ಸಚಿವ ಮಧು ಬಂಗಾರಪ್ಪ ಕಾರು ಅಪಘಾತ: ಅಪಾಯದಿಂದ ಪಾರು
– ತುಮಕೂರು ಬಳಿ ಘಟನೆ: ಕಾರು ನುಜ್ಜುಗುಜ್ಜು
– ಶಿವಮೊಗ್ಗದಲ್ಲಿ ರೌಡಿ ಮೇಲೆ ಶೂಟೌಟ್!
– ಮೂಡಿಗೆರೆ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿ.ಇ.ಓ!
– ಶಿವಮೊಗ್ಗ: ನಾಯಿ ಗಲಾಟೆ : ನಾಯಿಗೆ ಗುಂಡು?!
NAMMUR EXPRESS NEWS
ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಯಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸಚಿವರು ಪಾರಾದ ಘಟನೆ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ ಸಚಿವ ಮಧು ಬಂಗಾರಪ್ಪ ಅವರು ಕಾರಿನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತವಾಗಿದ್ದು, ಲಾರಿ ಕಾರನ್ನು ತೀವ್ರವಾಗಿ ಉಜ್ಜಿಕೊಂಡಿದೆ. ಸ್ವಲ್ಪ ಅಂತರದಲ್ಲಿ ಸಚಿವರು ಅನಾಹುತದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಸಚಿವರು ಸೇರಿದಂತೆ ಮೂವರು ಇದ್ದರು. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಅಪಘಾತದ ಬಳಿಕ ಬೇರೆ ಕಾರಿನಲ್ಲಿ ಸಚಿವ ಮಧು ಬಂಗಾರಪ್ಪ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲಿ ರೌಡಿ ಮೇಲೆ ಶೂಟೌಟ್!
ಶಿವಮೊಗ್ಗ: ಫ್ರೀಡಂಪಾರ್ಕ್ನಲ್ಲಿ ನಡೆದಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾನ ಕಾಲಿಗೆ ಪೊಲೀಸ್ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ರೌಡಿಶೀಟರ್ ಮಂಜುನಾಥ ಅಲಿಯಾಸ್ ವಲಂಗಾನ ಎಡ ಕಾಲಿಗೆ ಶಿವಮೊಗ್ಗ ಪೊಲೀಸರು ಫೈರ್ ಮಾಡಿದ್ದಾರೆ. ಶಿವಮೊಗ್ಗದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಜಯನಗರ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಸಿದ್ದೇಗೌಡ ಸೋಮಿನಕೊಪ್ಪದ ಬಳಿಯಲ್ಲಿ ರೌಡಿಶೀಟರ್ ಕಾಲಿಗೆ ಬುಲೆಟ್ ಫೈರ್ ಮಾಡಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಶಶಿ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಲ್ಲು ಅಲಿಯಾಸ್ ವಲಂಗಾ ಆಗಿದ್ದು ನೇಪಾಳಿ ಮಂಜನ ಜೊತೆ ಸೇರಿಕೊಂಡು ಶಶಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪವಿದೆ. ಇದೀಗ ಇವತ್ತು ಬೆಳಗ್ಗಿನ ಜಾವ ಆರೋಪಿ ಮಹಜರ್ ಪ್ರಕ್ರಿಯೆ ವೇಳೆ ವಲಂಗಾನ ಕಾಲಿಗೆ ಗುಂಡು ಬಿದ್ದಿದೆ.ಈ ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಸಹ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇನ್ನೂ ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ರವರು ವಾಟ್ಸಾಪ್ ಮೆಸೇಜ್ ಮೂಲಕ ಮಾಹಿತಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ಮೂರು ದಿನಗಳ ಹಿಂದೆ ನಡೆದ 307 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ಮಂಜ ಅಲಿಯಾಸ್ ವಲಂಗ ಮಂಜನನ್ನು ಬಂಧಿಸಲಾಗಿದೆ. ಗುರುವಾರ ಬೆಳಿಗ್ಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವ ಸಮಯದಲ್ಲಿ, ಆತ ಪೊಲೀಸ್ ಸಿಬ್ಬಂದಿ ರವಿ ಮತ್ತು ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ.. ಈ ವೇಳೆ ಇನ್ಸ್ ಪೆಕ್ಟರ್ ಸಿದ್ದನಗೌಡ ಅವರು ಕತ್ತಿಯನ್ನು ಎಸೆಯುವಂತೆ ಎಚ್ಚರಿಕೆ ನೀಡಿದರೂ ವಲಂಗಾ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಸಿಬ್ಬಂದಿ ರವಿ ಗಾಯಗೊಂಡಿದ್ದಾರೆ. ಹೀಗಾಗಿ ಆತ್ಮರಕ್ಷಣೆಗಾಗಿ ಮತ್ತು ನಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಇನ್ಸೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ನಂತರ ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೂಡಿಗೆರೆ: ಲಂಚ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಬಿ.ಇ.ಓ!
ಚಿಕ್ಕಮಗಳೂರು: ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ಶಿಫಾರಸ್ಸು ಮಾಡಲು ಮಹಿಳೆ ಬಳಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಡಿ 27 ರಂದು ನಡೆದಿದೆ. ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಬಿಇಓ ಅಧಿಕಾರಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹಳ್ಳಿಯೊಂದರ ಮಹಿಳೆಯ ಪತಿ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 2023ರ ಮೇ 5 ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಹಾಗಾಗಿ, ಶಿಕ್ಷಕರ ಪತ್ನಿ ಅನುಕಂಪದ ಆಧಾರದ ನೌಕರಿಗೆ ಶಿಫಾರಸ್ಸು ಮಾಡುವಂತೆ ಬಿಇಓಗೆ ಮನವಿ ಮಾಡಿದ್ದರು. ಅವರು ದಾಖಲೆ ಕೇಳುವ ನೆಪದಲ್ಲಿ ದಿನದೂಡುತ್ತಿದ್ದರು. ಮಹಿಳೆ ಬಿಇಓ ಕಚೇರಿಯ ಎಸ್.ಡಿ.ಎ. ಬಳಿ ಕೇಳಿದಾಗ 15000 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮಹಿಳೆ ಬಿಇಓ ಬಳಿ ಮನವಿ ಮಾಡಿದಾಗ ಬಿಇಓ ಹೇಮಂತ್ ರಾಜ್ 15000 ದಿಂದ 10 ಸಾವಿರಕ್ಕೆ ಬಂದಿದ್ದರು. 10 ಸಾವಿರ ಹಣ ಪಡೆದುಕೊಳ್ಳುವಾಗ ಬಿಇಓ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಶಿವಮೊಗ್ಗ: ನಾಯಿ ಗಲಾಟೆ : ನಾಯಿಗೆ ಗುಂಡು?!
ಶಿವಮೊಗ್ಗ: ಶಿವಮೊಗ್ಗದ ಅಮೀರ್ ಕಾಲೋನಿಯಲ್ಲಿ ಚಂದ್ರಿಕಾ ಎಂಬುವವರು ಕಳೆದ 8 ವರ್ಷದಿಂದ ಹೆಣ್ಣು ನಾಯಿ ಸಾಕಿದ್ದಾರೆ. ಈಚೆಗೆ ಈ ನಾಯಿ ಅದೇ ಬೀದಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಸಾಕು ನಾಯಿಗೆ ಕಚ್ಚಿತ್ತು. ಇದರಿಂದ ಆಕ್ರೋಶಗೊಂಡ ಆತ, ಚಂದ್ರಿಕಾ ಅವರ ಮನೆ ನಾಯಿಗೆ ಕಲ್ಲು ಮತ್ತು ದೊಣ್ಣೆಯಿಂದ ಹೊಡೆಯುತ್ತಿದ್ದರು. ಹತ್ಯೆ ಮಾಡುವುದಾಗಿ ಹೇಳುತ್ತಿದ್ದರು. ಡಿ.24ರಂದು ಮಧ್ಯಾಹ್ನ ಗುಂಡಿನ ಶಬ್ದ ಕೇಳಿಸಿತ್ತು. ಚಂದ್ರಿಕಾ ಅವರು ಮನೆಯಿಂದ ಹೊರ ಬಂದಾಗ ಅವರ ಸಾಕು ನಾಯಿ ಸೊಂಟದ ಭಾಗದಲ್ಲಿ ಗಾಯವಾಗಿದ್ದು ಕಾಣಿಸಿತು. ಆ ವ್ಯಕ್ತಿ ಏರ್ ಗನ್ ಹಿಡಿದು ಮನೆ ಕಡೆಗೆ ತೆರಳುತ್ತಿದ್ದ ಎಂದು ಆರೋಪಿಸಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಕೆಳಗೆ ಮಲಗಿದ್ದ ನಾಯಿ ಮೇಲೆ ಆ ವ್ಯಕ್ತಿ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.