ಟವರ್ ಏರಿ ಯುವಕನ ಹುಚ್ಚಾಟ.!
– ಶಿವಮೊಗ್ಗ ರೈಲಿಗೆ ಸಿಲುಕಿ ಯುವಕನ ಕಾಲು ತುಂಡು!
NAMMUR EXPRESS NEWS
ಸಾಗವಾನಿ ಮಡಿಗಳಿಗೆ (ಟೀಕ್ ಬಡ್) ಕಳೆನಾಶಕ ಹಾಕುವ ಸಂದರ್ಭದಲ್ಲಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ನೀರು ಸೇವಿಸಿದ ಕಾರಣ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಯೋಗೇಶ ನಾಯ್ಕ (33), ಶುಕ್ರವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ.
ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿದ್ದ ಅವರು 13 ವರ್ಷಗಳಿಂದ ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ, ವಿರ್ನೋಲಿ ವಲಯದ ಕುಳಗಿ ಶಾಖೆಯಲ್ಲಿದ್ದರು.
ಆರೇಳು ದಿನಗಳ ಹಿಂದೆ ಪ್ಯಾರಾಕ್ಯೂಟ್ ಎಂಬ ಕೀಟನಾಶಕವನ್ನು ಸಾಗವಾನಿ ಮಡಿಗಳಿಗೆ ಸಿಂಪಡಿಸುವ ಕೆಲಸ ಮಾಡುತ್ತಿರುವಾಗ ನೀರು ಕುಡಿದಿದ್ದಾರೆ. ತುಸು ಹೊತ್ತಿನಲ್ಲಿ ಹೊಟ್ಟೆನೋವು ಶುರುವಾಗಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಡಿಮೆಯಾಗದ ಕಾರಣ ಧಾರವಾಡದ ಎಸ್ಡಿಎಂಗೆ ದಾಖಲಾಗಿದ್ದರು. ಅಲ್ಲಿ ಸಮಗ್ರ ತಪಾಸಣೆ ನಡೆಸಿದಾಗ ಲಿವರ್, ಲಂಗ್ಸ್, ಕಿಡ್ನಿಗೆ ಹಾನಿಯಾಗಿರುವ ಮಾಹಿತಿ ತಿಳಿಯಿತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವೈದ್ಯರ ಪ್ರಕಾರ ಈ ಅಂಗಾಗಗಳ ವೈಶ್ಯಲದಿಂದ ಯೋಗೇಶ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ ಅಂಬಿಕಾನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ಕು ದಿನಗಳ ಹಿಂದೆಯೇ ಧಾರವಾಡದ ಆಸ್ಪತ್ರೆಗೆ ಹೋಗಿ ಯೋಗೇಶ ನಾಯ್ಕ ಹೇಳಿಕೆಯನ್ನು ಪಡೆದು ಬಂದಿದ್ದಾರೆ ಎಂಬ ಮಾಹಿತಿಯದೆ.
ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ!
ಕಾಸರಗೋಡು ಬಳಿ ಬ್ಯಾಂಕ್ ಮ್ಯಾನೇಜರ್, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಮ್ಯಾನೇಜರ್ ಶೀನಾ (35), ಅವರ ಪತಿ ಸಬೀಶ್ (37), ಮಕ್ಕಳಾದ ಹರಿಗೋವಿಂದ್ (6), ಮತ್ತು ಶ್ರೀವರ್ಧನ್ (2.5) ಎಂದು ಗುರುತಿಸಲಾಗಿದೆ. ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಶೀನಾ ಕೆಲವು ದಿನಗಳ ಹಿಂದೆಯಷ್ಟೇ ಎಸ್ ಬಿಐಯ ಕಾಸರಗೋಡು ಶಾಖೆಗೆ ವರ್ಗಾವಣೆಗೊಂಡಿದ್ದರು.
ಸಬೀಶ್ ಹಾಗೂ ಶೀನಾ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳ ಮೃತದೇಹ ಕೆಳಗೆ ನೆಲದಲ್ಲಿ ಪತ್ತೆಯಾಗಿದೆ.
ಕುಕ್ಕೆಗೆ ಬಂದ ಮಹಿಳೆ ಕಾಡಲ್ಲಿ ಆತ್ಮಹತ್ಯೆ
ದೇವಸ್ಥಾನಕ್ಕೆಂದು ಬಂದ ಮಹಿಳೆಯೋರ್ವರು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬೆಂಗಳೂರಿನ ನೆಲಮಂಗಲ ನಿವಾಸಿ ಗಂಗ ಲಕ್ಷ್ಮಮ್ಮ (60) ಎಂದು ಗುರುತಿಸಲಾಗಿದೆ.
ಮಹಿಳೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸಮೀಪ ಇರುವ ದೇವರ ಗದ್ದೆ ಎಂಬ ಕಾಡು ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೆತ್ತಲೆಯಾಗಿ ಟವರ್ ಏರಿ ಯುವಕನ ಹುಚ್ಚಾಟ.!
ವಿಜಯಪುರ ಜಿಲ್ಲೆ ಸಿಂದಗ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮೊಬೈಲ್ ಟವರ್ ಮೇಲೆ ಹತ್ತಿ ಯುವಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.
ಯುವಕನೊಬ್ಬ ಏಕಾಏಕಿ ಟವರ್ ಏರಿ ಆತಂಕ ಮೂಡಿಸಿದ್ದಾನೆ. ಟವರ್ ತುದಿಯ ಮೇಲೆ ಹತ್ತಿ ಜೋತಾಡುತ್ತಿರೋ ಈತ ಯಾಕೆ ಟವರ್ ಏರಿದ ಅನ್ನೋದು ತಿಳಿದು ಬಂದಿಲ್ಲ.
ಇನ್ನೂ ಈತ ಬಟ್ಟೆ ಬಿಚ್ಚಿ ನಗ್ನವಾಗಿಯೇ ಟವರ್ ಹತ್ತಿದ್ದು, ಗ್ರಾಮಸ್ಥರಿಗೆ ಮುಜುಗರವನ್ನೂ ಉಂಟು ಮಾಡಿದ್ದಾನೆ.
ಟವರ್ ತುದಿಗೆ ಹತ್ತಿ ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಿದ್ದು, ಈತನನ್ನು ಕೆಳಗಿಳಿಸಲು ಗ್ರಾಮಸ್ಥರು ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಟವರ್ ಬಳಿಯೇ ಬಳಗಾನೂರು ಗ್ರಾಮದ ಜನರು ಹಾಗೂ ಆಲಮೇಲ ಪೊಲೀಸರು ಬೀಡು ಬಿಟ್ಟಿದ್ದಾರೆ.
ಶಿವಮೊಗ್ಗ ರೈಲಿಗೆ ಸಿಲುಕಿ ಯುವಕನ ಕಾಲು ತುಂಡು!
ಯಶವಂತಪುರ – ಶಿವಮೊಗ್ಗ ರೈಲಿಗೆ ಸಿಲುಕಿ ಯುವಕನೊಬ್ಬನ ಕಾಲು ತುಂಡಾಗಿದೆ. ಶಿವಮೊಗ್ಗದ ಮಹಾದೇವಿ ಟಾಕೀಸ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು ನಾಗರಾಜ್ ಎಂಬಾತನ ಬಲಗಾಲು ತುಂಡಾಗಿದೆ.
ಯಶವಂತಪುರ – ಶಿವಮೊಗ್ಗ ರೈಲಿನಲ್ಲಿ ನಾಗರಾಜ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ. ರೈಲು ಇಳಿಯುವಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲಿದ್ದ ಸ್ಥಳೀಯರು ನಾಗರಾಜನನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕಡೂರಿನಲ್ಲಿರುವ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದ ನಾಗರಾಜ್ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023