ಶಿವಮೊಗ್ಗದಲ್ಲಿ2 ತಿಂಗಳ ಹಿಂದೆ ಎಚ್ಎಂಪಿವಿ ವೈರಸ್ ಪತ್ತೆ
– ಸೋಂಕು ದೃಢಪಟ್ಟ ಐದು ಜನ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖ
– ಇದು ಜೀವಕ್ಕೆ ಮಾರಕವಾದ ವೈರಾಣು ಅಲ್ಲ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ: ಡಾ. ಧನಂಜಯ್ ಸರ್ಜಿ
NAMMUR EXPRESS NEWS
ಶಿವಮೊಗ್ಗ : ಚೀನಾದಲ್ಲಿ ತಲ್ಲಣ ಮೂಡಿಸಿರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಸೋಂಕು ಜಿಲ್ಲೆಯ ಐದು ಮಕ್ಕಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಪತ್ತೆಯಾಗಿತ್ತು ಎಂದು ಮಕ್ಕಳ ತಜ್ಞ ವೈದ್ಯ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು. ಆರು ತಿಂಗಳಿಂದ 4 ವರ್ಷದ ಮಕ್ಕಳಲ್ಲಿ ಸಾಮಾನ್ಯ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡಾಗ ಅವರ ಸ್ವ್ಯಾಬ್ ಮಾದರಿಯನ್ನು ಇನ್ಫ್ಲುಯೆಂಜಾ ಪರೀಕ್ಷೆಗೆಂದು ಕಳುಹಿಸಿದಾಗ ಎಚ್ಎಂಪಿವಿ ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಸೋಂಕು ದೃಢಪಟ್ಟ ಐದು ಜನ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದು ಜೀವಕ್ಕೆ ಮಾರಕವಾದ ವೈರಾಣು ಅಲ್ಲ. ಹೀಗಾಗಿ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಅದರ ಬದಲು ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ ರೋಗ ನಿರೋಧ ಶಕ್ತಿ ಕಡಿಮೆ ಇರುವ ಮಕ್ಕಳು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವವರು, ಹಿರಿಯರು ಎಚ್ಚರಿಕೆ ವಹಿಸಬೇಕು. ಸೋಂಕು ದೃಢಪಟ್ಟವರು ಫೇಸ್ ಮಾಸ್ಕ್ ಬಳಸಿದರೆ ಸಾಕು. ಗಾಬರಿಯಾಗುವ ಅವಶ್ಯಕತೆ ಇಲ್ಲ’ ಎಂದರು.
– ಎಚ್ಎಂಪಿವಿಯ ಲಕ್ಷಣಗಳು :
ಕೆಮ್ಮು, ಜ್ವರ, ಮೂಗು ಸೋರುವಿಕೆ/ ಉಸಿರುಗಟ್ಟುವಿಕೆ, ಗಂಟಲು ಕೆರೆತ, ಉಬ್ಬಸ, ಉಸಿರಾಟದ ತೊಂದರೆ, ನಿಮ್ಮ ದೇಹದಾದ್ಯಂತ ದದ್ದುಗಳು, ಎಚ್ಎಂಪಿವಿ ಹೊಂದಿರುವವರೊಂದಿಗೆ ನೇರ ಸಂಪರ್ಕದಿಂದ ಅಥವಾ ವೈರಸ್ನಿಂದ ಕಲುಷಿತಗೊಂಡ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಹರಡುತ್ತದೆ. ಎಚ್ಎಂಪಿವಿ ಇರುವ ವ್ಯಕ್ತಿ ಕೆಮ್ಮು, ಸೀನುವಿಕೆ ಕೈ ಕುಲುಕುವುದು, ತಬ್ಬಿಕೊಳ್ಳುವುದು ಅಥವಾ ಚುಂಬಿಸುವುದು, ಫೋನ್ಗಳು, ಡೋರ್ ಹ್ಯಾಂಡಲ್ಗಳು, ಕೀ-ಬೋರ್ಡ್ಗಳು ಅಥವಾ ಆಟಿಕೆಗಳಂತಹ ಮೇಲೈಗಳು ಅಥವಾ ವಸ್ತುಗಳನ್ನು ಸ್ಪರ್ಶಿಸುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
– ಎಚ್ಎಂಪಿವಿ ತಡೆಗಟ್ಟುವ ವಿಧಾನ:
ಮಾಸ್ಕ್ ಧರಿಸುವುದು, ಆಗಾಗೆ ಕೈ ತೊಳೆಯುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಸೊಂಕಿನ ಅಪಾಯವನ್ನು ಕಡಿಮೆ ಮಾಡಲು ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸುವುದು. ಎಚ್ಎಂಪಿವಿ ಚಿಕಿತ್ಸೆಗಾಗಿ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಬೇಕು.
– ಎಚ್ಎಂಪಿವಿ ಮುನ್ನಚ್ಚರಿಕೆ ಕ್ರಮಗಳು:
ಶೀತ, ನೆಗಡಿ, ಕೆಮ್ಮು ಇದ್ದರೆ ಕರವಸ್ತ್ರ ಅಥವಾ ಮಾಸ್ಕ್ನಿಂದ ಮೂಗು, ಬಾಯಿಯನ್ನು ಮುಚ್ಚಿಕೊಳ್ಳಬೇಕು. ಆಗಾಗೆ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಬೇಕು. ಹೆಚ್ಚಿನ ಜನರೊಂದಿಗೆ ಗುಂಪು ಸೇರಬಾರದು. ಜನದಟ್ಟಣೆ ಹೆಚ್ಚಾಗಿರುವ ಜಾಗಗಳಲ್ಲಿಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನವಶ್ಯಕವಾಗಿ ಮನೆಯಿಂದ ಹೊರಬರಬಾರದು. ಹೆಚ್ಚು ನೀರು ಕುಡಿಯಬೇಕು ಮತ್ತು ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸಬೇಕು.
– ಏನು ಮಾಡಬಾರದು?
ಬಳಸಿದ ಕರವಸ್ತ್ರ/ ಮಾಸ್ಕನ್ನು ಬಳಸಬಾರದು, ಶೀತ, ನೆಗಡಿ, ಕೆಮ್ಮು ಇರುವವರಿಂದ ಅಂತರ ಕಾಯ್ದುಕೊಳ್ಳಬೇಕು, ಸದಾ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು, ಸಾರ್ವಜನಿಕ ಸ್ಥಳಗಳಲ್ಲಿಉಗುಳಬಾರದು, ವೈದ್ಯರನ್ನು ಸಂಪರ್ಕಿಸದೇ ಸ್ವ-ಔಷಧಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.