ಕರ್ನಾಟಕದಲ್ಲಿ ಮತ ಸಮರ ಶುರು!
– ಮೊದಲ ಹಂತದ ಚುನಾವಣೆಗೆ ಮಾ.28ರಂದು ‘ನಾಮಪತ್ರ’ ಸಲ್ಲಿಕೆ
– 14 ಲೋಕಸಭಾ ಕ್ಷೇತ್ರಗಳಲ್ಲಿ ಏ.26ಕ್ಕೆ ಮತದಾನ
– ಜೆಡಿಎಸ್ ಮೂರು ಸ್ಥಾನಗಳಿಗೆ ಟಿಕೆಟ್ ಫೈನಲ್
NAMMUR EXPRESS NEWS
ಬೆಂಗಳೂರು: ಲೋಕಸಭಾ ಸಮರದ ಕಾವು ರಾಜ್ಯದಲ್ಲಿ ಗುರುವಾರದಿಂದ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಧಿಸೂಚನೆ ಪ್ರಕಟವಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯು ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮಾರ್ಚ್ 28ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಹೇಗೆ?
ನಾಮಪತ್ರ ಸಲ್ಲಿಸಲು ಏಪ್ರಿಲ್, 04 ಕೊನೆಯ ದಿನವಾಗಿದೆ. ಏಪ್ರಿಲ್, 05 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏಪ್ರಿಲ್, 08 ರಂದು ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿದೆ. ಏಪ್ರಿಲ್, 26 ರಂದು ಮತದಾನ ನಡೆಯಲಿದ್ದು, ಜೂನ್, 04 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಮಂಡ್ಯದಿಂದ ಎಚ್ಡಿಕೆ ಕಣಕ್ಕೆ
– ಹಾಸನಕ್ಕೆ ಪ್ರಜ್ವಲ್ ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಟಿಕೆಟ್
ಲೋಕಸಭೆ ಚುನಾವಣೆಗೆ ಜೆಡಿಎಸ್ ಪಟ್ಟಿಯ ಕುತೂಹಲಕ್ಕೆ ತೆರೆ ಬಿದ್ದಿದೆ. ಪಕ್ಷದ ನಾಯಕರು, ಕಾರ್ಯಕರ್ತರ ಒತ್ತಡಕ್ಕೆ ಮಣಿದ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕ್ಕಿಳಿಯಲು ಒಪ್ಪಿದರೆ, ಹಾಸನದಿಂದ ಪ್ರಜ್ವಲ್ ರೇವಣ್ಣ, ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಟಿಕೆಟ್ ನೀಡುವ ವಿಚಾರವನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು.