- ಡಿ.22, 27ರಂದು ಚುನಾವಣೆ
- ನೀತಿ ಸಂಹಿತೆ ಜಾರಿ: ಎಲ್ಲಾ ಕಡೆ ಕುತೂಹಲ
ಬೆಂಗಳೂರು: ರಾಜ್ಯಾದ್ಯಂತ ಇದೀಗ ಗ್ರಾಮ ಪಂಚಾಯತ್ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಡಿ.22 ಮತ್ತು ಡಿ.27 2 ಹಂತದಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದ 6025 ಗ್ರಾಪಂಗಳ ಪೈಕಿ ಬಹುತೇಕ ಪಂಚಾಯತಿಗಳ ಅವಧಿ ಕಳೆದ ಜೂನ್-ಜುಲೈನಲ್ಲಿ ಅಂತ್ಯಗೊಂಡಿತ್ತು. ಕರೋನಾ ಉಲ್ಬಣ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಂವಿಧಾನದತ್ತವಾದ ಅಧಿಕಾರ ಬಳಸಿ ’ಅಸಾಧಾರಣ ಸಂದರ್ಭ’ ವೆಂದು ಪರಿಗಣಿಸಿ ಚುನಾವಣೆಯನ್ನು ಮುಂದೂಡಿತ್ತು. ಚುನಾವಣೆಗೆ ಈಗ ಕೊನೆಗೂ ಕಾಲ ಕೂಡಿ ಬಂದಿದೆ.
ರಾಜ್ಯ ಚುನಾವಣಾ ಆಯೋಗ ಸೋಮವಾರ ಗ್ರಾಮ ಪಂಚಾಯತಿ ಚುನಾಣೆಯ ದಿನಾಂಕವನ್ನು ಘೋಷಿಸಿದೆ. ಇದೇ ಡಿಸೆಂಬರ್ 22 ಮತ್ತು 27ರಂದು ಕರ್ನಾಟಕದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಮೀಸಲಾತಿ ಪ್ರಕಟಗೊಂಡಿದೆ. ಎಲ್ಲಾ ಕಡೆ ರಾಜಕೀಯ ಜೋರಾಗಿದೆ.
ಡಿಸೆಂಬರ್ 7ರಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಮೊದಲ ಹಂತದಲ್ಲಿ ರಾಜ್ಯದ 113 ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಇನ್ನು ಉಳಿದ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ತಕ್ಷಣದಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಒಟ್ಟಾರೆ ಬಹುದಿನಗಳಿಂದ ಕಾಯುತ್ತಿದ್ದ ಅಂತಹ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.