ಗೃಹಲಕ್ಷ್ಮಿ ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಮಾಸಿಕವಾಗಿ 2 ಸಾವಿರ ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಮನೆಯ ಯಜಮಾನಿ ಯಾರು ಎಂಬುದನ್ನು ಸರ್ಕಾರ ನಿಗದಿಪಡಿಸಿಲ್ಲ. ಹಾಗಾಗಿ, ಮನೆಯವರೇ ಯಜಮಾನಿ ಯಾರೆಂದು ನಿರ್ಧರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೂ. 8ರಂದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಅರ್ಜಿಯನ್ನು ನಮೂದಿದಿಸಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬಹುದು. ಇಲ್ಲವೇ ಬೆಂಗಳೂರು ಒನ್ ಅಥವಾ ಬೆಂಗಳೂರು ಒನ್ ನಂಥ ಕಚೇರಿಗಳಲ್ಲಿ, ನಾಡ ಕಚೇರಿಗಳಲ್ಲಿ ಸಲ್ಲಿಸಬಹುದು.
ಮಹಿಳೆಯರ ಭಾರೀ ನಿರೀಕ್ಷೆಯ ಗೃಹ ಲಕ್ಷ್ಮಿ ಯೋಜನೆಯ ಮಾರ್ಗಸೂಚಿಗಳು ಬಿಡುಗಡೆಯಾದ ಬೆನ್ನಲ್ಲೇ ಆ ಯೋಜನೆಗೆ ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಕುಟುಂಬ ಕಲ್ಯಾಣ ಇಲಾಖೆಯು ಈ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮನೆಯ ಯಜಮಾನಿ ಯಾರೆಂದು ಘೋಷಿಸುವ, ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಇರುವ ಫೋನ್ ನಂಬರ್, ರೇಷನ್ ಕಾರ್ಡ್, ವೋಟರ್ ಐಡಿ ಕಾರ್ಡ್ ನಂಬರ್ ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಜೂ. 15ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜು. 15ರಂದು ಅರ್ಜಿ ಸಲ್ಲಿಕೆಗೆ ಕಡೇದಿನವಾಗಿದೆ.
ಅರ್ಜಿಯಲ್ಲಿವೆ ಒಟ್ಟು 11 ಹಂತಗಳು
ಅರ್ಜಿಯಲ್ಲಿ ಒಟ್ಟು 11 ವಿಭಾಗಗಳಿವೆ. ವಿಭಾಗ – 1 ರಲ್ಲಿ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಮನೆಯ ಯಜಮಾನಿಯ ಹೆಸರನ್ನು ಸ್ವಯಂ ಅರ್ಜಿದಾರರೇ ಘೋಷಿಸಬೇಕಿದೆ. ಅಲ್ಲಿ ಸೂಚಿಸಲಾಗಿರುವ ಮನೆಯ ಯಜಮಾನಿ ಹೆಸರು ಮತ್ತು ವಿಳಾಸ ಎಂಬ ಶೀರ್ಷಿಕೆಯ ಮುಂದೆ ಖಾಲಿ ಬಿಟ್ಟಿರುವ ಜಾಗದಲ್ಲಿ ಮನೆಯ ಯಜಮಾನಿಯ ಹೆಸರು ಹಾಗೂ ವಿಳಾಸವನ್ನು ಅರ್ಜಿದಾರರು ಬರೆಯಬೇಕು. ಆನಂತರ, ವಿಭಾಗ -1ರ a,b ಮತ್ತು c ಎಂಬಲ್ಲಿ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ, ಚುನಾವಣಾ ಗುರುತಿನ ಸಂಖ್ಯೆ ಹಾಗೂ ಪಡಿತರ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಿರುತ್ತದೆ.
ಪತಿಯ ಹೆಸರು ಇತ್ಯಾದಿ ವಿವರ
2ನೇ ವಿಭಾಗದಲ್ಲಿ ಪತಿಯ ಹೆಸರನ್ನು, ಆತನ ಆಧಾರ್ ಸಂಖ್ಯೆಯನ್ನು ಅದಕ್ಕಾಗಿ ನೀಡಲಾಗಿರುವ ಖಾಲಿ ಜಾಗದಲ್ಲಿ ಬರೆಯಬೇಕಿದೆ. ಆನಂತರ ಅಲ್ಲಿಯೇ ಕೆಳಗೆ ಇರುವ ಸಾಲಿನಲ್ಲಿ ಪತಿಯ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಆನಂತರ, ಅರ್ಜಿದಾರರು ತಮ್ಮ ಜಾತಿಯನ್ನು ನಮೂದಿಸಬೇಕು. ಅಂದರೆ, ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಹಾಗೂ ಇತರೆ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು ಅರ್ಜಿದಾರರು ಸೇರಸ್ಪಡುವ ಸಮುದಾಯದ ಮುಂದಿರುವ ಚೆಕ್ ಬಾಕ್ಸ್ ನಲ್ಲಿ ಟಿಕ್ ಮಾಡಲಾಗಿದೆ.
ಮೊಬೈಲ್ ಸಂಖ್ಯೆ ಇತ್ಯಾದಿ ನಮೂದು
ವಿಭಾಗ 6ರಲ್ಲಿ, ಇಲ್ಲಿ ಅರ್ಜಿದಾರರಿಗೆ ಎರಡು ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ, ಮೊದಲು ತಾವು ಬಳಸುತ್ತಿರುವ ಸಂಖ್ಯೆಯನ್ನು ನಮೂದಿಸಬೇಕು. ವಿಭಾಗ 6ರಲ್ಲಿ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಪತಿಯ ಮೊಬೈಲ್ ಸಂಖ್ಯೆ ಅಥವಾ ಮಕ್ಕಳ ಮೊಬೈಲ್ ಸಂಖ್ಯೆ ಅಥವಾ ಅರ್ಜಿದಾರರ ಬಳಸುತ್ತಿರಬಹುದಾದ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಬ್ಯಾಂಕ್ ವಿವರ, ದಾಖಲೆಗಳ ಜೆರಾಕ್ಸ್ ಪ್ರತಿಗಳ ಚೆಕ್ ಲಿಸ್ಟ್
8ನೇ ವಿಭಾಗದಲ್ಲಿ, ಅರ್ಜಿದಾರರ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಆ ಖಾತೆಯು ಇರುವ ಬ್ರಾಂಚ್ ನ ಐಎಫ್ಎಸ್ ಸಿ ಕೋಡ್ ನಮೂದಿಸಬೇಕು. ಆನಂತರ ಇದೇ ವಿಭಾಗದಲ್ಲಿ ಅರ್ಜಿಯ ಜೊತೆಗೆ ಯಾವ್ಯಾವ (ಎ) ವಿಭಾಗದಲ್ಲಿ ಮನೆಯ ಯಜಮಾನಿಯ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. (b) ಪತಿಗೆ ಸಂಬಂಧಿಸಿದ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಆ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದನ್ನು ಮರೆಯಬೇಡಿ. ಮನೆಯ ಯಜಮಾನಿಗೆ ಸಂಬಂಧಿಸಿದ ದಾಖಲೆಗಳಾಗಿ, ಆಧಾರ್ ಕಾರ್ಡ್, ವೋಟರ್ ಐಡಿ ಜೆರಾಕ್ಸ್ ಪ್ರತಿ, ಬ್ಯಾಂಕ್ ಬಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಪತಿಗೆ ಸಂಬಂಧಿಸಿದ ದಾಖಲೆಗಳಾಗಿ, ಪತಿಯ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಗಳನ್ನು ಸಲ್ಸಿಬೇಕು.
ಸ್ವಯಂ ಘೋಷಣೆ, ಸಹಿ ಅಥವಾ ಹೆಬ್ಬೆಟ್ಟು
ಅರ್ಜಿಯ ಕೆಳಭಾಗದಲ್ಲಿ ಸ್ವಯಂ ಘೋಷಣೆಗಾಗಿ ಜಾಗವನ್ನು ಬಿಡಲಾಗಿದೆ. ಅಲ್ಲಿ, ನಾನು, ನನ್ನ ಪತಿಯು ಆದಾಯ ತೆರಿಗೆ ಹಾಗೂ ಜಿಎಸ್ ಟಿ ಪಾವತಿದಾರರಾಗಿರುವುದಿಲ್ಲ ಎಂಬುದನ್ನು ಸ್ವಯಂ ದೃಢೀಕರಣ ಮಾಡಬೇಕಿರುತ್ತದೆ. ಇದು ತುಂಬಾನೆ ಮಹತ್ವದ ವಿಚಾರ. ಮಾಸಿಕ 2 ಸಾವಿರ ರೂ.ಗಳಿಗಾಗಿ ಇಲ್ಲಿ ತಪ್ಪು ಮಾಹಿತಿಯನ್ನು ನೀಡಿಲ್ಲ ಎಂಬುದನ್ನು ಈ ದೃಢೀಕರಣ ಖಾತ್ರಿ ಪಡಿಸುತ್ತದೆ. ಹಾಗಾಗಿ, ಸಹಿ ಮಾಡುವ ಮುನ್ನ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿಲ್ಲ ಎಂಬುದನ್ನು ನೀವು ಖಾತ್ರಿ ಪಡಿಸಿದಂತೆ. ಸ್ವಯಂ ಘೋಷಣೆಯ ಕೆಳಗಡೆ ಇರುವ ಎಡಭಾಗದಲ್ಲಿ ಅರ್ಜಿ ಭರ್ತಿ ಮಾಡಿದ ದಿನಾಂಕ, ಸ್ಥಳವನ್ನು ನಮೂದಿಸಬೇಕು. ಬಲಭಾಗದಲ್ಲಿ ಅರ್ಜಿದಾರರ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತನ್ನು ಹಾಕಲು ಸ್ಥಳಾವಕಾಶ ಕಲ್ಪಿಸಲಾಗಿದೆ.