ಫೆ.22ಕ್ಕೆ ಗಡ್ಕರಿ ಶಿವಮೊಗ್ಗಕ್ಕೆ!
– ಹೈವೇ, ಬ್ರಿಡ್ಜ್ ಸೇರಿ ಹತ್ತಾರು ಕಾಮಗಾರಿ ಚಾಲನೆ
– 6168.41 ಕೋಟಿ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ
NAMMUR EXPRESS NEWS
ಶಿವಮೊಗ್ಗ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಫೆ.22ರಂದು ಶಿವಮೊಗ್ಗಕ್ಕೆ ಬರಲಿದ್ದು, ಏಳು ಜಿಲ್ಲೆಗಳ ವ್ಯಾಪ್ತಿಯ ₹6168.41 ಕೋಟಿ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ‘ನೆಹರೂ ಕ್ರೀಡಾಂಗಣದಲ್ಲಿ ಅಂದು ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ನಡೆಯಲಿದೆ.
ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದಂತೆ 296.92 ಕಿ.ಮೀ. ಉದ್ದದ 18 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕು ಸ್ಥಾಪನೆ ನಿತಿನ್ ಗಡ್ಕರಿ ನೆರವೇರಿಸಲಿದ್ದಾರೆ’ ಎಂದರು. ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ₹139.41 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ 4 ಕಾಮಗಾರಿಗಳನ್ನು ಲೋಕಾರ್ಪಣೆ ಮಾಡುವ ಜೊತೆಗೆ ಈಗಾಗಲೇ ಟೆಂಡರ್ ಮುಗಿಸಿ, ಕಾಮಗಾರಿ ಆರಂಭಿಸುವ ಹಂತದಲ್ಲಿ ರುವ ₹ 2138.30 ಕೋಟಿ ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಕುವೆಂಪು ಸಾಹಿತ್ಯ ವಿವಾದ: ರಾಘವೇಂದ್ರ ಹೇಳಿದ್ದೇನು?
‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳು. ಅದನ್ನು ತಿರುಚುವ ಕೆಲಸ ಆಗಿದೆ. ಇದು ಸರ್ಕಾರದ ಸಣ್ಣತನದ ಪರಮಾವಧಿ. ಇದು ಒಳ್ಳೆಯದಲ್ಲ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾವಣೆ ಮಾಡಲಾಗಿದೆ. ಮಕ್ಕಳಿಗೆ ವಿನಯ ಕಲಿಸಲು ರಾಷ್ಟ್ರಕವಿ ಕುವೆಂಪು ಅವರು ನೀಡಿದ ಘೋಷವಾಕ್ಯವಿದು. ದೇವಸ್ಥಾನ ಬೇರೆ ಅಲ್ಲ, ಶಾಲೆ ಬೇರೆಯಲ್ಲ. ಇಲ್ಲಿ ಧೈರ್ಯವಾಗಿ ಪ್ರಶ್ನಿಸು ಎಂಬ ಮಾತು ಸರಿ ಅಲ್ಲ’ ಎಂದರು.