ಶಿವಮೊಗ್ಗದಲ್ಲಿ ಮತ್ತೆ ಬಂಡಾಯ ರಾಜಕೀಯ!
– ಕಾಂಗ್ರೆಸ್ ನಾಯಕ ಎಸ್.ಪಿ.ದಿನೇಶ್ ಪಕ್ಷೇತರರಾಗಿ ಕಣಕ್ಕೆ?
– ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆ: ಜೂ.3ರಂದು ಚುನಾವಣೆ
– ಆಯನೂರು ವಿರುದ್ಧ ಈಗ ಕಾಂಗ್ರೆಸ್ ಅಲ್ಲೇ ಬಂಡಾಯ?!
NAMMUR EXPRESS NEWS
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಲೆಬಿಸಿ ಉಂಟು ಮಾಡಿದ್ದ ಬಂಡಾಯ, ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ. ಇತ್ತೀಚಿಗೆ ಮುಗಿದ ಚುನಾವಣೆಯಲ್ಲಿ ಬಿಜೆಪಿಗೆ ಈಶ್ವರಪ್ಪ ಬಂಡಾಯ ಭಾರಿಸಿ ತಲೆನೋವು ತಂದಿದ್ದರು. ಇದೀಗ ಟಿಕೆಟ್ ವಂಚಿತರಾಗಿರುವ ಎಸ್.ಪಿ.ದಿನೇಶ್, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಬಸವ ಜಯಂತಿಯಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ಗಳನ್ನು ಹಂಚಿಕೊಂಡು ಅಧಿಕೃತವಾಗಿ ಕಹಳೆ ಮೊಳಗಿಸಿದ್ದಾರೆ.
ಯಾರಿವರು ದಿನೇಶ್?
ನೈಋತ್ಯ ಪದವೀಧರ ಕ್ಷೇತ್ರಕ್ಕೆ ಎರಡು ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ ಮತ್ತೊಮ್ಮೆ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಇದೆ ಕಾರಣಕ್ಕೆ ಪದವೀಧರರ ನೋಂದಣಿ ಕಾರ್ಯದಲ್ಲಿ ತೊಡಗಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಿದೆ. ಹಾಗಾಗಿ ಎಸ್.ಪಿ.ದಿನೇಶ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಸೋತಿದ್ದರು: ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆ. 2012ರಲ್ಲಿ ಎಸ್.ಪಿ.ದಿನೇಶ್ ಮೊದಲ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕೇವಲ 918 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.
2018ರಲ್ಲಿ ವಿಧಾನಸಭೆ ಚುನಾವಣೆ ಮುಗಿದು 21 ದಿನಕ್ಕೆ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆದಿತ್ತು. ಈ ಕ್ಷೇತ್ರ ವ್ಯಾಪ್ತಿಯಲ್ಲಿ 27 ಬಿಜೆಪಿ ಶಾಸಕರು ಗೆದ್ದಿದ್ದರು. ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ಮೇಲೆ ವಿಧಾನಸಭೆ ಚುನಾವಣೆಯ ಫಲಿತಾಂಶ ಪರಿಣಾಮ ಬೀರಿತ್ತು. ಹಾಗಾಗಿ ಬಿಜೆಪಿಯ ಆಯನೂರು ಮಂಜುನಾಥ್ ವಿರುದ್ಧ ಎಸ್.ಪಿ.ದಿನೇಶ್ 6 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು.
ದಿನೇಶ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು ಪೋಸ್ಟರ್ಗಳು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಆಯನೂರು ಮಂಜುನಾಥ್ ವಿರೋಧಿ ಬಣ ಸಕ್ರಿಯವಾಗಿದೆ. ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಅಧಿಸುಚನೆ ಪ್ರಕಟಿಸಲಾಗಿದೆ. ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಜೂ.3ರಂದು ಚುನಾವಣೆ ನಡೆಯಲಿದೆ.