3 ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಒತ್ತುವರಿ ತೆರವು ಇಲ್ಲ!
– ಅರಣ್ಯ ಭೂಮಿ ದೊಡ್ಡ ಒತ್ತುವರಿದಾರರಿಗೆ ಶಾಕ್
– ಯಾವ ಯಾವ ಭೂಮಿ ಗುರುತು? ಯಾರದ್ದು ಹೋಗುತ್ತೆ?.. ಕ್ಲಿಕ್ ಮಾಡಿ
NAMMUR EXPRESS NEWS
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸೇರಿ ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಆರಂಭಗೊಂಡಿದೆ. 20, ವರ್ಷಗಳಿಂದೆ 25 ವರ್ಷಗಳಿಂದ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಅಡಿಕೆ ಕಾಫಿ, ಕಾಳುಮೆಣಸು ಇತರ ಬೆಳೆಗಳನ್ನು ಬೆಳೆದಿರುವ ಬೆಳೆಗಾರರು ಇದೀಗ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಭಾರಿ ಪ್ರಮಾಣದ ಒತ್ತುವರಿಯನ್ನು ಮೊದಲು ತೆರವುಗೊಳಿಸಲಾಗುತ್ತದೆ.
ಮೂರು ಎಕರೆ ವರೆಗಿನ ಒತ್ತುವರಿದಾರರು ಸದ್ಯಕ್ಕೆ ಸೇಫ್ ಆಗಿದ್ದಾರೆ. ಬೆಳೆಗಾರರ ವಿರೋಧ ಹಾಗೂ ಜನ ಪ್ರತಿನಿಧಿಗಳ ಒತ್ತಡದಿಂದಾಗಿ ಇದುವರೆಗೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತ ಹಾಗೂ ರಾಜ್ಯದ ಮಲೆನಾಡು ಭಾಗದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಗುಡ್ಡ ಕಸಿತ ರಂಭಗೊಂಡ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಭೂಮಿ ಒತ್ತುವರಿ ತೆರವಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಂಡಿದೆ.
7893 ಎಕರೆ ಅರಣ್ಯ ಒತ್ತುವರಿ ತೆರವು?
ಬೆಳ್ಳಂಬೆಳಗ್ಗೆಯೇ ಒತ್ತುವರಿ ಪ್ರದೇಶಕ್ಕೆ ಪೊಲೀಸ್ ರಕ್ಷಣೆಯಲ್ಲಿ ತೆರಳುವ ಅರಣ್ಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುತ್ತಿದ್ದಾರೆ. ಚಿಕ್ಕಮಗಳೂರು ಅರಣ್ಯ ವಿಭಾಗವೊಂದರಲ್ಲೇ ಬರೋಬ್ಬರಿ 7,893.02 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದನ್ನು ಗುರುತಿಸಲಾಗಿದೆ. ಇದರಲ್ಲಿ ಮೂರು ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿದವರ ಜಾಗ ಖುಲ್ಲಾ ಮಾಡಲಾಗುತ್ತಿದೆ.
ಅರಣ್ಯ ಇಲಾಖೆ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಅರಣ್ಯ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುತ್ತಿದೆ. ವಸ್ತಾರೆ ಹೋಬಳಿಯಲ್ಲಿ 20 ಎಕರೆ ಹಾಗೂ ಕಳಸ ವಲಯದಲ್ಲಿ 48 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಇದೇ ರೀತಿ ಯಾರು ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿದ್ದಾರೆಯೋ ಅ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಒಂದೊಂದಾಗಿಯೇ ಒತ್ತುವರಿ ತೆರವು ನಡೆಯಲಿದೆ. ಸಣ್ಣ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಬೆಳೆ ಬೆಳೆದವರಿಗೆ ಅಷ್ಟಾಗಿ ಸಮಸ್ಯೆ ಉಂಟಾಗುವುದಿಲ್ಲ ಎನ್ನಲಾಗುತ್ತಿದೆ.
ಮೂರು ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವುದನ್ನು ಸದ್ಯಕ್ಕೆ ಅರಣ್ಯ ಇಲಾಖೆ ತೆರವುಗೊಳಿಸುವುದಿಲ್ಲ ಎನ್ನಲಾಗುತ್ತಿದೆ.
ದೊಡ್ಡ ಹಿಡುವಳಿದಾರರೇ ಹೆಚ್ಚು
ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ 1412 ಪ್ರಕರಣಗಳಲ್ಲಿ 7,893.02 ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದರಲ್ಲಿ 30ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು 21 ಮಂದಿ ಒತ್ತುವರಿ ಮಾಡಿದ್ದಾರೆ. ಇವರು ಒತ್ತುವರಿ ಮಾಡಿರುವ ಅರಣ್ಯ ಪ್ರದೇಶದ ವಿಸ್ತೀರ್ಣ 1541.12 ಎಕರೆ. ಇನ್ನು 10ರಿಂದ 30 ಎಕರೆವರೆಗೆ ಅರಣ್ಯ
ಭೂಮಿಯನ್ನು 100 ಮಂದಿ ಒತ್ತುವರಿ ಮಾಡಿದ್ದಾರೆ. ಇವರು ಒತ್ತುವರಿ ಮಾಡಿರುವ ಒಟ್ಟು ಅರಣ್ಯ ಭೂಮಿ 1954.08 ಎಕರೆ. ಮೂರರಿಂದ 10 ಎಕರೆವರೆಗೆ 477 ಮಂದಿ ಒತ್ತುವರಿ ಮಾಡಿದ್ದು, ಹೀಗೆ ಒತ್ತುವರಿಯಾದ ಅರಣ್ಯ 2739.26 ಎಕರೆ. ಮೂರು ಎಕರೆಗಿಂತ ಕಡಿಮೆ ಅರಣ್ಯ ಪ್ರದೇಶವನ್ನು 814 ಮಂದಿ ಒತ್ತುವರಿ ಮಾಡಿದ್ದು, ಹೀಗೆ ಒತ್ತುವರಿಯಾಗ ಒಟ್ಟು ಅರಣ್ಯ ಪ್ರದೇಶ 1657.36 ಎಕರೆ.
ಕೋರ್ಟ್ ಆದೇಶ ಬೇಕು
ವಲಯ ಅರಣ್ಯ ಅಧಿಕಾರಿಗಳು ಎಲ್ಲೆಲ್ಲಿ ಅರಣ್ಯ ಒತ್ತುವರಿಯಾಗಿದೆ ಎಂದು ಗುರುತಿಸಿ ಎಸಿಎಫ್ ಕೋರ್ಟ್ಗೆ ಪ್ರಸ್ತಾವನೆ ಲ್ಲಿಸುತ್ತಾರೆ. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಗಳು ಹಾಗೂ ಒತ್ತುವರಿದಾರರ ವಿಚಾರಣೆ ನಡೆಸಿ ತೀರ್ಪು ನೀಡಲಾಗುತ್ತದೆ. ಒಂದು ವೇಳೆ ಒತ್ತುವರಿದಾರರ ವಿರುದ್ಧವಾಗಿ ತೀರ್ಪು ಬಂದಾಗ ಅವರು ಮೇಲ್ಮಟ್ಟದ ನ್ಯಾಯಾಲಯಕ್ಕೂ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಮೇಲ್ಮನವಿ ಸಲ್ಲಿಸಲು ಹೋದರೆ ಆ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೆ ಒತ್ತುವರಿ ತೆರವು ಮಾಡುವುದಿಲ್ಲ. ಒಂದು ವೇಳೆ ಎಸಿಎಫ್ ನ್ಯಾಯಾಲಯದ ತೀರ್ಪಿನ ವಿರುದ್ದ ಮೇಲ್ಮನವಿ ಹೋಗದೆ ಇದ್ದಲ್ಲಿ ಇದೇ ಆದೇಶವನ್ನೇ ಅಂತಿಮ ಎಂದು ಪರಿಗಣಿಸಿ ಒತ್ತುವರಿ ತೆರವು ಮಾಡಲಾಗುತ್ತದೆ.
ಅರಣ್ಯ ಅಧಿಕಾರಿಗಳು ಹೇಳಿದ್ದೇನು?
ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಅರಣ್ಯ ಒತ್ತುವರಿ ತೆರವು ಮಾಡ ಲಾಗುತ್ತಿದೆ. ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಸಾಗುವಳಿ ಮಾಡಿ ರುವುದನ್ನು ತೆರವುಗೊಳಿಸುತ್ತೇವೆ. ಮೂರು ಎಕರೆ ಗಿಂತ ಕಡಿಮೆ ಒತ್ತುವರಿ ಮಾಡಿರುವುದನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ ಎಂದು ಡಿಎಫ್ಒ ಚಿಕ್ಕಮಗಳೂರು ರಮೇಶ್ ಬಾಬು ಹೇಳಿದ್ದಾರೆ.