ಕಳಪೆ ಅಡಿಕೆ ಎಫೆಕ್ಟ್: ಧಾರಣೆ ದಿಢೀರ್ ಕುಸಿತ!
– ಮಲೆನಾಡ ರೈತರಲ್ಲಿ ಆತಂಕ: ಕಳಪೆ ಅಡಿಕೆ ಮಿಕ್ಸ್ ಕಾರಣ ಆಯ್ತಾ?
– ವಿದೇಶದಿಂದ ಬರುತ್ತಿದೆ ಕಳ್ಳ ಅಡಿಕೆ!: ದರ ಕುಸಿಯುತ್ತಾ?
– 47 ಸಾವಿರಕ್ಕೆ ಕುಸಿದ ಅಡಿಕೆ ದರ
NAMMUR EXPRESS NEWS
ಶಿವಮೊಗ್ಗ: ಏರುಗತಿಯಲ್ಲಿದ್ದ ಅಡಿಕೆ ಧಾರಣೆ ಇದೀಗ ಮತ್ತೆ ಕುಸಿತ ಕಂಡಿದ್ದು, ಕಳ್ಳ ಅಡಿಕೆ ಕಾರಣ ಆಯ್ತಾ ಎಂಬ ಅನುಮಾನ ಮೂಡಿದೆ.
ಕಳಪೆ ಅಡಕೆ ಪೂರೈಕೆಯ ಕಾರಣವನ್ನು ಮುಂದಿಟ್ಟುಕೊಂಡು ಉತ್ತರ ಭಾರತದ ಪಾನ್ ಮಸಾಲಾ ಕಂಪನಿಗಳು ಅಡಕೆ ಮೂಟೆ ಹೊತ್ತು ಲಾರಿಗಳನ್ನು ಮುಲಾಜಿಲ್ಲದೆ ಹಿಂದಕ್ಕೆ ಕಳುಹಿಸುತ್ತಿದ್ದು, ಅಡಕೆ ಧಾರಣೆ ಕುಸಿಯಲಾರಂಭಿಸಿದೆ. ಮಧ್ಯದಲ್ಲಿ ಯಾರೋ ಮಾಡಿದ ಮೋಸದಿಂದಾಗಿ ಇಡೀ ಅಡಕೆ ರೈತ ಸಮುದಾಯ ಕಂಗಾಲು ಪರಿಸ್ಥಿತಿ ಎದುರಾಗಿದೆ.
ಸ್ಥಳೀಯ ಖಾಸಗಿ ವರ್ತಕರು ಮತ್ತು ಸಹಕಾರಿ ವಲಯದ ಮಧ್ಯೆ ಅಡಕೆ ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಬಂಧ ಸದ್ದಿಲ್ಲದೆ ಮುಸುಕಿನ ಗುದ್ದಾಟವೂ ಆರಂಭಗೊಂಡಿದೆ. ಅಡಕೆ ಮಾರುಕಟ್ಟೆಯನ್ನು ಸದಾ ಸದೃಢವಾಗಿಡಲು, ರಣೆ ಕುಸಿಯದಂತೆ ಶ್ರಮಿಸುತ್ತಿರುವ ಅಡಕೆ ಮಾರಾಟ ವಲಯದಲ್ಲಿರುವ ಸಹಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಖಾಸಗಿ ವಲಯ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.
ಚೇಣಿ ಮಾಡುವವರಿಂದ ವಂಚನೆ
ಚೇಣಿ ಮಾಡುವ ಗುತ್ತಿಗೆದಾರರು ರೈತರಿಗೆ ವಾಪಸ್ಸು ಕೊಡುವ ಸಂಸ್ಕರಿತ ಅಡಕೆಯ ಜೊತೆಗೆ ಕಳಪೆ ಗುಣಮಟ್ಟದ ಅಡಕೆಯನ್ನು ಬೆರಕೆಮಾಡುತ್ತಿದ್ದಾರೆ. ಗಮನಿಸದ ರೈತರು ಈ ಅಡಕೆಯನ್ನು ಖಾಸಗಿ ಅಡಕೆ ಮಂಡಿ ಅಥವಾ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟಕ್ಕೆ ಕಳುಹಿಸಿದ್ದಾರೆ. ಈ ಅಡಕೆಯನ್ನು ಖರೀದಿಸಿದ ವರ್ತಕರು ಉತ್ತರ ಭಾರತದ ಪಾನ್ ಮಸಾಲಾ ತಯಾರಕರಿಗೆ ಕಳುಹಿಸಿದ ವೇಳೆ ಈ ಕಳಪೆ ಗುಣಮಟ್ಟ ಕಂಡು ಲೋಡ್ ಗಟ್ಟಲೆ ಅಡಕೆಯನ್ನು ವಾಪಸ್ಸು ಕಳುಹಿಸುತ್ತಿದ್ದಾರೆ. ಇದು ಅಡಕೆ ಪೂರೈಸಿದ ಸ್ಥಳೀಯ ವರ್ತಕರನ್ನು ಭಾರೀ ನಷ್ಟಕ್ಕೆ ದೂಡಿದೆ. ಇದರಿಂದ ಪುನಃ ಅಡಕೆ ಖರೀದಿಸುವಲ್ಲಿ ಹಿಂದೇಟು ಹಾಕುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಅಡಕೆಯನ್ನು ಮಾತ್ರ ಹುಡುಕಿ ಹುಡುಕಿ ಖರೀದಿಸುತ್ತಿದ್ದಾರೆ.
47 ಸಾವಿರಕ್ಕೆ ಕುಸಿದ ಅಡಿಕೆ ದರ
ಸಧ್ಯ ರಾಶಿಇಡಿ ಮಾದರಿಯ ಅಡಕೆಯ ಧಾರಣೆ ಮಾತ್ರ ಗಂಭೀರಪ್ರಮಾಣದಲ್ಲಿ ಕುಸಿಯಲಾರಂಭಿಸಿದಿದೆ. ಎರಡು ತಿಂಗಳ ಹಿಂದೆ ಕ್ವಿಂಟಾಲ್ ಗೆ 54 ಸಾವಿರ ತಲುಪಿದ್ದ ಅಡಕೆ ಇದೀಗ 47 ಸಾವಿರಕ್ಕೆ ಕುಸಿದಿದೆ. ಮುಂದೆ ಇನ್ನೂ ಕುಸಿಯಬಹುದು ಎಂಬ ಭೀತಿಯೂ ಇದೆ.
ಖಾಸಗಿ ವಲಯದ ಅಡಕೆ ವರ್ತಕರು ಮತ್ತು ಸಹಕಾರಿ ವಲಯದ ನಡುವೆ ಮಾರುಕಟ್ಟೆ ಮೇಲಿನ ಹಿಡಿತಕ್ಕೆ ಪೈಪೋಟಿ ಆರಂಭಗೊಂಡಿದೆ. ಎರಡೂ ಕಡೆಯವರು ಪರಸ್ಪರ ಒಂದಾಗಿ ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ. ಅಂತಿಮವಾಗಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆಯೋ ಗೊತ್ತಿಲ್ಲ.
ಗುಣಮಟ್ಟವಿಲ್ಲದ ಅಡಿಕೆ ಖರೀದಿಸಲ್ಲ ಎಂದ ಮ್ಯಾಮ್ಕೋಸ್
ಇತ್ತೀಚಿನ ದಿನಗಳಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪೆನಿಗಳು ಅಡಿಕೆಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗುಣಮಟ್ಟವಿಲ್ಲದ ಅಡಿಕೆಗಳ ಖರೀದಿಯನ್ನು ನಿಲ್ಲಿಸಿರುತ್ತದೆ. ಈ ಕಾರಣದಿಂದಾಗಿ ಮಾಮ್ಕೋಸ್ ಸಂಸ್ಥೆಯು ಸಹ ಉತ್ತಮ ಗುಣಮಟ್ಟದ ಅಡಕೆ ಖರೀದಿ ಬಗೆಗೆ ಗಮನ ಹರಿಸುುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಮಾನ್ಯ ಸದಸ್ಯರು ಅಡಿಕೆಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅಡಿಕೆಗೆ ಹೆಚ್ಚಿನ ಧಾರಣೆ ಪಡೆಯಬಹುದಾಗಿದೆ. ಗೊರಬಲು ಪಾಲಿಷರ್ಗೆ ಹಾಕಿದ ಅಡಿಕೆಯನ್ನು ಮತ್ತು ಗುಣಮಟ್ಟವಿಲ್ಲದ ಎರಡನೇ ದರ್ಜೆಯ(Seconds) ಅಡಿಕೆಯನ್ನು ರಾಶಿ ಇಡಿಗೆ ಸೇರಿಸದೆ ಅದನ್ನು ಪ್ರತ್ಯೇಕವಾಗಿಯೇ ಸಂಘಕ್ಕೆ ತಂದು ಬಿಲ್ ಮಾಡಿಸುವುದರಿಂದ ರೈತರು ತಮ್ಮ ಅಡಿಕೆಗೆ ಉತ್ತಮ ದರ ಪಡೆಯಬಹುದಾಗಿರುತ್ತದೆ. ಪ್ರಸಕ್ತ ಅನಿವಾರ್ಯ ಪರಿಸ್ಥಿತಿಯನ್ನು ಅರಿತುಕೊಂಡು ಮಾನ್ಯ ಸದಸ್ಯರು ಸಂಘಕ್ಕೆ ಉತ್ತಮ ಗುಣಮಟ್ಟದ ಅಡಿಕೆಯನ್ನು ಹಾಕಿ ವ್ಯವಹರಿಸಿ ಸಹಕರಿಸಬೇಕಾಗಿ ಕೋರುತ್ತೇವೆ ಎಂದು ಮ್ಯಾಮ್ಕೋಸ್ ತನ್ನ ಸದಸ್ಯರಿಗೆ ಪತ್ರ ಮುಖೇನ ತಿಳಿಸಿದೆ.