ಮಹಿಳೆ ಕೊಲೆ ಯಾರು ಮಾಡಿದ್ದು ಎಂಬುದೇ ಗೊತ್ತಾಗಿಲ್ಲ!
– ಸಾಕ್ಷ್ಯಕ್ಕಾಗಿ ಪೊಲೀಸರ ಸಾಹಸ: ಏನ್ ಆಗಿತ್ತು ಅಲ್ಲಿ..?
– ಲಾಡ್ಜ್ ಅಕ್ರಮ ವಿರುದ್ಧ ಸ್ಥಳೀಯರ ಆಕ್ರೋಶ
– ಮೋಜು ಮಸ್ತಿ ತಾಣವಾಗಿದೆಯೇ ಹಣಗೆರೆ ಕಟ್ಟೆ..?!
NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಗ್ರಾಮದ ಲಾಡ್ಜ್ ವೊಂದರಲ್ಲಿ, ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆ ಯಾರು ಎಂಬುದು ಇನ್ನು ಪತ್ತೆ ಆಗಿಲ್ಲ. ಈ ಪ್ರಕರಣ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದೀಗ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಮಾಳೂರು ಠಾಣೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಏನಿದು ಕೇಸ್…?
ಹಣಗೆರೆಕಟ್ಟೆಯ ಸೈಯದ್ ಸಾದತ್ ದರ್ಗಾ ಸಮೀಪದಲ್ಲಿರುವ ಹಬೀಬುಲ್ಲಾ ಎಂಬುವರಿಗೆ ಸೇರಿದ ಲಾಡ್ಜ್ ಕೋಣೆಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಹರಿತವಾದ ಚೂರಿಯಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದು ಕಂಡುಬಂದಿತ್ತು. ಇಡೀ ಕೋಣೆ ರಕ್ತಮಯವಾಗಿದ್ದುದು ಹತ್ಯೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಮಹಿಳೆಯ ವಿಳಾಸ, ಹೆಸರು ಸೇರಿದಂತೆ ಯಾವುದೇ ವಿವರಗಳು ಪತ್ತೆಯಾಗಿರಲಿಲ್ಲ.
ಮಹಿಳೆ ಹೇಗಿದ್ದಳು? ಕುರುಹು ಏನು..?
ಚಹರೆ: ಮೃತ ಮಹಿಳೆಗೆ ಸುಮಾರು 30 ರಿಂದ 35 ವರ್ಷ ವಯೋಮಾನವಿದೆ. 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದಾರೆ. ಕಿವಿಯಲ್ಲಿ ಕೆಂಪು ಹರಳಿನ ಬೆಂಡೋಲೆ, ಎಡಭಾಗದ ಮೂಗಿನಲ್ಲಿ ರಿಂಗ್, ಕತ್ತಿನಲ್ಲಿ ಕರಿಮಣಿ ಸರ ಹಾಗೂ ಕಾಲು ಬೆರಳಿನಲ್ಲಿ ಕಾಲುಂಗರ ಇರುತ್ತದೆ. ಗಿಳಿ ಹಸಿರು ಬಣ್ಣದ ಚೂಡಿದಾರ್, ಕೆಂಪು ಬಣ್ಣದ ವೇಲ್ ಧರಿಸಿದ್ದಾರೆ.
ಮೃತ ಮಹಿಳೆಯ ವಿಳಾಸ ಮತ್ತು ವಾರಸುದಾರರು ಪತ್ತೆಯಾದಲ್ಲಿ ಮಾಳೂರು ಪೊಲೀಸ್ ಠಾಣೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ (shimoga police control room), ದೂ.ಸಂ.: 08182-261413 / 9480803300/ 08181-235142/228310/ 9480803353/9480803333/ 9480803340 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಕ್ಷಿ ಸಂಗ್ರಹವೇ ತಲೆ ನೋವು!
ಸೌಹಾರ್ದ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ದಿ ಹೊಂದಿರುವ ತಾಲೂಕಿನ ಹಣಗೆರೆಯ ಲಾಡ್ಜ್ ವೊಂದರಲ್ಲಿ ಬರ್ಬರ ಗಾಯಗಳೊಂದಿಗೆ ಪತ್ತೆ ಆಗಿರುವ ಸುಮಾರು 30 ವರ್ಷದ ಮಹಿಳೆಯ ಶವ ಈಗ ಪೊಲೀಸ್ ಇಲಾಖೆಗೆ ತಲೆನೋವು ತಂದಿದೆ. ಮೃತ ಮಹಿಳೆಯ ವಿಳಾಸ ಪತ್ತೆಗೆ ಬೆನ್ನತ್ತಿರುವ ಪೊಲೀಸರಿಗೆ ಪ್ರಕರಣ ಭೇದಿಸುವ ಸವಾಲು ಎದುರಾಗಿದೆ. ಲಾಡ್ಜ್ನಲ್ಲಿ ಮೃತದೇಹ ಪತ್ತೆ ಘಟನೆಯ ಸನ್ನಿವೇಶ ಗಮನಿಸಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕ್ರಮ ಚುರುಕುಗೊಳಿಸಿದ್ದಾರೆ. ಮುಖ, ತಲೆ, ಮೈಗೆ ಬಲವಾದ ಆಯುಧದಿಂದ ತಿವಿದ ಗಾಯಗಳು ಕಂಡು ಬಂದಿರುವುದರಿಂದ ಮಹಿಳೆ ಕೊಲೆಯಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಖಚಿತಪಡಿಸಿ ಕೊಂಡು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಆದರೆ, ಘಟನೆ ನಡೆದ ಸ್ಥಳದ ಲಾಡ್ಜ್ನಲ್ಲಿ ಪೊಲೀಸರಿಗೆ ಯಾವುದೇ ಹೆಚ್ಚಿನ ಸಾಕ್ಷ್ಯ ಲಭ್ಯವಾಗಿಲ್ಲ
ಅಕ್ರಮ ಲಾಡ್ಜ್ ಕಡಿವಾಣಕ್ಕೆ ಪೊಲೀಸ್ ಇಲಾಖೆ ಸಿದ್ಧತೆ
ಲಾಡ್ಜ್ನಲ್ಲಿ ಸಿಸಿಟಿವಿ ಇದ್ದರೂ ಯಾವುದೇ ದೃಶ್ಯಗಳನ್ನು ಸೆರೆ ಹಿಡಿದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಪೂರೈಕೆ ಇಲ್ಲದ ಕಾರಣ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸಿಲ್ಲ. ಸಿಸಿಟಿವಿ ಕ್ಯಾಮೆರಾಕ್ಕೆ ಯುಪಿಎಸ್ ಜೋಡಿಸಿಲ್ಲ. ಇದು ಬಿರುಸಿನ ತನಿಖೆಗೆ ಅಡ್ಡಿ ಉಂಟು ಮಾಡಿದೆ. ಹಣಗೆರೆಯ ಲಾಡ್ಜ್ ನಲ್ಲಿ ಮಹಿಳೆ ಭೀಕರವಾಗಿ ಮೃತಪಟ್ಟ ಘಟನೆ ಸಾರ್ವಜನಿಕರಲ್ಲಿ ಭಾರಿ ಭೀತಿಗೆ ಕಾರಣವಾಗಿದೆ. ಅನೈತಿಕ ಚಟುವಟಿಕೆ, ಅಕ್ರಮ ಕೂಟದ ವ್ಯವಹಾರದಿಂದ ಹಣಗೆರೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತವಾದಂತಿದೆ. ಯಾವುದೇ ಲಾಡ್ಜ್ ಕಾನೂನು ಪ್ರಕಾರ ವಹಿವಾಟು ನಡೆಸುತ್ತಿಲ್ಲ. ಅನೈತಿಕ ಚಟುವಟಿಕೆಗೆ ಲಾಡ್ಜ್ಗಳು ತಾಣವಾಗಿವೆ. ಲಾಡ್ಜ್ನಲ್ಲಿ ವಾಸ್ತವ್ಯ ಹೂಡುವವರ ಬಗ್ಗೆ ಯಾವುದೇ ಮಾಹಿತಿ ಪಡೆಯುತ್ತಿಲ್ಲ. ಕೆಲವರಿಗೆ ದೇಹದ ಇಷ್ಟಾರ್ಥ ತೀರಿಸಿಕೊಳ್ಳುವುದಕ್ಕೆ ಇಲ್ಲಿನ ಕೆಲವು ಲಾಡ್ಜ್ಗಳು ಸುಲಭಕ್ಕೆ ಲಭಿಸುವ ಸ್ಥಳವಾಗಿವೆ. ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಲಾಡ್ಜ್ ಆಶ್ರಯತಾಣವಾಗಿದ್ದು ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ಸಿಗುತ್ತಿದೆ. ಹಲವು ಕಡೆ ಮನೆಗಳನ್ನೇ ಲಾಡ್ಜ್ ಆಗಿಸಿ ವ್ಯವಹಾರ ಮಾಡಲಾಗುತ್ತಿದೆ. ಇಷ್ಟಾದರೂ ದಾಳಿ ನಡೆಸಿ ಪೊಲೀಸರು ತನಿಖೆ ಕೈಗೊಂಡ ಉದಾಹರಣೆ ಇದ್ದಂತಿಲ್ಲ. ಇದೀಗ ಪೊಲೀಸ್ ಇಲಾಖೆಯನ್ನೇ ಸಂಶಯದಿಂದ ನೋಡುವಂತಾಗಿದೆ.
ಧಾರ್ಮಿಕ ತಾಣದಲ್ಲಿ ಮೋಜು ಮಸ್ತಿ!
ಹಣಗೆರೆಗೆ ಸಾವಿರಾರು ಭಕ್ತರು ಬಂದುಹೋಗುತ್ತಿದ್ದು ಕಾನೂನು ಸುವ್ಯವಸ್ಥೆ ಭದ್ರಗೊಳಿಸಲು ಸೂಕ್ತ ಕ್ರಮ ಇಲ್ಲವಾಗಿದೆ. ವಾಹನ ತಪಾಸಣೆಗೆ ಮಾತ್ರ ಪೊಲೀಸರ ಕರ್ತವ್ಯ ಮೀಸಲಾಗಿದ್ದು, ಧಾರ್ಮಿಕ ಕೇಂದ್ರದ ಬಳಿ ಯಾವುದೇ ಕಟ್ಟುನಿಟ್ಟಿನ ನಿಯಮ ಕಂಡು ಬರುತ್ತಿಲ್ಲ, ಧಾರ್ಮಿಕ ಕೇಂದ್ರದ ಸುತ್ತಲೂ ಅಭದ್ರತೆ ಇದ್ದು, ಅಹಿತಕರ ಘಟನೆ ತಡೆಯಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇಲ್ಲವಾಗಿದೆ. ಬಹಳಷ್ಟು ಜನ ಭಕ್ತಿಯಿಂದ ಬಂದು ಧಾರ್ಮಿಕ ಕೇಂದ್ರದಲ್ಲಿ ಹರಕೆ ಪೂಜೆ ಸಲ್ಲಿಸುತ್ತಾರೆ. ಕೆಲವರು ಹರಕೆ ಹೆಸರಲ್ಲಿ ಮೋಜು ಮಸ್ತಿ ಮಾಡುತ್ತಿದ್ದು ಹಣಗೆರೆಯ ಪ್ರಸಿದ್ದಿಗೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಪೊಲೀಸರು ಕರ್ತವ್ಯಕ್ಕೆ ನೇಮಕ ಗೊಂಡಿಲ್ಲ. ಹಾಗಾಗಿ ಕಾನೂನು ಸುವ್ಯವಸ್ಥೆ ದಿನೇದಿನೆ ಹದಗೆಡುತ್ತಿದೆ.