ಶಿವಮೊಗ್ಗದಲ್ಲಿ ಮಾಜಿ ಸಿಎಂ ಮಕ್ಕಳ ಕಾಳಗ!
– ಯಡಿಯೂರಪ್ಪ ಪುತ್ರ ರಾಘವೇಂದ್ರ, ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ
– ಅಪ್ಪನ ಹೆಸರು ಉಳಿಸಲು ಇಬ್ಬರ ಹೋರಾಟ
ದೇಶ ಕಂಡ ಅಪರೂಪದ ರಾಜಕಾರಣಿಗಳು, ರಾಜ್ಯದ ಮಾಸ್ ನಾಯಕರಾದ ಬಂಗಾರಪ್ಪ ಮತ್ತು ಯಡಿಯೂರಪ್ಪ ಇಬ್ಬರೂ ಶಿವಮೊಗ್ಗದ ಹೆಮ್ಮೆಯ ರಾಜಕಾರಣಿಗಳು. ಶಿವಮೊಗ್ಗದಲ್ಲಿ ಈಗೇನಿದ್ದರೂ ಈ ಎರಡು ಕುಟುಂಬದ್ದೇ ರಾಜಕಾರಣ. ಒಂದು ಕಡೆ ಯಡಿಯೂರಪ್ಪ ಪುತ್ರ ರಾಘವೇಂದ್ರ ಸಂಸದರಾಗಿದ್ದರೆ, ಇನ್ನೋರ್ವ ಮಗ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿ ಮುಂದಿನ ಸಿಎಂ ಎಂದೇ ಬಿಂಬಿತರಾಗಿದ್ದಾರೆ. ಶಿಕಾರಿಪುರ ಶಾಸಕರಾಗಿಯೂ ವಿಧಾನ ಸಭೆ ಪ್ರವೇಶ ಮಾಡಿದ್ದಾರೆ. ಇತ್ತ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಸೊರಬದಿಂದ ಗೆದ್ದು ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವರೂ, ಶಿವಮೊಗ್ಗ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಬಂಗಾರಪ್ಪ ಕುಟುಂಬ ಮತ್ತು ಯಡಿಯೂರಪ್ಪ ಕುಟುಂಬ ಕದನಕ್ಕೆ ಶಿವಮೊಗ್ಗ ಕ್ಷೇತ್ರ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಈ ಮೊದಲು ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್, ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ರಾಘವೇಂದ್ರ ಮತ್ತು ಗೀತಾ ಟಿಕೆಟ್ ಅಂತಿಮವಾಗಿದೆ.
ರಾಘವೇಂದ್ರ ಅವರು ಈಗಾಗಲೇ ಕ್ಷೇತ್ರದ ಎಲ್ಲಾ ಕಡೆ ಒಂದು ರೌಂಡ್ಸ್ ಹಾಕಿದ್ದಾರೆ. ಗೀತಾ ಇದೀಗ ಶುರು ಮಾಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಪ್ರಚಾರ ಸಭೆಯನ್ನು ಶಿವಮೊಗ್ಗದಿಂದಲೇ ಶುರು ಮಾಡಲು ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿದೆ.
ಯಡಿಯೂರಪ್ಪ ವಿರುದ್ಧ ಸ್ಪರ್ಧೆ ಮಾಡಿದ್ದ ಗೀತಾ!
ಗೀತಾ ಶಿವರಾಜ್ ಕುಮಾರ್ 2014ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಆಗ ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಯಡಿಯೂರಪ್ಪ 6.06 ಲಕ್ಷ ಮತ ಪಡೆದಿದ್ದರು. ಗೀತಾ ಶಿವರಾಜ್ ಕುಮಾರ್ ಅವರು 2.40 ಲಕ್ಷ ಮತಗಳನ್ನು ಪಡೆದಿದ್ದರು.
15 ವರ್ಷದಿಂದ ರಾಜಕೀಯ ಜಿದ್ದಾಜಿದ್ದಿ!
ಲೋಕಸಭಾ ಚುನಾವಣೆ ಅಖಾಡದಲ್ಲಿ ಬಂಗಾರಪ್ಪ ಕುಟುಂಬ ಮತ್ತು ಯಡಿಯೂರಪ್ಪ ಕುಟುಂಬದ ಮಧ್ಯೆ ಕಳೆದ 15 ವರ್ಷದಿಂದ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಅವಧಿಯಲ್ಲಿ ನಾಲ್ಕು ಬಾರಿ ಚುನಾವಣೆ ನಡೆದಿದ್ದು, ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರೇ ಮೇಲುಗೈ ಸಾಧಿಸಿದ್ದಾರೆ.
ಬಂಗಾರಪ್ಪ ಸೋಲಿಸಿದ್ದ ರಾಘವೇಂದ್ರ!
2009ರಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಮತ್ತು ಕಾಂಗ್ರೆಸ್ನಿಂದ ಎಸ್.ಬಂಗಾರಪ್ಪ ಸ್ಪರ್ಧಿಸಿದ್ದರು. ರಾಘವೇಂದ್ರ 4.82 ಲಕ್ಷ ಮತ ಪಡೆದಿದ್ದರು. ಬಂಗಾರಪ್ಪ 4.29 ಲಕ್ಷ ಮತ ಪಡೆದಿದ್ದರು. 52 ಸಾವಿರ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ಸಾಧಿಸಿ, ಚೊಚ್ಚಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದರು. ಯಡಿಯೂರಪ್ಪ ಅವರು 6,06,216 ಮತ ಪಡೆದಿದ್ದರು. ಗೀತಾ ಶಿವರಾಜ್ ಕುಮಾರ್ 2,40,636 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು 2,42,911 ಮತ ಪಡೆದಿದ್ದರು. ಹಾಗಾಗಿ ಗೀತಾ ಶಿವರಾಜ್ ಕುಮಾರ್ ಅವರು ಮೂರನೇ ಸ್ಥಾನ ಪಡೆದಿದ್ದರು.
ಮಧು ಬಂಗಾರಪ್ಪ ಸೋಲಿಸಿದ್ದ ರಾಘವೇಂದ್ರ!
2018ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವೈ ರಾಘವೇಂದ್ರ, ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ರಾಘವೇಂದ್ರ 5,43,306 ಮತ ಗಳಿಸಿದ್ದರು. ಮಧು ಬಂಗಾರಪ್ಪ 4,91,158 ಮತ ಪಡೆದಿದ್ದರು. 52 ಸಾವಿರ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ರಾಘವೇಂದ್ರ 7,29,872 ಮತ ಗಳಿಸಿದ್ದರು. ಮಧು ಬಂಗಾರಪ್ಪ 5,06,512 ಮತ ಪಡೆದಿದ್ದರು. 2.23 ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದರು.
ಶಿವಮೊಗ್ಗ ಕ್ಷೇತ್ರ ಈ ಬಾರಿ ಯಾರಿಗೆ?
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಕ್ಷೇತ್ರ ಮತ್ತು ಉಡುಪಿಯ ಬೈಂದೂರು ಕ್ಷೇತ್ರ ಶಿವಮೊಗ್ಗ ಲೋಕ ಸಭಾ ವ್ಯಾಪ್ತಿಗೆ ಬರುತ್ತದೆ. ಈ ಬಾರಿ ಯಾರು ಗೆಲ್ತಾರೆ ಎಂಬ ಕುತೂಹಲ ಮೂಡಿದೆ.