- ರಾಜ್ಯ ರಾಜಕೀಯದಲ್ಲಿ ಸಂಚಲನ: ಸಚಿವ ಸ್ಥಾನಕ್ಕೆ ಪಟ್ಟು
ಬೆಂಗಳೂರು: ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ವಲಸೆ ಬಂದ ಮುಂಬೈ ಶಾಸಕರ ಟೀ ಮತ್ತೆ ಸಭೆ ಸೇರಿ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಖಾಸಗಿ ಹೋಟೆಲ್ವೊಂದರಲ್ಲಿ ಶುಕ್ರವಾರ ರಾತ್ರಿ ಈ ಸಭೆ ನಡೆದಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಊಟದ ಪಾರ್ಟಿ ಮಾಡಿದ್ದರು. ದೆಹಲಿ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿಯಲ್ಲಿರುವ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಠಳ್ಳಿ ಹೊರತುಪಡಿಸಿ ಉಳಿದ 13 ಮಂದಿಗೆ ಬುಲಾವ್ ಇತ್ತು. ಸಚಿವರಾದ ಆನಂದ್ ಸಿಂಗ್, ಕೆ.ಗೋಪಾಲಯ್ಯ, ನಾರಾಯಣಗೌಡ, ಶಿವರಾಂ ಹೆಬ್ಬಾರ್, ಬೈರತಿ ಬಸವರಾಜ, ಹಾಗೂ ಶಾಸಕರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ಭಾಗವಹಿಸಿದ್ದರು. ಇದೇ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕರೆದು ಬುದ್ಧಿ ಮಾತು ಹೇಳದಿದ್ದರೆ ಉತ್ತರ ಕೊಡಬೇಕಾಗುತ್ತದೆ ಎಂದು ರೆಬೆಲ್ ಶಾಸಕರು ಗುಟುರು ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಬಂದ 17 ಮಂದಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂಬ ಚರ್ಚೆ ನಡೆದಿದೆ. ಈ ನಡುವೆ ರಮೇಶ್ ಜಾರಕಿಹೊಳಿ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಥಾನ ಕಲ್ಪಿಸಲು ರಾಜಕೀಯ ಮಾಡುತ್ತಿದ್ದಾರೆ.