70 ವರ್ಷದ ಸರ್ಕಾರಿ ಶಾಲೆ ಈಗ ಕಲರ್ ಫುಲ್!
– ರಿಪ್ಪನ್ ಪೇಟೆ ಪೊಲೀಸರಿಂದ ಶ್ರಮದಾನ
– ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ
– ಪೋಲಿಸ್ ಸಿಬ್ಬಂದಿ ಈ ನಡೆಗೆ ಜನರ ಪ್ರಶಂಸೆ
NAMMUR EXPRESS NEWS
ರಿಪ್ಪನ್ಪೇಟೆ : ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ಯವರು “ಸರ್ಕಾರಿ ಶಾಲೆ ಅಭಿಮಾನ – ಸುಣ್ಣ ಬಣ್ಣ ಅಭಿಯಾನ” ದಡಿಯಲ್ಲಿ ರಿಪ್ಪನಪೇಟೆ ಹಳೇ ಸಂತೆ ಮಾರುಕಟ್ಟೆ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಣ್ಣ ಬಣ್ಣದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಪಟ್ಟಣದ ಪೋಲೀಸರು ಶ್ರಮದಾನ ನೆರವೇರಿಸಿದ್ದಾರೆ. 70 ವರ್ಷ ಹಳೆಯ ಶಾಲೆ ಎಷ್ಟೊ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರೂ ಕಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಮಂಕಾಗಿತ್ತು.
ಪೋಸ್ಟ್ ಮ್ಯಾನ್ ನ್ಯೂಸ್ ಬಳಗವು ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವ ಅಭಿಯಾನವನ್ನು ಶುರುಮಾಡಿದ್ದು ಈ ಕಾರ್ಯಾಕ್ಕೆ ಪಟ್ಟಣದ ಪೊಲೀಸ್ ಪಿಎಸ್ಐ ಹಾಗೂ ಸಿಬ್ಬಂದಿಗಳು ಕೈ ಜೋಡಿಸಿದ್ದು ಶ್ಲಾಘನೀಯವಾಗಿದೆ. ಈ ಮೂಲಕ ಅರ್ಥಪೂರ್ಣವಾಗಿ ಗಣರಾಜ್ಯವನ್ನು ಆಚರಿಸಲಾಗಿದೆ. ಧ್ವಜಾರೋಹಣದ ನಂತರ ಸಮವಸ್ತ್ರ ಕಳಚಿಟ್ಟು, ಪೊರಕೆ ಗುದ್ದಲಿ ಹಿಡಿದು ಶಾಲಾವರಣದ ಒಳಗಿನ ಕಸಗಳನ್ನು ತೆಗೆದು ಸ್ವಚ್ಛ ಮಾಡಿದ್ದು, ದಾರಿ ಹೋಕರು, ಸಾರ್ವಜನಿಕರು ಇವರ ಕಾರ್ಯವೈಖರಿಯನ್ನು ಅಭಿನಂದಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ರಮದ ನಂತರ ಪೋಲಿಸ್ ಸಿಬ್ಬಂದಿಗಳಿಗೆ ಮಕ್ಕಳು ಉಪಹಾರ ನೀಡಿ ಸಂಭ್ರಮಿಸಿದರು.
ಶ್ರಮದಾನ ನೆರವೇರಿಸಿ ಮಾತನಾಡಿದ ಪಿಎಸ್ಐ ಪ್ರವೀಣ್ ಎಸ್ ಪಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಆ ಮೂಲಕ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲದೇ ಕೊರಗುತಿದ್ದು ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಜೀವನ ರೂಪಿಸಿಕೊಂಡಿರುವ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸುವ ಮೂಲಕ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂದು ಹೇಳಿದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಮಾತನಾಡಿ ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಅಭಿಯಾನದಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಸುಣ್ಣ ಬಣ್ಣ ಅಭಿಯಾನ ಪ್ರಶಂಸನೀಯಎಂದರು.
ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಮಾತನಾಡಿ, ರಿಪ್ಪನ್ಪೇಟೆ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಂಚಾಯತ್ ವತಿಯಿಂದ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತೇವೆ ಎಂದರು. ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪೋಸ್ಟ್ ಮ್ಯಾನ್ ಬಳಗದ ರಫ಼ಿ ರಿಪ್ಪನ್ಪೇಟೆ ,ಸಬಾಸ್ಟಿಯನ್ ತಾಲೂಕ್ ಕಸಾಪ ಅಧ್ಯಕ್ಷ ತ ಮ ನರಸಿಂಹ ,ಪೊಲೀಸ್ ಎಎಸ್ ಐ ಮಂಜಪ್ಪ , ಜ್ಯೋತಿ ಹಾಗೂ ಸಿಬ್ಬಂದಿಗಳು ಗ್ರಾಪಂ ಸದಸ್ಯರಾದ ಅಶ್ವಿನಿ ರವಿಶಂಕರ್ , ಮಂಜುಳಾ ಕೇತಾರ್ಜಿರಾವ್ , ದಾನಮ್ಮ , ದೀಪಾ ಸುಧೀರ್ , ಪ್ರಕಾಶ್ ಪಾಲೇಕರ್ , ಪೋಸ್ಟ್ ಮ್ಯಾನ್ ಬಳಗದ ಹಸನಬ್ಬ , ಲೇಖನ ಚಂದ್ರನಾಯ್ಕ್ , ರಾಘವೇಂದ್ರ ಇಂಜಿನಿಯರ್, ಶ್ರೀಧರ್ , ಎಸ್ ಡಿ ಎಂ ಸಿ ಅಧ್ಯಕ್ಷ ರಾಘವೇಂದ್ರ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಎಸ್ ಇದ್ದರು. ಶ್ರಮದಾನದ ನಂತರ ಪೋಸ್ಟ್ ಮ್ಯಾನ್ ನ್ಯೂಸ್ ಬಳಗಕ್ಕೆ ಠಾಣೆಯ ವತಿಯಿಂದ ಆರ್ಥಿಕ ಸಹಾಯವನ್ನು ಕೂಡ ಮಾಡಲಾಗಿದೆ.