ಸಚಿವ ಜಮೀರ್ ವಿರುದ್ಧ ಕಾಂಗ್ರೇಸ್ನಲ್ಲೇ ಅಸಮಾಧಾನ..!!?
* ಎಐಸಿಸಿಗೆ ಪತ್ರ ಬರೆದರಾ ಕಾಂಗ್ರೇಸ್ನ ಶಾಸಕರು
* ಯಾಕೆ ಅಸಮಾಧಾನ,ಪತ್ರದಲ್ಲೇನಿದೆ
NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಸರ್ಕಾರದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಪಕ್ಷೀಯರೇ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.
ವಕ್ಫ್ ವಿಚಾರದಲ್ಲಿ ಜಮೀರ್ ಅವರ ಹೇಳಿಕೆಗಳು ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಜಮೀರ್ ಅಹ್ಮದ್ ಸ್ವಪಕ್ಷ, ಪ್ರತಿಕ್ಷಗಳ ಕೆಂಗಣ್ಣಿಗೆ ಗುರಿಯಾದಂತಾಗಿದೆ. ಒಂದೆಡೆ, ವಕ್ಫ್ ವಿಚಾರವಾಗಿ ಜಮೀರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದೀಗ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಸಮಾಧಾನ ಹೊರಹಾಕಿ ಪತ್ರ ಬರೆದಿದ್ದಾರೆ.
ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜಮೀರ್ ವಿರುದ್ಧ ಸಮರ ಸಾರಿದ್ದಾರೆ. ಸಿಎಂ ಸಿದ್ದರಾಮಯ್ಯಗಿಂತಲೂ ಹೆಚ್ಚು ಜಮೀರ್ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ.
ವಕ್ಫ್ ವಿಚಾರದಿಂದ ಚುನಾವಣೆ ಹೊಸ್ತಿಲಲ್ಲಿ ನಾವೇ ರಾಜಕೀಯ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಿನ ಬೆಳವಣಿಗೆಗಳಿಗೆಲ್ಲ ಜಮೀರ್ ಅಹ್ಮದ್ ಸೂಚನೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪತ್ರದಲ್ಲೇನಿದೆ…!!?
ಜಮೀರ್ ಅಹ್ಮದ್ ಪದೇ ಪದೇ ಸರ್ಕಾರಕ್ಕೆ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ. ಅನಗತ್ಯ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ, ಸರ್ಕಾರದ ವರ್ಚಸ್ಸಿಗೆ ತೀವ್ರ ಹಾನಿ ಮಾಡುತ್ತಿದ್ದಾರೆ.ಶಿಗ್ಗಾವಿ ಉಪಚುನಾವಣೆ ಅಭ್ಯರ್ಥಿ ವಿಷಯವಾಗಿಯೂ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದರು. ನಮ್ಮಲ್ಲಿ ಸಾಕಷ್ಟು ಅಲ್ಪಸಂಖ್ಯಾತ ಶಾಸಕರಿದ್ದಾರೆ, ಆದರೆ ಜಮೀರ್ ಮಾತ್ರ ವಿಶೇಷವಾಗಿ ನಡೆದುಕೊಳ್ಳುತ್ತಿದ್ದಾರೆ. ತಾವು ಮಧ್ಯಪ್ರವೇಶಿಸಿ ಜಮೀರ್ ಹೇಳಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದೆ ಪಕ್ಷ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ ಎಂದು ಖರ್ಗೆಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಶಾಸಕರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬರೆದಿರವುದು ಎನ್ನಲಾದ ಪತ್ರದ ಪ್ರತಿಯೊಂದು ಸದ್ಯ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ.