- ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ವಿಧಿವಶ
- ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ನಾಯಕ
ನವ ದೆಹಲಿ: ರಾಜ್ಯ ಸಭಾ ಸದಸ್ಯ, ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ನಾಯಕ, ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್(71) ಬುಧವಾರ ವಿಧಿವಶರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಅವರು ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಸೋನಿಯಾ ಗಾಂಧಿ ಆಪ್ತರಲ್ಲಿ ಅಹ್ಮದ್ ಪಟೇಲ್ ಅವರೂ ಕೂಡ ಒಬ್ಬರಾಗಿದ್ದರು.
ಕರೋನಾ ಸೋಂಕು ಕಾರಣ ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ತಗುಲಿದ ಕುರಿತು ಅಕ್ಟೋಬರ್ 1ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಖಚಿತಪಡಿಸಿದ್ದರು. ಅಲ್ಲದೆ ಹೋಮ್ ಐಸೋಲೇಟ್ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಪಟೇಲ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಖಜಾಂಚಿಯಾಗಿದ್ದ ಪಟೇಲ್ ಹಿರಿಯ ನಾಯಕರು ಮತ್ತು ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಸಂತಾಪ ಸೂಚಿಸಿದೆ.
ಮೋದಿ ಸಂತಾಪ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.