ಶೃಂಗೇರಿ ಕೆಎಸ್ಆರ್ಟಿಸಿ ಡಿಪೋ ಜಾಗ ವಿವಾದದತ್ತ
* ಹಂದಿಗೋಡು ಪ್ರವೀಣ್ರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
NAMMUR EXPRESS NEWS
ಶೃಂಗೇರಿ: ಅಧಿಕಾರಿಗಳೇ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಶೃಂಗೇರಿ ತಾಲ್ಲೂಕು ಕಸಬಾ ಹೋಬಳಿ ವಿದ್ಯಾರಣ್ಯಪುರ ಗ್ರಾಮದ ಸರ್ವೆ ನಂ. 196 ರಲ್ಲಿರುವ 4 ಎಕರೆ 23 ಗುಂಟೆ ಸರ್ಕಾರಿ ಭೂಮಿಯನ್ನು ಸರ್ಕಾರಿ ಅಧಿಕಾರಿಗಳೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೆ.ಎಸ್.ಆರ್.ಟಿ.ಸಿ. ಡಿಪೋಗೆ ಮಂಜೂರು ಮಾಡಿದ್ದಾರೆ ಎಂದು ಶೃಂಗೇರಿ ತಾಲೂಕು ಹಂದಿಗೋಡು ವಾಸಿ ಹೆಚ್ .ಸಿ .ಪ್ರವೀಣ್ ದೂರು ನೀಡಿದ್ದಾರೆ.
ಏನಿದು ದೂರು?
ವಿದ್ಯಾರಣ್ಯಪುರ ಗ್ರಾಮದ ಸರ್ವೆ ನಂ.196 ರಲ್ಲಿರುವ 4ಎಕರೆ 23ಗುಂಟೆ ಸರ್ಕಾರಿ ಭೂಮಿ ಬೆಟ್ಟಗುಡ್ಡಗಳಿಂದ ಕೂಡಿ ದಟ್ಟ ಅರಣ್ಯ ಹೊಂದಿರುವ ಭೂಮಿಯನ್ನು ಅಕ್ಕಪಕ್ಕದವರ ಆಕ್ಷೇಪಣೆಗಳನ್ನೂ
ಕೇಳದೆ ಸರ್ಕಾರಿ ನಿಯಮಗಳನ್ನು ಪಾಲಿಸದೆ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಭು ಗೌಡ,
ಕಂದಾಯ ನಿರೀಕ್ಷ ಸಚಿನ್, ತಹಸೀಲ್ದಾರ್ ಶ್ರೀಮತಿ ಗೌರಮ್ಮ ಪಿ., ಅರಣ್ಯ, ಕಾವಲುಗಾರ ಮಹೇಂದ್ರ, ವಲಯ ಉಪ ಅರಣ್ಯಾಧಿಕಾರಿ ರಾಕೇಶ್, ವಲಯ ಅರಣ್ಯಾಧಿಕಾರಿಯಾಗಿದ್ದ ಅನಿಲ್ ಡಿಸೋಜಾ ರವರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ.
ಜೊತೆಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ(ADC) ಮತ್ತು ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಅಧಿಕಾರಿಗಳು ಸೇರಿ ಹಲವು ಸುಳ್ಳು, ವರದಿಗಳನ್ನು ಸೃಷ್ಟಿಸಿ ದಟ್ಟವಾಗಿ ಬೆಳೆದು ಜಾನುವಾರುಗಳಿಗೆ ಮೇಯಲು ಮೀಸಲಿರಿಸಿದ್ದ
ಭೂಮಿಯನ್ನು ಸರ್ಕಾರಿ ನಿಯಮ ಪಾಲಿಸದೆ ಅಕ್ರಮವಾಗಿ
ಕೆ.ಎಸ್.ಆರ್.ಟಿ.ಸಿ.ಗೆ ಮಂಜೂರು ಮಾಡಿದ್ದಾರೆ ಎಂದು ದೂರಿದ್ದಾರೆ.
ಸ.ನಂ.196ರಲ್ಲಿದ್ದ ಭಾರಿ ಬೆಲೆ ಬಾಳುವ
ಕಾಡು ಜಾತಿಯ ಮರಗಳನ್ನು ನಾಶ ಮಾಡಿ ಈಗ ಗುಡ್ಡ ಕಡಿದು ಮಣ್ಣನ್ನು ಖಾಸಗಿ ಬಡಾವಣೆಗಳಿಗೆ
ಮಾರಾಟ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃಷಿಕರಿಗೂ ತೊಂದರೆ ಆರೋಪ
ಪಕ್ಕದಲ್ಲೇ ಕೃಷಿ ಭೂಮಿಯನ್ನು ಹೊಂದಿರುವ ತಮಗೆ ತೊಂದರೆ ಮಾಡಿರುವುದಲ್ಲದೆ, ಪಶ್ಚಿಮಘಟ್ಟ ಹಸಿರು ವಲಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಅರಣ್ಯ ಭೂಮಿಯನ್ನು ನಾಶ ಮಾಡಿದ್ದಾರೆಂದು ಟೀಕಿಸಿದ್ದಾರೆ.
ರಾಜಕೀಯ ಒತ್ತಡ ಮತ್ತು ಭ್ರಷ್ಟಾಚಾರ ಇದರಲ್ಲಿ ಅಡಗಿದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೃಂಗೇರಿ ಸಮೀಪದ ಹಸಿರು ವಲಯವನ್ನು ಉಳಿಸಬೇಕಾಗಿ ಲೋಕಾಯುಕ್ತರಲ್ಲಿ ಮನವಿ ಮಾಡಿದ್ದಾರೆ.
ಪ್ರಭಾವಿಗಳಿಂದ ಹಲ್ಲೆ ಮಾಡೋದಾಗಿ ಬೆದರಿಕೆ?
ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ದೂರುದಾರ ಹಂದಿಗೋಡು ಪ್ರವೀಣ್ರವರಿಗೆ ಕೆಲ ರಾಜಕೀಯ ಪ್ರಮುಖರು ಮತ್ತು ಪ್ರಭಾವಿಗಳಿಂದ ಹಲ್ಲೆ ಮಾಡೋದಾಗಿ ಬೆದರಿಕೆಗಳು ಬರುತ್ತಿದ್ದು ಇದನ್ನು ಸ್ವತಃ ಪ್ರವೀಣ್ರವರೇ ನಮ್ಮೂರ್ ಎಕ್ಸ್ ಪ್ರೆಸ್ಗೆ ತಿಳಿಸಿದ್ದಾರೆ.