ರಾಜ್ಯದಲ್ಲಿ ಮೋದಿ ಗರ್ಜನೆ…!
– ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿ
– ಕನ್ನಡದಲ್ಲೇ ಭಾಷಣ ಮಾಡಿದ ಮೋದಿ
– ಈಶ್ವರಪ್ಪ ಗೈರು, ಕುಮಾರ್ ಬಂಗಾರಪ್ಪ ಹಾಜರು
NAMMUR EXPRESS NEWS
ಶಿವಮೊಗ್ಗ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಮತ್ತೆ ರಣಕಹಳೆ ಮೊಳಗಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಕರ್ನಾಟಕದ ಮುಖ್ಯ ಕೇಂದ್ರ ಕಲಬರುಗಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮೋದಿಯವರು ಸೋಮವಾರ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.
ಶಿವಮೊಗ್ಗದ ಅಲ್ಲಮ್ಮಪ್ರಭು ಕ್ರೀಡಾಂಗಣದಲ್ಲಿ ಜಿಲ್ಲಾ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ ಮೋದಿ, ರಾಜ್ಯದಲ್ಲಿ ಈ ಬಾರಿ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲ ನೀಡಬೇಕೆಂದು ಕೋರಿದರು.
ಎಂದಿನಂತೆ ಕನ್ನಡದಲ್ಲೇ ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು ತಮ್ಮ ಅರ್ಧಗಂಟೆಗಳ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಇಲ್ಲಿನ ಜನತೆ ನನಗೆ ಒಂದು ಗ್ಯಾರಂಟಿಯನ್ನು ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲಿಸಿ ಕಾಂಗ್ರೆಸ್ಗೆ ಒಂದೇ ಒಂದು ಕ್ಷೇತ್ರವನ್ನು ಸಹ ಬಿಟ್ಟು ಕೊಡುವುದಿಲ್ಲ ಎಂದು ವಾಗ್ದಾನ ಮಾಡಬೇಕು. ಕರುನಾಡಿನಲ್ಲಿ ಎಲ್ಲಾ ಕಡೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕೆಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಕರ್ನಾಟಕವನ್ನು ಗ್ಯಾರಂಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಇಲ್ಲಿನ ಹಣವು ದೆಹಲಿ ಪಾಲಾಗುತ್ತದೆ. ಅಲ್ಲಿನ ನಾಯಕರು ಕರುನಾಡನ್ನು ಎಟಿಎಂ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಎನ್ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ನಾವು ಒಂದೇ ಒಂದು ಹಗರಣವಿಲ್ಲದೆ ಸರ್ಕಾರವನ್ನು ಮುನ್ನಡೆಸಿದ್ದೇವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನಾವು ಅಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಖಚಿತ. ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್ಗೆ ಮರಳಾಗಬೇಡಿ. ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಮ್ರವಾಗಿ ಕೋರಿದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತೆರೆದ ವಾಹನದಲ್ಲಿ ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಜನರಿಗೆ ಕೈಮುಗಿದರು. ಈ ವೇಳೆ ‘ಮೋದಿ’, ‘ಮೋದಿ’ ಘೋಷಣೆ ಜೋರಾಗಿ ಕೇಳಿ ಬಂತು. ಕೇಸರಿ ಶಾಲು, ಟೋಪಿ ಬೀಸಿ ಜನರು ಪ್ರಧಾನಿಯತ್ತ ಅಭಿಮಾನ ತೋರಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘಟಕರು ಅವರಿಗೆ ವಿಐಪಿ ಪಾಸ್ ನೀಡಿದ್ದರು. ನವ ಮತದಾರರು ಪ್ರಧಾನಿಯನ್ನು ಹತ್ತಿರದಿಂದ ನೋಡಿದರು. ಚಿತ್ರದುರ್ಗ ಕ್ಷೇತ್ರ ಪ್ರತಿನಿಧಿಸುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.
ಈಶ್ವರಪ್ಪ ಗೈರು, ಕುಮಾರ್ ಹಾಜರು: ಹಾವೇರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸಲು ಈ ಸಮಾವೇಶ ವೇದಿಕೆ ಆಗಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು. ಪ್ರಧಾನಿ ಕಾರ್ಯಕ್ರಮದಿಂದ ಕೆ.ಎಸ್.ಈಶ್ವರಪ್ಪ ದೂರ ಉಳಿದರು.