ಮಲೆನಾಡಲ್ಲಿ ಮಿಕ್ಸಿಂಗ್ ಅಡಿಕೆ ಅಬ್ಬರ: ಬೆಲೆ ಖೋತಾ?!
– ಶಿರಸಿ ಮಾರುಕಟ್ಟೆಯಲ್ಲಿ ಬರ್ಮಾ ಅಡಕೆ ಘಾಟು
– ಹೊರ ದೇಶದಿಂದ ಬರುತ್ತೆ: ಇಲ್ಲಿ ಅಡಿಕೆ ಬೆಲೆ ಹೋಗುತ್ತೆ!
– ಎಪಿಎಂಸಿ, ಕಸ್ಟಮ್ಸ್, ಕೃಷಿ ಅಧಿಕಾರಿಗಳೇ ಡೀಲ್ ಮಾಸ್ಟರ್?
NAMMUR EXPRESS NEWS
ಶಿರಸಿ/ ಶಿವಮೊಗ್ಗ: ಮಲೆನಾಡಿನ ಪಾರಂಪರಿಕ ಮಾರುಕಟ್ಟೆಯಲ್ಲಿ ದೇಶಾವರ ಅಡಕೆ ಬೆಲೆಗೆ ಆಪತ್ತು ಎದುರಾಗಿದೆ. ಕಳಪೆ ಅಡಕೆ ದಂಧೆ ಸಕ್ರಿಯವಾಗಿರುವುದು ಇದೀಗ ಉತ್ಕೃಷ್ಟ ದರ್ಜೆಯ ದೇಶಾವರ ಅಡಕೆಯ ಜತೆಗೆ ಕಳಪೆ ಅಡಕೆ ಸೇರಿಸಿ ಮಾರಾಟ ಮಾಡುವ ದಂಧೆ ವ್ಯಾಪಿಸುತ್ತಿದ್ದು, ಅಡಿಕೆ ಮಾನ ಮರ್ಯಾದೆ ತೆಗೆಯುತ್ತಿದೆ.
ದೇಶಾವರ ಅಡಕೆ ಬೆಳೆಯುವ ಪ್ರದೇಶದ ಮೂಲ ಕೇಂದ್ರವಾಗಿರುವ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ, ಶಿರಸಿ ಭಾಗದಲ್ಲೇ ಕಳಪೆ ದರ್ಜೆ ಅಡಕೆ ವಹಿವಾಟಿನ ದಂಧೆ ಸಕ್ರಿಯವಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳ ಜತೆ ನೇರ ವಹಿವಾಟು ಹೊಂದಿರುವ ದಂಧೆಕೋರರು
ಭೂತಾನ್, ಶ್ರೀಲಂಕಾ, ಮ್ಯಾನ್ಮಾರ್ ದೇಶಗಳು ಸೇರಿದಂತೆ, ಭಾರತದ ಮಾಲಯ, ಆಸ್ಲಾಂ ರಾಜ್ಯದ ಅಡಕೆಯನ್ನು ತೀರ್ಥಹಳ್ಳಿಗೆ ಆಮದು ಮಾಡಿಕೊಂಡು ದೇಶಾವರ ಅಡಕೆ ಜತೆಗೆ ಸೇರಿಸಿ ಸಾಂಪ್ರದಾಯಿಕ ಅಡಕೆ ಹೆಸರಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂತಹ ವ್ಯವಹಾರದ ಮೇಲೆ ಕಣ್ಣು ಇಡಬೇಕಾದ ಎಪಿಎಂಸಿ,ಕಸ್ಟಮ್ಸ್, ಕೃಷಿ ಅಧಿಕಾರಿಗಳೇ ಡೀಲ್ ಮಾಸ್ಟರ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳಪೆ ಅಡಕೆ ವಹಿವಾಟು ಕಾರಣ ರೈತರ ಬೆವರು ಹರಿಸಿ ದುಡಿದ ಅಡಿಕೆ ಬೆಲೆ ಇಳಿಮುಖವಾಗುತ್ತಿದೆ. ಆದ್ರೂ ಇಂತಹ ಅಕ್ರಮದ ಬಗ್ಗೆ ರೈತಸಂಘ, ರೈತ ಪ್ರತಿನಿಧಿಗಳು, ರೈತರು ಹೋರಾಟ ಮಾಡಿ ತನಿಖೆಗೆ ಸರಕಾರವನ್ನು ಆಗ್ರಹಿಸಿಲ್ಲ.
ಶಿವಮೊಗ್ಗ ವಿಡಿಯೋ ವೈರಲ್!
ವಿದೇಶ, ಹೊರ ರಾಜ್ಯದಿಂದ ಕಳಪೆ ದರ್ಜೆ ಅಡಕೆ ಆಮದು ಮಾಡಿಕೊಂಡು ದೇಶಾವರ ಅಡಕೆಗೆ ಬೆರೆಸಲಾಗುತ್ತಿದೆ. ಮಲೆನಾಡಲ್ಲಿ ನೇರಲೆ ಮರದ ತೊಪ್ಪೆ ಬಾಳೆದಿಂಡು, ವೀಳ್ಯದೆಲೆ ಮಿಶ್ರಣದ ಚೊಗರಿನಲ್ಲಿ ಅಡಕೆ ಬೇಯಿಸುತ್ತಾರೆ. ಜನರ ಕೈ ಸುಲಿತದಿಂದ ನೈಸರ್ಗಿಕ ಸಂಸ್ಕರಣೆ ಪದ್ಧತಿಯಲ್ಲಿ ರೈತರು ದೇಶಾವರ ಅಡಕೆ ಸಿದ್ದಗೊಳಿಸುತ್ತಾರೆ.
ಯಂತ್ರ ಸುಲಿತ ಚಾಲ್ತಿಯಲ್ಲಿದ್ದರೂ ದೇಶಾವರ ಅಡಕೆ ಗುಣಮಟ್ಟ ಕುಸಿದಿಲ್ಲ. ಆದರೆ ಮಿಕ್ಸಿಂಗ್ ಭೂತ ಈಗ ದೊಡ್ಡ ಆತಂಕ ಸೃಷ್ಟಿ ಮಾಡಿದೆ.
ಶಿರಸಿಯಲ್ಲಿ ಬರ್ಮಾ ಅಡಿಕೆ ಪತ್ತೆ!
ಟೆಂಡರ್ ಮಾರುಕಟ್ಟೆಗೆ ಬರ್ಮಾದ ಅಡಕೆ ಪ್ರವೇಶ ಆಗಿರುವುದು ಕೃಷಿ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಶಿರಸಿ ಕಸ್ತೂರಬಾನಗರದ ಅಬ್ದುಲ್ ರಹೀಮ್ ಅಬ್ದುಲ್ ಮಜೀದ್ ಎಂಬ ಯಾಾರಸ್ಥ ಸೆ. 11ರದು ಟಿಎಸ್ಎಸ್ ಸಹಕಾರಿ ಸಂಸ್ಥೆಯ ಟೆಂಡರ್ ಮಾರುಕಟ್ಟೆಗೆ ತಂದು ಮಾರಾಟಕ್ಕೆ ಹಾಕಿದ್ದಾಗಿ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಎರಡು ಕ್ವಿಂ.ಬರ್ಮಾ ಅಡಕೆ ಆಗಿದ್ದರೆ ಇನ್ನೂ 20 ಚೀಲಗಳಲ್ಲಿ ಬರ್ಮಾ ಅಡಕೆಯನ್ನು ಸ್ಥಳೀಯ ಅಡಕೆಯೊಂದಿಗೆ ಮಿಶ್ರಣ ಮಾಡಲಾಗಿತ್ತು ಎಂದು ಗೊತ್ತಾಗಿದೆ.
ಟೆಂಡರ್ ಬರೆಯುತ್ತಿದ್ದ ಸಿಬ್ಬಂದಿ ಅನುಮಾನಕ್ಕೆ ಕಾರಣವಾಯಿತು. ಅದನ್ನು ಆಡಳಿತ ಮಂಡಳಿ ಪ್ರಮುಖರ ಗಮನಕ್ಕೆ ತಂದು, ನಂತರ ಅದನ್ನು ಪರಿಶೀಲನೆ ನಡೆಸಿದಾಗ ಅದು ಬರ್ಮಾ ಅಡಕೆ ಎನ್ನುವುದು ಖಚಿತವಾಗಿದೆ. ಶೇಕಡಾ 55ರಷ್ಟು ಅಡಕೆ ಉತ್ಪಾದನೆ ಆಗುವುದು ಭಾರತದಲ್ಲೇ. ಬಾಂಗ್ಲಾದೇಶ, ಮಾಯನ್ಮಾರ್, ಶ್ರೀಲಂಕಾ ದೇಶಗಳು ನಂತರದ ಸ್ಥಾನದಲ್ಲಿ ಇವೆ. ಭಾರತದಲ್ಲಿ ವಾರ್ಷಿಕ 16ರಿಂದ 17 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆ ಆಗುತ್ತದೆ. ಇತ್ತೀಚಿಗೆ ಅಡಿಕೆ ಮಿಶ್ರಣ ಮಾಫಿಯಾ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ.