ನಾಲ್ವರು ಉಗ್ರರ ಹೊಡೆದು ಉರುಳಿಸಿದ ಯೋಧರು!
– ಪೂಂಚ್ನ ಸಿಂಧ್ರ ಪ್ರದೇಶದಲ್ಲಿ ನಡೆದ ಘಟನೆ
– ಮೈಸೂರಲ್ಲಿ ಅಪಘಾತಕ್ಕೆ ಮೂವರು ಬಲಿ!
– ಕಾಪು: ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!
NAMMUR EXPRESS NEWS
ಸಿಂಧ್ರ: ಭಾರತದ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿರುವ ಘಟನೆ ಪೂಂಚ್ನ ಸಿಂಧ್ಯಾ ಪ್ರದೇಶದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ 11:30ರ ಸುಮಾರಿಗೆ ಭದ್ರತಾ ಪಡೆಗಳ ನಡುವೆ ಮೊದಲ ಸುತ್ತಿನ ಎನ್ಕೌಂಟರ್ ನಡೆದಿದ್ದು, ನಂತರ ಈ ಭಾಗದಲ್ಲಿ ಡ್ರೋನ್ ಕಣ್ಣಾವಲು ಇರಿಸಲಾಗಿತ್ತು ಎನ್ನಲಾಗಿದೆ.
ಇನ್ನು ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಮುಂಜಾನೆ ಎನ್ಕೌಂಟರ್ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಸೇರಿತ್ತು.
ಮೈಸೂರಲ್ಲಿ ಅಪಘಾತಕ್ಕೆ ಮೂವರು ಬಲಿ!
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ಸಮೀಪ ಕಾರ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರು ಪಿರಿಯಾಪಟ್ಟಣದ ಟ್ಯಾಂಕ್ ಬಡಾವಣೆ ನಿವಾಸಿಗಳಾದ ಮುದಸೀರ್ (35), ಮುಜಾಹಿದ್ (25) ಹಾಗೂ ಅಹಮ್ಮದ್ ಪಾಷ ಅಲಿಯಾಸ್ ಬಾಜಿ (46) ಎಂದು ತಿಳಿದುಬಂದಿದೆ.
ಎಲ್ಲರೂ ಚಾಲಕ ವೃತ್ತಿ ಮಾಡುತ್ತಿದ್ದು, ಕ್ಯಾಂಟರ್ ವಾಹನಗಳನ್ನು ತಂದು ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಮುಂಜಾನೆ 4.30ರ ವೇಳೆಗೆ ವೇಗವಾಗಿ ಬಂದ ಕಾರು ಚಾಲಕ ಮುಂದೆ ನಿಂತಿದ್ದ ಟ್ರ್ಯಾಕ್ಟರ್ ಅನ್ನು ಗಮನಿಸದೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!
ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಕೊನೆಗೊಂಡಿರುವ ಘಟನೆ ಉಡುಪಿ ಜಿಲ್ಲೆ ಕಾಪುವಿನ ಕಟಪಾಡಿ ಪೇಟೆಯಲ್ಲಿ ಜು.17ರಂದು ಸಂಜೆ ನಡೆದಿದೆ. ಮೃತರನ್ನು ಒರಿಸ್ಸಾ ಮೂಲದ ಕಾರ್ಮಿಕ ಗಣೇಶ್(50) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಟಪಾಡಿ -ಶಿರ್ವ ರಸ್ತೆಯಲ್ಲಿರುವ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಇವರಿಬ್ಬರ ಮಧ್ಯೆ ಕೆಲಸದ ವಿಚಾರವಾಗಿ ನಡೆದ ಹೊಡೆದಾಟದಲ್ಲಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರ ಕಾರ್ಮಿಕರು ಗಣೇಶ್ನನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಗಣೇಶ್ ಮೃತಪಟ್ಟರೆಂದು ತಿಳಿದುಬಂದಿದೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023