ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಡಿಮ್ಯಾಂಡ್!
- ರಾಜ್ಯದಾದ್ಯಂತ ಶಕ್ತಿ ಯೋಜನೆ ಶುರು: ಬಸ್ಸುಗಳು ರಶ್
- ಪ್ರತಿ ತಾಲೂಕು, ಜಿಲ್ಲೆಯಲ್ಲಿ ಅಧಿಕೃತ ಚಾಲನೆ
- ಆಫೀಸ್ಗೂ ಫ್ರೀ, ಮಾರ್ಕೆಟ್ಗೂ ಫ್ರೀ, ಫ್ಯಾಕ್ಟರಿಗೂ ಫ್ರೀ..!
ಮುಖ್ಯಮಂತ್ರಿ ಸಿದ್ದರಾಮಯ್ಯ “ಶಕ್ತಿ” ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಗೆ ಮುನ್ನುಡಿ ಬರೆದಿದ್ದಾರೆ.
ಜೂನ್ 11ರಂದು ರಾಜ್ಯದಾದ್ಯಂತ ಶಕ್ತಿಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಸ್ಮಾರ್ಟ್ ಕಾರ್ಡ್ಗಳನ್ನು ಐದು ಮಹಿಳೆಯರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಮೊದಲ ಹಂತದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಏಕಕಾಲದಲ್ಲಿ ರಾಜ್ಯದಾದ್ಯಂತ ಯೋಜನೆಗೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಕೇಂದ್ರಗಳಲ್ಲಿ ಶಾಸಕರು ಚಾಲನೆ ನೀಡಿದ್ದಾರೆ.
41.8 ಲಕ್ಷ ಮಹಿಳೆಯರಿಗೆ ಅನುಕೂಲ!
ಉಚಿತ ಪ್ರಯಾಣ ಯೋಜನೆಯು ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಬಡ ಮತ್ತು ಕೆಳ ಮಧ್ಯಮ ವರ್ಗದ ದುಡಿಯುವ ಮಹಿಳೆಯರ ದಿನದ ಖರ್ಚಿನ ಹೊರೆಯನ್ನು ಇಳಿಸಿ, ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಹೊಸ ಭಾಷ್ಯ ಬರೆಯಿದೆ. ಉಳಿತಾಯವಾಗುವ ಪ್ರಯಾಣದ ವೆಚ್ಚ ಕುಟುಂಬದ ನಿರ್ವಹಣೆಗೆ ಬಳಕೆಯಾಗುವುದರಿಂದ ಮಹಿಳೆಯರಲ್ಲಿ ಸ್ವಾವಲಂಬನೆಯ ಭಾವ ಮೂಡಿಸಿದೆ.
ಜಾತಿ, ಮತ, ವರ್ಗಗಳ ಭೇದವಿಲ್ಲದೆ ವಿದ್ಯಾರ್ಥಿನಿಯೂ ಸೇರಿದಂತೆ ಎಲ್ಲ ಮಹಿಳೆಯರು ಈ ಸೌಲಭ್ಯ ಪಡೆಯಬಹುದಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಯೋಜನೆಯ ಅನುಕೂಲ ದೊರೆಯಲಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದ್ದು, 18,609 ಬಸ್ಗಳ ಸೇವೆಯು ಉಚಿತ ಪ್ರಯಾಣಕ್ಕೆ ಲಭ್ಯವಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಕೆ.ಎಸ್. ಆರ್.ಟಿ.ಸಿ, ಬಿಎಂಟಿಸಿ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ; ಹಾಗೂ ಎನ್.ಇ.ಕೆ.ಆರ್.ಟಿ.ಸಿ. ಬಸ್ ಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಗೆ ವಾರ್ಷಿಕವಾಗಿ 4051.56 ಕೋಟಿ ರೂ. ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ.
ಸರ್ಕಾರಿ ಬಸ್ಸು ಫುಲ್!
ಮಹಿಳೆಯರು ಸರ್ಕಾರಿ ಬಸ್ಗಳನ್ನೇ ಕಾದು ಕಾದು ಹತ್ತುತ್ತಿದ್ದಾರೆ. ಬೆಂಗಳೂರು BMTC ಬಸ್ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಮಹಿಳೆಯರು ನಿತ್ಯ ಕೆಲಸಕ್ಕೆ ಬರಲು ಖಾಸಗಿ ವಾಹನ ಬಳಸುತ್ತಿದ್ದರು, ಆದ್ರೆ ಈಗ ಫ್ರೀ ಘೋಷಣೆ ಬೆನ್ನಲ್ಲೇ ಸರ್ಕಾರಿ ಬಸ್ಗಳಲ್ಲೇ ಬರುತ್ತಿದ್ದಾರೆ. ಫ್ರೀ ಪ್ರಯಾಣ ಘೋಷಣೆ ಬೆನ್ನಲ್ಲೇ ಸರ್ಕಾರಿ ಬಸ್ಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಸಿಕ್ಕಿದೆ. ಉಚಿತ ಬಸ್ನಲ್ಲಿ ಓಡಾಡಿ ಜೋಶ್ ನಲ್ಲಿದ್ದಾರೆ. ಆಫೀಸ್ಗೂ ಫ್ರೀ, ಮಾರ್ಕೆಟ್ಗೂ ಫ್ರೀ, ಫ್ಯಾಕ್ಟರಿಗೂ ಫ್ರೀ.. ಸ್ಕೂಲ್ಗೆ ಮಗಳನ್ನು ಬಿಡೋಕೂ ಫ್ರೀ ಮತ್ತು ಗಂಡನ ಮನೆಗೂ ಫ್ರೀ.. ಅಪ್ಪನ ಮನೆಗೆ ಹೋಗೋಕೂ ಫ್ರೀ ಇದೆ. ಮಹಿಳೆಯರು ಖುಷಿ-ಖುಷಿಯಾಗಿ ಸರ್ಕಾರಿ ಬಸ್ ಹತ್ತುತ್ತಿದ್ದಾರೆ. ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಯೋಜನೆಯ ಮುಖ್ಯಾಂಶಗಳು :
ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾರಿ.
ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ಮಾತ್ರ ಪ್ರಯಾಣಕ್ಕೆ ಮಾನ್ಯ.
ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿನ ಬಸ್ಗಳಲ್ಲಿ ಸಂಚರಿಸಲು ಅವಕಾಶ.
ಬೆಂಗಳೂರು ಮಹಾನಗರ ಸಾರಿಗೆ ಮತ್ತು ಇತರ ನಗರ ಸಾರಿಗೆ ಬಸ್ಗಳಿಗೂ ಅನ್ವಯ.
ರಾಜ್ಯದೊಳಗಿನ ಪ್ರಯಾಣಕ್ಕೆ ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ಮಾತ್ರ ಸೀಮಿತ.
ಶಕ್ತಿ ಸ್ಮಾರ್ಟ್ ಕಾರ್ಡ್ಗಾಗಿʼ ಸೇವಾ ಸಿಂಧುವಿನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿ.
ಮೂರು ತಿಂಗಳವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ.