20 ವರ್ಷದೊಳಗಿನ ಅಡಿಕೆ ಮರಗಳಿಗೆ ರೋಗ ಬರುತ್ತೆ ಹುಷಾರ್!
– ಹಿಂಗಾರ ಒಣಗುವ ರೋಗ, ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆ: ಅಡಕೆ ಬೆಳೆಗಾರರಿಗೆ ಸೂಚನೆ
– ಏನಿದು ಅಡಿಕೆಗೆ ಮತ್ತೊಂದು ರೋಗ…?
NAMMUR EXPRESS NEWS
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹಿಂಗಾರ ಒಣಗುವ ರೋಗ ಮತ್ತು ಹಿಂಗಾರ ತಿನ್ನುವ ಹುಳುವಿನ ಬಾದೆ ಹೆಚ್ಚಾಗಿ ಕಂಡುಬರುತ್ತಿದ್ದು, ಅಡಿಕೆ ಬೆಳೆಗಾರರು ಎಚ್ಚರಿಕೆ ವಹಿಸಬೇಕೆಂದು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಿಂಗಾರದಲ್ಲಿ ಗಂಡು ಹೂಗಳ ಎಸಳುಗಳ ಹಳದಿ ಆಗುವಿಕೆ ಹಿಂಗಾರ ಒಣಗುವ ರೋಗದ ಮೊದಲ ಲಕ್ಷಣ. ಹಳದಿ ಬಣ್ಣ ಎಸಳುಗಳ ತುದಿಯಿಂದ ಪ್ರಾರಂಭವಾಗಿ ಹಿಮ್ಮುಖವಾಗಿ ಎಡಭಾಗಕ್ಕೆ ಮುಂದುವರೆಯುತ್ತದೆ. ನಂತರ ಎಸಳುಗಳು ಕಂದು ಬಣ್ಣಕ್ಕೆ ತಿರುಗಿ ಒಣಗ ತೊಡಗುತ್ತವೆ. ಈ ಸ್ಥಿತಿಯನ್ನು ಡೈ ಬ್ಯಾಕ್ ಎನ್ನಲಾಗುತ್ತದೆ. ಎಸಳುಗಳ ಹಳದಿಯಾಗುವಿಕೆ ಮತ್ತು ಕಂದಾಗುವಿಕೆ ಮುಂದುವರಿಯದಂತೆ ಹಣ್ಣು ಹೂಗಳು ಉದುರತೊಡಗುತ್ತದೆ. ನಂತರ ರೋಗ ಇಡಿ ಹಿಂಗಾರಕ್ಕೆ ಹರಡಿ ಅಂತಹ ಹಿಂಗಾರಗಳು ಸಾಯುತ್ತವೆ. ರೋಗಪೀಡಿತ ಹಿಂಗಾರಗಳಲ್ಲಿ ಪರಾಗಸ್ಪರ್ಶಕ್ರಿಯೆ ಕಡಿಮೆಯಾಗುವುದರಿಂದ ಎಳೆ ಕಾಯಿಗಳು ಉದುರುತ್ತವೆ. ಇಂತಹ ರೋಗದ ಚಿಹ್ನೆಗಳು ಎಲ್ಲಾ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಹೇಳಿದ್ದಾರೆ.
20 ವರ್ಷದೊಳಗಿನ ಮರಗಳಲ್ಲಿ ಸಮಸ್ಯೆ: ಹಿಂಗಾರ ತಿನ್ನುವ ಹುಳುವಿನ ಬಾಧೆ 20 ವರ್ಷದ ಒಳಗಿನ ಮರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹುಳುಗಳು ಹಿಂಗಾರದ ಹೊಳಹುಕ್ಕು ಬಲೆಗಳನ್ನು ನೇಯ್ದುಕೊಂಡು ಗಂಡು ಮತ್ತು ಹೆಣ್ಣು ಹೂಗಳನ್ನು ತಿನ್ನುತ್ತವೆ. ಹೂ ಅರಳುವ ಮೊದಲೇ ಅವುಗಳನ್ನು ತಿನ್ನುವುದರಿಂದ ಹೊಂಬಾಳೆ ಮೇಲೆ ಒತ್ತಡ ಬರದೆ ಹಿಂಗಾರ ಬಿಚ್ಚಿಕೊಳ್ಳುವುದಿಲ್ಲ. ಸಿಂಗಾರದ ಎಸಳುಗಳನ್ನು ಸೇರಿಸಿಕೊಂಡು ಬಲೆ ನೇಯ್ದು ಹೂಗಳನ್ನು ತಿಂದು ಹಿಕ್ಕಿಗಳು ಅಲ್ಲಿಯೇ ವಿಸರ್ಜಿಸುವುದರಿಂದ ಹಿಂಗಾರ ಕೊಳೆಯುವುದಲ್ಲದೆ ಹುಳು ಸುರಂಗ ಮಾಡಿದ ಜಾಗಗಳಿಂದ ಅಂಟು ದ್ರವ ಹೊರಕ್ಕೆ ಬರುತ್ತದೆ. ಹಾನಿ ಗಿಡದ ಹಿಂಗಾರದಲ್ಲಿ ನೆಯ್ದು ಬಲೆಗಳಿಂದ ಪರಾಗಸ್ಪರ್ಶಕ್ಕೆ ಅಡ್ಡಿ ಉಂಟಾಗುವುದಲ್ಲದೆ ಕಾಯಿ ಕಚ್ಚುವುದಿಲ್ಲ. ತೀವ್ರವಾಗಿ ಕೀಟ ಬಾಧಿಸಿದ ತೋಟಗಳಲ್ಲಿ ಎಳೆಯ ಕಾಯಿಗಳಲ್ಲಿಯೂ ಸದಾ ಇದರಿಂದಾದ ಹಾನಿ ಕಾಣಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.