ರಾಘವೇಂದ್ರ ನಾಮಪತ್ರ ಸಲ್ಲಿಕೆಗೆ ಜನವೋ ಜನ!
– ಬಿಸಿಲು ಲೆಕ್ಕಿಸದೇ ಹೆಜ್ಜೆ ಹಾಕಿದ ಸಾವಿರಾರು ಬೆಂಬಲಿಗರು
– ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನ
– ಶಿವಮೊಗ್ಗ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕೆ..!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಇಂದು ಎಲ್ಲೆಲ್ಲೂ ಕೇಸರಿ ಧ್ವಜ ರಾರಾಜಿಸುತ್ತಿತ್ತು. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ರಾಘವೇಂದ್ರ ಅವರು 25 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು, ಎರಡು ಪಕ್ಷದ ಮೇರು ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಬಿಜೆಪಿಯ ರಾಘವೇಂದ್ರ ನಾಮಪತ್ರ: ಮೆರವಣಿಗೆ
ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಆರಂಭವಾಗಿರುವ ಬಿಜೆಪಿ-ಜೆಡಿಎಸ್ ಬೆಂಬಲಿಗರ ಬೃಹತ್ ಮೆರವಣಿಗೆ ಚುನಾವಣೆಗೆ ಮುನ್ನವೇ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಮುಂಜಾನೆಯಿಂದಲೇ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಗಣೇಶನ ಗುಡಿ ಅಂಗಳಕ್ಕೆ ಬೆಂಬಲಿಗರು ದೌಡಾಯಿಸುತ್ತಿದ್ದು, ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದಾರೆ. ಬೇಸಿಗೆಯ ಉರಿ ಬಿಸಿಲನ್ನು ಲೆಕ್ಕಿಸದೇ ಎರಡೂ ಪಕ್ಷಗಳ ಬೆಂಬಲಿಗರು ಮೆರವಣಿಗೆಯಲ್ಲಿ ನೆರೆದಿದ್ದು, ಶಿವಮೊಗ್ಗದ ಹೃದಯಭಾಗ ಕೇಸರಿಮಯವಾಗಿ ಮಾರ್ಪಟ್ಟಿದೆ. ಬಿಜೆಪಿ ಬೆಂಬಲಿಗರು ಕೇಸರಿ ಟೋಪಿ, ಹೆಗಲಿಗೆ ಶಾಲು ಹಾಕಿಕೊಂಡಿದ್ದರೆ ಜೆಡಿಎಸ್ ಬೆಂಬಲಿಗರು ಹಸಿರು ಶಾಲು ಧರಿಸಿ ಹೆಜ್ಜೆ ಹಾಕಿದ್ದಾರೆ.
ಮೆರವಣಿಗೆಗೆ ಮುನ್ನ ಬಿ.ವೈ. ರಾಘವೇಂದ್ರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ಮಾಜಿ ಶಾಸಕ ಹರತಾಳು ಹಾಲಪ್ಪ ಇದ್ದರು. ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು. ಇನ್ನು ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಜನ ತುಂಬಿ ಹೋಗಿದ್ದರು.
ಮೂರು ಮಂದಿಯ ಹೋರಾಟ!
ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಈಶ್ವರಪ್ಪನವರು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.