600 ಕ್ವಿಂಟಲ್ ಸೇತುವೆ ಕಬ್ಬಿಣವನ್ನೇ ಕದ್ದ ಕಳ್ಳರು!
– ಮಲಗಲು ಜಾಗ ಕೊಡದಕ್ಕೆ ಬಾಂಬ್ ಬೆದರಿಕೆ ಹಾಕಿದ!
– ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ.!
– ಪಂಚಾಯತ್ ಚುನಾವಣೆ ಘರ್ಷಣೆ: 16 ಸಾವು
NAMMUR EXPRESS NEWS
ಮುಂಬೈ: ಮುಂಬೈಯಲ್ಲಿ ಕೆಲ ಖದೀಮರು ಪಶ್ಚಿಮ ಹೊರ ವಲಯದಲ್ಲಿ ಚರಂಡಿ ಮೇಲೆ ಅಳವಡಿಸಿದ್ದ ಬರೋಬ್ಬರಿ 6 ಸಾವಿರ ಕೆಜಿಯ ಸೇತುವೆಯನ್ನೇ ಕದ್ದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
90 ಅಡಿ ಉದ್ದದ ಸೇತುವೆಯನ್ನು ಭಾರವಾದ ಪವರ್ ಕೇಬಲ್ಗಳನ್ನು ಸಾಗಿಸುವ ಉದ್ದೇಶದಿಂದ ಅಳವಡಿಸಲಾಗಿತ್ತು. ತಾತ್ಕಾಲಿಕವಾಗಿ ಅಳವಡಿಸಿದ್ದ ಈ ಸೇತುವೆಯನ್ನು ಕೆಲ ತಿಂಗಳ ಹಿಂದಷ್ಟೇ ಮತ್ತೊಂದು ಜಾಗಕ್ಕೆ ರವಾನಿಸಿ, ಮೂಲ ಜಾಗದಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದಕ್ಕಾಗೇ ಕಾದು ಕುಳಿತಿದ್ದ ಕಳ್ಳರು ಸ್ಥಳಾಂತರಿಸಿದ್ದ ಜಾಗದಿಂದಲೇ ಸೇತುವೆಯನ್ನು ಕದ್ದೊಯ್ದಿದ್ದು, ಜೂ.26ರಂದು ನಿರ್ಮಾಣ ಸಂಸ್ಥೆಯು ಸೇತುವೆ ಕಾಣೆಯಾಗಿರುವುದರ ಬಗ್ಗೆ ದೂರು ದಾಖಲಿಸಿತ್ತು.
ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸೇತುವೆ ಸಾಗಿಸಿದ ವಾಹನದ ನಂಬರ್ ಪತ್ತೆಹಚ್ಚಿ, ಬಳಿಕ ಖದೀಮರನ್ನು ಬಂಧಿಸಿರುವುದಾಗಿ ಬಂಗೂರ್ ನಗರ ಪೊಲೀಸರು ತಿಳಿಸಿದ್ದಾರೆ.
ಹುಸಿ ಬಾಂಬ್ ಕರೆ: ಭಿಕ್ಷುಕನ ಬಂಧನ!
ಬೆಂಗಳೂರಿನ ಶಿವಾಜಿನಗರ ಮಸೀದಿಯಲ್ಲಿ ಬಾಂಬ್ ಇಟ್ಟು ಸ್ಫೋಟಿಸುವ ಸಂಚಿನ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ್ದಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ(37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಉಸ್ಮಾನಾಬಾದ್ ನಿವಾಸಿಯಾದ ಸ್ಯೆಯದ್ ಖಾಜಿ ಅವಿವಾಹಿತನಾಗಿದ್ದು, ದೇಶದ ಹಲವು ನಗರಗಳಲ್ಲಿ ಸುತ್ತಾಟ ನಡೆಸಿ ಭಿಕ್ಷಾಟನೆ ಮಾಡುತ್ತಿದ್ದ. ಮಸೀದಿಗಳ ಬಳಿ ಆಶ್ರಯ ಪಡೆದು ಅಲ್ಲಿಯೇ ಮಲಗುತ್ತಿದ್ದ. ಜು.1ರಂದು ನಗರಕ್ಕೆ ಆಗಮಿಸಿ ಶಿವಾಜಿನಗರ ಮಸೀದಿ ಬಳಿ ತೆರಳಿದ್ದ, ರಾತ್ರಿ ವೇಳೆ ಅಲ್ಲಿಯೇ ಉಳಿದುಕೊಳ್ಳಲು ಕೇಳಿದ್ದ. ಮಸೀದಿಯಲ್ಲಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ, ಇತರರಿಗೆ ಅವಕಾಶ ಎಲ್ಲವೆಂದು ಹೇಳಿ ಆತನನ್ನು ಅಲ್ಲಿಂದ ಕಳುಹಿಸಲಾಗಿತ್ತು.
ಮಸೀದಿಯಲ್ಲಿ ಮಲಗಲು ಅವಕಾಶ ನೀಡದ ಸಿಟ್ಟಿಗೆ ಜು. 5ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮೊಬೈಲ್ ನಿಂದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ”ಮಸೀದಿಯಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಕೆಲವರು ಸಂಚು ರೂಪಿಸಿದ್ದಾರೆ” ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಸೀದಿ ಶೋಧನೆ ಬಳಿಕ ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತಪಟ್ಟಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಥೆ ಬಂದಿದ್ದ ಮೊಬೈಲ್ನ ನಂಬರ್ ನಿಂದ ಚುರುಕುಗೊಳಿಸಿದರು. ಆಗ ವ್ಯಕ್ತಿಯೊಬ್ಬ ಮಸೀದಿ ಬಳಿ ಬಂದಿದ್ದ ಮಾಹಿತಿ ಸಿಕ್ಕಿತ್ತು. ಮೊಬೈಲ್ ಸಂಖ್ಯೆಯ ಸುಳಿವಿನಿಂದ ಆರೋಪಿಯು ಕರ್ನೂಲ್ನ ಬಸ್ನಲ್ಲಿ ಸಂಚರಿಸುತ್ತಿರುವುದು ಗೊತ್ತಾಗಿದೆ. ತಕ್ಷಣ ವಿಶೇಷ ತಂಡವೊಂದು ಕರ್ನೂಲ್ ಗೆ ತೆರಳಿತ್ತು. ಆದರೆ, ಅಷ್ಟರಲ್ಲಾಗಲೇ ಆರೋಪಿ ಸೈಯದ್ ಖಾಜಿ, ಮೆಹಬೂಬ್ ನಗರ ತಲುಪಿದ್ದ, ಅಂತಿಮವಾಗಿ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿ ಕರೆತರಲಾಗಿದೆ.
ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ.!
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿರುವ ವೇಳೆಯಲ್ಲಿ ಜು.6 ರ ಸಂಜೆಗೆ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಶೋಧ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ.
ಶೋಧ ಕಾರ್ಯ ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡರರೂ ಕಾರ್ಮಿಕನ ಸುಳಿವು ಲಭ್ಯವಾಗಿರಲಿಲ್ಲ. ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳ ತಂಡದ ಸುಮಾರು 15-20 ಮಂದಿ ಆಗಮಿಸಿ ಮೆಷಿನ್ ಬೋಟ್ ಬಳಸಿ ಹುಡುಕಾಟ ನಡೆಸಿದ್ದರು. ಸ್ಥಳೀಯ ಮುಳುಗು ತಜ್ಞರು ಆಗಮಿಸಿ ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಿದರು. ಸ್ಥಳಕ್ಕೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಕುಮಾರ್ ಭೇಟಿ ನೀಡಿದ್ದರು. ಸದ್ಯ ನೀರುಪಾಲಾಗಿದ್ದ ವ್ಯಕ್ತಿಯ ಮೃತ ದೇಹ ಸುಮಾರು ದೂರದಲ್ಲಿ ಪತ್ತೆಯಾಗಿದೆ. ನೀರುಪಾಲಾದ ವ್ಯಕ್ತಿಯನ್ನು ಕಾಸರಗೋಡು ಮೂಲದ ನಾರಾಯಣ ಎನ್ನಲಾಗಿದೆ.
ಪಶ್ಚಿಮ ಬಂಗಾಳ ಚುನಾವಣೆ ವೇಳೆ ಹಿಂಸಾಚಾರ; ಸಾವಿನ ಸಂಖ್ಯೆ 16ಕ್ಕೆ ಏರಿಕೆ
ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ ಎಂದು ತಿಳಿದು ಬಂದಿದೆ.
ಜೂನ್ 8ಕ್ಕೆ ಪಂಚಾಯಿತಿ ಚುನಾವಣೆ ಘೋಷಣೆಯಾದ ಬಳಿಕ 19 ಮಂದಿ ಸಾವನ್ನಪ್ಪಿದ್ದು, ಚುನಾವಣೆಯ ವೇಳೆ 16 ಮಂದಿ ಮೃತಪಟ್ಟು ಚುನಾವಣಾ ಪ್ರಕ್ರಿಯೆ ಮುಕ್ತಾಯದ ವೇಳೆಗೆ ಒಟ್ಟು ಬಲಿಯಾವರ ಸಂಖ್ಯೆ 35ಕ್ಕೇರಿದೆ. ಮುರ್ಶಿದಾಬಾದ್ ಹಾಗೂ ಉತ್ತರ ಮುರ್ಶಿದಾಬಾದ್ ನ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದು, ಮುರ್ಶಿದಾಬಾದ್ ಜಿಲ್ಲೆಯೊಂದರಲ್ಲೇ ಐದು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಉಳಿದಂತೆ ಕೂಚ್ಬೆಹಾರ್, ಉತ್ತರ ದಿಂಗಜ್ಪುರ ಹಾಗೂ ಮಾಲ್ಡಾದಲ್ಲಿ ಕ್ರಮವಾಗಿ ಮೂರು, ನಾಲ್ಕು ಹಾಗೂ ಒಬ್ಬರು ಬಲಿಯಾಗಿದ್ದಾರೆ. ಇನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಟ್ಟು ಒಂಬತ್ತು ಮಂದಿ ಗಲಭೆಗಳಲ್ಲಿ ಮೃತಪಟ್ಟಿದ್ದು, ಕಾಂಗ್ರೆಸ್ ಪಕ್ಷದ ಮೂವರು, ಬಿಜೆಪಿ ಹಾಗೂ ಸಿಪಿಎಂನ ತಲಾ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023