ಲೋಕಸಭೆ ಚುನಾವಣೆಗೆ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧೆ
– ಬಿ .ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುವುದು ಖಚಿತ
– ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
NAMMUR EXPRESS NEWS
ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುವುದು ಖಚಿತವಾಗಿದೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೆ.ಎಸ್ ಈಶ್ವರಪ್ಪ ತೀರ್ಮಾನಿಸಿದ್ದಾರೆ. ಶಿವಮೊಗ್ಗದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಸಿದ ಈಶ್ವರಪ್ಪ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ನನ್ನ ಪ್ರಾಣ ಹೋದರೂ ನಾನು ಮೋದಿ ವಿರುದ್ದ ಹೋಗಲ್ಲ. ನನ್ನ ಹೃದಯ ಬಗೆದರೆ, ಒಂದು ಕಡೆ ಮೋದಿ ಇನ್ನೊಂದು ಕಡೆ ರಾಮ ಇದ್ದಾರೆ. ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ಇಬ್ಬರು ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಇದ್ದಾರೆ ಎಂದು ನಾನೂ ಹೇಳುತ್ತಿಲ್ಲ ಕಾರ್ಯಕರ್ತರು ಹೇಳುತ್ತಿದ್ದಾರೆ.
ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಗಬಾರದು. ರಾಜ್ಯದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನೀವು ಒಂದೂವರೆ ತಿಂಗಳು ಸಮಯ ಕೊಡಬೇಕು. ಮೋದಿ ಆಸೆಗೆ ತಕ್ಕಂತೆ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಟಿಕೆಟ್ ನೀಡುವವರೊಂದಿಗೆ ನನ್ನನ್ನು ಹೋಲಿಸಿ ನಾನು ಅವರಿಗಿಂತ ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ. ಎಲ್ಲಾ ಸಮಾಜದವರ ನೂರಾರು ಕರೆಗಳು ಬರುತ್ತಿವೆ. ಅವರೆಲ್ಲರ ಕಳಕಳಿ ನನಗೆ ಅರ್ಥವಾಗುತ್ತದೆ ಎಂದು ಕೆ.ಎಸ್ ಈಶ್ವರಪ್ಪ ತಮ್ಮ ಚುನಾವಣಾ ಯುದ್ಧ ಘೋಷಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಯೋಚಿಸಿ ತೆಗೆದುಕೊಂಡ ತೀರ್ಮಾನ ಇದಾಗಿದೆ. ಏಕೆಂದರೆ ಪಕ್ಷ ನನಗೆ ಸಂಸ್ಕಾರ ನೀಡಿದೆ. ರಾಜ್ಯದ ನೊಂದ ಕಾರ್ಯಕರ್ತರ ದನಿಗೆ ನಾನು ಧ್ವನಿಯಾಗಲಿದ್ದೇನೆ. ಮೋದಿಗಾಗಿ ಪಕ್ಷಕ್ಕಾಗಿ ನಾನು ಏನು ಬೇಕಾದರೂ ಅನುಭವಿಸಲು ಸಿದ್ದನಿದ್ದೇನೆ ಎಂದು ಗುಡುಗಿದರು.
ವಂಶಪಾರಂಪರ್ಯದ ವಿರುದ್ಧ ನಾನು ಮಾತನಾಡಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿ ಕಾಂಗ್ರೆಸ್ನ ಕುಟುಂಬ ರಾಜಕಾರಣದ ಸಂಸ್ಕೃತಿ ಕಂಡುಬರುತ್ತಿದೆ. ಇದು ನೊಂದು ತೆಗೆದುಕೊಳ್ಳುತ್ತಿರುವ ನಿರ್ಧಾರ ಇದು. ಹಾವೇರಿಗೆ ಬೊಮ್ಮಾಯಿಗೆ, ಚಿಕ್ಕಮಗಳೂರಿಗೆ ಶೋಭಾಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ವಿಷಯ ತಿಳಿಯಿತು. ಬಿಎಸ್ವೈ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನಗಿಂತ ಹಿರಿಯರಿಗೆ ಟಿಕೆಟ್ ನೀಡಿದ್ದಾರೆ. ಈ ಹಿಂದೆ ಕಾಂತೇಶ್ ಬಿಎಸ್ವೈ ಬಳಿ ಹಾವೇರಿಗೆ ನಿಲ್ಲಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು. ಆಗ ಬಿಎಸ್ವೈ ಟಿಕೆಟ್ ನೀಡುವ ಹಾಗೂ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಆದರೆ, ಹಠ ಹಿಡಿದು ಬೊಮ್ಮಾಯಿ, ಶೋಭಾಗೆ ಟಿಕೆಟ್ ಕೊಡಿಸಿದ್ದಾರೆ. ಮಾತು ನೀಡಿದ ಕಾಂತೇಶ್ಗೆ ಏಕೆ ಮೋಸ ಮಾಡಿದ್ದೀರಿ? ಬೊಮ್ಮಾಯಿ ಟಿಕೆಟ್ ನೀಡುವ ಕುರಿತ ಸಭೆಯಲ್ಲಿ ಕುರುಬ ಸಮುದಾಯದ ಕಾಂತೇಶ್ಗೆ ಟಿಕೆಟ್ ನೀಡಿದರೆ ಅನುಕೂಲ ಎಂದು ಹೇಳಿದ್ದರು. ಕೇಂದ್ರ ಚುನಾವಣೆ ಆಯ್ಕೆ ಸಮಿತಿ ಸಭೆಯಲ್ಲಿ ಬೊಮ್ಮಾಯಿ ಹೆಸರು ಹೇಗೆ ಬಂತು ಎಂಬುದನ್ನು ಹೇಳಲು ಹೋಗುವುದಿಲ್ಲ. ನಾನು ಸುಳ್ಳು ಹೇಳಿದ್ರೆ ನನ್ನ ಮಗ ಹಾಳಾಗಿ ಹೋಗಲಿ ಭಾವುಕರಾಗಿ ಹೇಳಿದರು.