- ಕಸ್ತೂರಿ ರಂಗನ್ ವರದಿ ವಿರುದ್ಧ ಪಾದಯಾತ್ರೆ
- ಮಂಜುನಾಥ ಗೌಡರ ಎರಡನೇ ಇನ್ನಿಂಗ್ಸ್ ಶುರು!?
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿಯನ್ನು ಅಸಮರ್ಪಕವಾಗಿ ಜಾರಿ ಮಾಡುವ ಮೂಲಕ ಮಲೆನಾಡಿನ ಜನರ ಬದುಕಿನ ಮೇಲೆ ಬರೆ ಎಳೆಯಲು ಹೊರಟಿರುವ ಸರ್ಕಾರಗಳ ವಿರುದ್ಧ ಇದೀಗ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪಾದಯಾತ್ರೆ ಹೋರಾಟಕ್ಕೆ ಮುಂದಾಗಿದೆ.
ಸಹಕಾರಿ ನಾಯಕ ಡಾ.ಆರ್.ಎಂ.ಮಂಜುನಾಥ ಗೌಡರ ನಾಯಕತ್ವದಲ್ಲಿ ನ.7ರ ಬೆಳಗ್ಗೆ 8ರಿಂದ ಪಾದಯಾತ್ರೆ ಬಿದರಗೋಡು ಶ್ರೀರಾಮ ಮಂದಿರದಿಂದ ಶುರುವಾಗಲಿದೆ. ನ.8 ಮತ್ತು 9ರಂದು ಪಾದಯಾತ್ರೆ ನಡೆದು ನ.9ರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ.
ಪಾದಯಾತ್ರೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಂಜುನಾಥ ಗೌಡ, 2018ರಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ ಶಾಂತವೇರಿ ಗೋಪಾಲ ಗೌಡರ ಊರಿಂದ ಪಾದಯಾತ್ರೆ ಮಾಡಿದ್ದೇವೆ. ಕಸ್ತೂರಿ ರಂಗನ್ ವರದಿ ವಿರುದ್ದ ಕೇರಳ ಮಾದರಿ ನಿಯಮ ಜಾರಿ ಹೋರಾಟ, ಎಸಿಎಫ್ ಕಚೇರಿ ಎದುರು ಹೋರಾಟ ಮಾಡಿದ್ದೇವೆ. ಎಲ್ಲೆಡೆ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ದೂರಿದರು.
ಕಸ್ತೂರಿ ರಂಗನ್ ವರದಿ ಆಘಾತಕಾರಿ. ಮಲ್ಟಿ ನ್ಯಾಷನಲ್ ಕಂಪನಿ ಒತ್ತಡದಿಂದ ರೈತರನ್ನು, ಬಗರ್ ಹುಕುಂ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಯಾವ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ವರದಿ ತಿದ್ದುಪಡಿ ಆಗಿಲ್ಲ. ಕೇರಳ ಮಾದರಿ ಆಗಬೇಕು. ಯಾವ ರೈತರಿಗೂ ತೊಂದರೆ ಆಗಬಾರದು. ರಾಜ್ಯದ ಜನತೆಗೆ ತೊಂದರೆ ಆಗಿದೆ,ಪಕ್ಷಾತೀತವಾಗಿ ಮಾಡಬೇಕೆಂದು ಈ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಪ್ರಮುಖರು, ರೈತರ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಹೋರಾಟ ಸರ್ಕಾರದ ವಿರೋಧಿ ಅಲ್ಲ, ಯೋಜನೆ ಹಾನಿ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಕೊಡುವುದಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಲಿದ್ದಾರೆ. ಯುವ ನಾಯಕ ಮಧು ಬಂಗಾರಪ್ಪ, ಹಿರಿಯ ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಯೋಜನೆ ಬಗ್ಗೆ ಗೋಷ್ಠಿಗಳನ್ನು ಕೂಡ ಆಯೋಜನೆ ಮಾಡಲಾಗುವುದು. ಇದು ಗಿಮಿಕ್ ಪಾದಯಾತ್ರೆ ಅಲ್ಲ, ನ್ಯಾಯಯುತ ಹೋರಾಟ ಎಂದು ಅವರು ಹೇಳಿದರು.
ಶೆಟ್ಟಿಹಳ್ಳಿ, ಶರಾವತಿ ಸೇರಿ ಅನೇಕ ಕಡೆ ತೊಂದರೆ ಆಗಿದೆ. ಇನ್ನು ಮುಂದೆ ನಮ್ಮೂರು ಕೂಡ ಹೀಗೆ ಆಗಲಿದೆ. ಹಿರಿಯ ಹೋರಾಟಗಾರರು, ಯುವ ಜನತೆ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ವರದಿ ವಿರೋಧಿಸಿ ಜನವರಿಯಲ್ಲಿ ಹೊಸನಗರದ ನಿಟ್ಟೂರಿನಿಂದ ಒಂದು ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಸಾರ್ವಜನಿಕ ಹೋರಾಟಕ್ಕೆ ಧುಮುಕುತ್ತೇನೆ. ನಿರಂತರ ಹೋರಾಟ ಮಾಡುತ್ತೇನೆ. ಜನರ ಜತೆ ಇರುತ್ತೇನೆ. ಶಾಸಕರು, ಸಂಸದರ ದಪ್ಪ ಚರ್ಮಕ್ಕೆ ಮುಟ್ಟಲಿ ಎಂಬುದು ನಮ್ಮ ಉದ್ದೇಶ. ವರದಿ ತಿದ್ದುಪಡಿ ಆಗಲೇಬೇಕು. ಇದಕ್ಕೆ ನಾನು ಹೋರಾಟಕ್ಕೆ ಮುಂದಾಗಿದ್ದೇನೆ. ವರದಿಯ ವಿರೋಧ ಇಲ್ಲ. ಇರುವ ಅರಣ್ಯ ಉಳಿಸಿಕೊಂಡು ರೈತರ ಪರ ಇರೋಣ. ಮಲೆನಾಡು ಉಳಿಬೇಕು, ರೈತರು ಬದುಕಬೇಕು ಎಂದರು.
ಡಿಸಿಸಿ ಬ್ಯಾಂಕ್ ಬಿಟ್ಟು ಜನರ ಜತೆಗೆ ಸಾರ್ವಜನಿಕ ವೇದಿಕೆಗೆ ಬಂದಿದ್ದೇನೆ. ಇನ್ನು ಸಕ್ರಿಯವಾಗಿ ಜನರ ಜತೆ ಇರುತ್ತೇನೆ ಎಂದು ಗೌಡರು ಹೇಳಿದರು. ಜೆಡಿಎಸ್ ಪಕ್ಷದ ಅಧ್ಯಕ್ಷ ಸುಂದರೇಶ್, ಕೊಲ್ಲೂರಯ್ಯ, ರಾಮಕೃಷ್ಣ, ಸುಷ್ಮಾ ಸಂಜಯ್, ಹೆಬ್ಬುಲಿಗೆ ಉಮೇಶ್, ಇಲಿಯಾಸ್, ರಾಘವೇಂದ್ರ ಶೆಟ್ಟಿ, ಕಲಗೋಡು ರತ್ನಾಕರ್, ಜಿನಾ ವಿಕ್ಟರ್, ಮಟ್ಟಿನಮನೆ ರಾಮಚಂದ್ರ, ರಫೀಕ್, ಶಿವು, ನಾಗರಾಜ್ ಪೂಜಾರಿ, ಬಿ. ಟಿ. ಬಸವರಾಜ್, ವಿಕ್ರಂ ಶೆಟ್ಟಿ, ಅರುಣ್ ಆರಗ ಇತರರು ಇದ್ದರು.