ಶಿವಮೊಗ್ಗದಲ್ಲಿ ದಾಖಲೆ ಮಳೆ… ಎಲ್ಲೆಲ್ಲೂ ರಗಳೆ!
– ಲಿಂಗನಮಕ್ಕಿಗೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು
– ತುಂಬಿದ ಜಲಾಶಯ: ಅಪಾಯ ಮಟ್ಟದಲ್ಲಿ ನದಿಗಳು
– ಮನೆ, ಧರೆ ಕುಸಿತ: ಹಲವೆಡೆ ಅನಾಹುತ, ಅಪಘಾತ
– ಶಿವಮೊಗ್ಗ ಜಿಲ್ಲೆಯಲ್ಲಿ ಏನೇನ್ ಆಯ್ತು… ಇಲ್ಲಿದೆ ರಿಪೋರ್ಟ್
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು, ತುಂಗಾ ನದಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಸೇರಿ ಎಲ್ಲೆಡೆ ಗರಿಷ್ಠ ನೀರು ಸಂಗ್ರಹವಾಗಿದೆ. ಜಿಲ್ಲೆಯಲ್ಲಿ ದಾಖಲೆ ಮಳೆ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಭರ್ಜರಿ ಮಳೆ ದಾಖಲಾಗಿದೆ. ವಿಶೇಷವಾಗಿ ಕಳೆದ 15 ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 429.50 ನಷ್ಟು ಮಳೆಯಾಗಿದೆ. ಇನ್ನೂ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ 52.00 MM , ಭದ್ರಾವತಿ 26.00 MM , ತೀರ್ಥಹಳ್ಳಿ 120.90 MM , ಸಾಗರ 129.90 MM, ಶಿಕಾರಿಪುರ 57.80 MM , ಸೊರಬ 58.50 MM, ಹೊಸನಗರ 133.60 MM ಮಳೆಯಾಗಿದೆ. ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 247 ಮಿಲಿ ಮೀಟರ್ ಹುಲಿಕಲ್ಲಿನಲ್ಲಿ 245 ಮಿಲಿ ಮೀಟರ್ ಮಾಣೆಯಲ್ಲಿ 240 ಮಿಲಿ ಮೀಟರ್, ಯಡೂರಿನಲ್ಲಿ 229 mm ಸಾವೇಹಕಲಿನಲ್ಲಿ 210 ಮಿಲಿ ಮೀಟರ್ ಕಾರ್ಗಲ್ನಲ್ಲಿ 194 ಮಿಲಿ ಮೀಟರ್, ಬಿದನೂರು ನಗರ ದಲ್ಲಿ 157 ಮಿಲಿ ಮೀಟರ್ ಹೊಸನಗರದಲ್ಲಿ 138 ಮಿಲಿ ಮೀಟರ್ ಹೋಂಬುಜದಲ್ಲಿ 125.4 ಮಿಲಿ ಮೀಟರ್ ಅರಸಾಳಿನಲ್ಲಿ 91.8 ಮಿಲಿ ಮೀಟರ್ ಮಳೆ ಬಿದ್ದಿದೆ.
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಿಗ್ಗೆ 8:00ಗೆ 1782.15 ಅಡಿ ತಲುಪಿದ್ದು ಜಲಾಶಯಕ್ಕೆ 77911 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1755.90 ಅಡಿ ದಾಖಲಾಗಿತ್ತು ಸೋಮವಾರ ಒಂದೇ ದಿನ ಜಲಾಶಯಕ್ಕೆ ನಾಲ್ಕು ಮಾಡಿ ಗಳಷ್ಟು ನೀರು ಹರಿದು ಜಲಾಶಯ ಶೇಕಡ 37.47 ಭಾಗ ಭರ್ತಿಯಾಗಿದೆ .
ಹೊಸನಗರ: ಮಾಸ್ತಿಕಟ್ಟೆ – ಹುಲಿಕಲ್ ನಲ್ಲಿ ದಾಖಲಾಯ್ತು ಅತೀ ಹೆಚ್ಚು ಮಳೆ!
ಹೊಸನಗರ : ಮಲೆನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಬೆಳಿಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಸ್ತಿಕಟ್ಟೆಯಲ್ಲಿ 247 ಮಿಲಿ ಮೀಟರ್ ಅತ್ಯಧಿಕ ಮಳೆ ಸುರಿದಿದೆ.
ಮಳೆ ನಡುವೆ ಅಪಘಾತ:
ಶಿವಮೊಗ್ಗ: ಸಕ್ರೆಬೈಲಿನ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಬೆಳಿಗ್ಗೆ ಆಗುಂಬೆಯಿಂದ ಬೆಂಗಳೂರಿಗೆ ಹೊರಟ ಕೆಎಸ್ ಆರ್ ಟಿಸಿ ಬಸ್ ಸಕ್ರೆ ಬೈಲಿನ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕೇವಲ 8 ಜನ ಪ್ರಯಾಣಿಕರಿದ್ದು ಇವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
– ಹೊಸನಗರ : ತೆಂಗಿನಮರ ಮನೆಯ ಮೇಲೆ ಬಿದ್ದು ಬಾರಿ ನಷ್ಟ
ಹೊಸನಗರ : ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ವಾಸದ ಮನೆ ಮೇಲೆ ಮಂಗಳವಾರ ಮಧ್ಯಾಹ್ನ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.
– ರಿಪ್ಪನಪೇಟೆ : ಮನೆ ಕುಸಿತ, ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ
ರಿಪ್ಪನಪೇಟೆ: ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಅರಸಾಳು ಗ್ರಾಪಂ ವ್ಯಾಪ್ತಿಯ ಹೊಟ್ಯಾಳಪುರದಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ. ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಶಬ್ದ ಬಂದಿದ್ದರಿಂದ ನೋಡಿದಾಗ ಮನೆ ಗೋಡೆ ಕುಸಿದಿದ್ದು, ಕುಟುಂಬ ಸುರಕ್ಷಿತವಾಗಿ ಪಾರಾಗಿದೆ. ಹೊಟ್ಯಾಳಪುರ ಗ್ರಾಮದ ಪ್ರಭಾಕರ್ ಎಂಬುವವರ ಮನೆಯ ಗೋಡೆ ಕುಸಿದಿದೆ
– ಹೊಸನಗರ: ಬಾಳೆಬರೆಯಲ್ಲಿ ಗುಡ್ಡ ಕುಸಿತ
ಹೊಸನಗರ: ತಾಲೂಕಿನ ಬಾಳೆಬರೆ (ಹುಲಿಕಲ್ ) ಘಾಟಿನಲ್ಲಿ ಗುಡ್ಡ ಕುಸಿದು 10 ದಿನ ಕಳೆದರೂ ಯಾರು ಕೇಳೋರಿಲ್ಲ ಎಂಬ ಪರಿಸ್ಥಿತಿ ಉದ್ದವ ವಾಗಿದೆ. ಈಗಾಗಲೇ ಗುಡ್ಡ ಕುಸಿದು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟ. ಬಾಳೆಬರೆ ಘಾಟ್ ರಸ್ತೆ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಇದ್ದು ಹೆದ್ದಾರಿ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಗುಡ್ಡದ ಮಣ್ಣು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತೀರ್ಥಹಳ್ಳಿ : ತುಂಗಾ ನದಿ ಹತ್ತಿರ ಹುಚ್ಚಾಟ ಬೇಡ!
ತೀರ್ಥಹಳ್ಳಿ: ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು ಕೆಲವರು ನದಿಪಾತ್ರದಲ್ಲಿ ಹುಚ್ಚಾಟ ಮೆರೆಯುತ್ತಿರುವುದು ಕಂಡು ಬರುತ್ತಿದೆ, ಸಾರ್ವಜನಿಕರು ಅಂತಹ ಹುಚ್ಚಾಟಕ್ಕೆ ಮುಂದಾಗಿ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ತಿಳಿಸಿದ್ದಾರೆ. ತುಂಗಾ ನದಿ ಅಪಾಯ ಮಟ್ಟ ತಲುಪುತ್ತಿದೆ. ನದಿಪಾತ್ರದಲ್ಲಿ ಹೆಚ್ಚಿನ ನೀರಿನ ಹರಿವು ಇರುವುದರಿಂದ ಸಾರ್ವಜನಿಕರು ನೀರಿಗೆ ಇಳಿಯುವುದು ಸೆಲ್ವಿ ತೆಗೆಯುವಂತ ಹುಚ್ಚಾಟಕ್ಕೆ ಮುಂದಾಗಬಾರದು. ಒಂದು ವೇಳೆ ನದಿ ದಡದಲ್ಲಿ ಪೊಲೀಸ್ ಸೇವೆ ಅವಶ್ಯಕವೆನಿಸಿದರೆ ಹತ್ತಿರದ ಪೊಲೀಸ್ ಠಾಣೆ ಅಥವಾ 112ಸಂಖ್ಯೆಗೆ ಕರೆಮಾಡಬೇಕು ಎಂದು ಮಾಹಿತಿ ನೀಡಿದ್ದಾರೆ.