ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು
-ಶಿವಮೊಗ್ಗ : ಮದುವೆಯಾದ ಹತ್ತೇ ನಿಮಿಷಕ್ಕೆ ಅಧಿಕಾರಿಗಳ ದಾಳಿ
ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿರುದ್ದ ದಾವಣಗೆರೆಯಲ್ಲಿ ಕೇಸ್ ದಾಖಲಾಗಿದೆ. ಉದ್ರೇಕಕಾರಿ ಭಾಷಣ ಸಂಬಂಧ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗುರುವಾರ ದಾವಣಗೆರೆಯಲ್ಲಿ ನಡೆದಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಅವರು ‘ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಅವರಂತಹ ರಾಷ್ಟ್ರದ್ರೋಹಿಗಳು ದೇಶವನ್ನು ಛಿದ್ರ ಮಾಡ್ತೀವಿ ಅಂತಾ ಹೋರಾಡ್ತರಲ್ಲಾ ಅವರಿಗೆ ಗುಂಡಿಕ್ಕಿ ಕೊಲ್ಲೋ ಅಂತಾ ಕಾನೂನು ತನ್ನಿ ಏನ್ ಅನ್ನೋಂಡಿದಿರಾ ದೇಶ ಅಂದ್ರೆ…’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅವರ ಶಿವಮೊಗ್ಗದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ ಕೇಸ್ ಹಾಕಿ ಎಂದಿದ್ದರು. ಈ ಸಂಬಂಧ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಹನುಮಂತಪ್ಪ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಈಶ್ವರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದುವೆಯಾದ ಹತ್ತೇ ನಿಮಿಷಕ್ಕೆ ಅಧಿಕಾರಿಗಳ ದಾಳಿ
ಶಿವಮೊಗ್ಗ : ನಗರದ ಸಮುದಾಯ ಭವನವೊಂದರಲ್ಲಿ ಅಪ್ರಾಪ್ತೆಯ ವಿವಾಹ ನೆರವೇರಿಸಲಾಗಿದೆ. ವಿಷಯ ತಿಳಿದು ಮಕ್ಕಳ ಸಹಾಯವಾಣಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ಮದುವೆ ಶಾಸ್ತ್ರ ಮಾಡಿಸಿದ ಅರ್ಚಕ, ಮದುಮಗ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗದಗ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳಿಗೆ ಶಿವಮೊಗ್ಗ ನಗರದ ಸಮುದಾಯ ಭವನವೊಂದರಲ್ಲಿ ಜ.30ರಂದು ಮದುವೆ ಮಾಡಲಾಗಿದೆ. ಮುಹೂರ್ತ ಮುಗಿದು ಕೆಲವೆ ನಿಮಿಷದಲ್ಲಿ ವಿಷಯ ತಿಳಿದು ಅಧಿಕಾರಿಗಳು ಸಮುದಾಯ ಭವನಕ್ಕೆ ದಾಳಿ ಮಾಡಿದ್ದಾರೆ. ಬಾಲಕಿಯನ್ನು ರಕ್ಷಿಸಿರುವ ಅಧಿಕಾರಿಗಳು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮದುಮಗ, ಆತನ ಪೋಷಕರು, ಬಾಲಕಿಯ ಪೋಷಕರು, ಮದುವೆ ಮಾಡಿದ ಅರ್ಚಕ ಸೇರಿದಂತೆ 8 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ವಿವಿಧ ಸೆಕ್ಷನ್ಗಳ ಅಡಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.