ಶಿವಮೊಗ್ಗ ಜಿಲ್ಲೆ ಟಾಪ್ 5 ನ್ಯೂಸ್
ಸೊರಬ: ಸರ್ಕಾರಿ ಶಾಲೆ ಗೋಡೆ ಕುಸಿತ ಮಕ್ಕಳು ಬಚಾವ್!
– ಶಿಕ್ಷಣ ಸಚಿವರ ತವರಲ್ಲೇ ಘಟನೆ : ಹೆಚ್ಚಿದ ಮಳೆಗೆ ಘಟನೆ
– ಶಿಕಾರಿಪುರ: ಕಾರಿಗೆ -ಬಸ್ ಡಿಕ್ಕಿ: ಫಾದರ್ ಆಂಥೋಣಿ ಫೀಟರ್ ಸಾವು
– ಸಾಗರ : ಪ್ರೀತಿಸಿದ ಯುವತಿ ಕೊಂದು ಹೂತಿಟ್ಟ ಯುವಕ!
– ಶಿವಮೊಗ್ಗ : ಆಗುಂಬೆ, ಜೋಗದಲ್ಲಿ ಟೂರಿಸ್ಟ್ಗೂ ಬಿತ್ತು ಫೈನ್!
– ಹೊಸನಗರ: ಕೊಲ್ಲೂರು ಘಾಟಿಯಲ್ಲಿ ಶಾಲಾ ಬಸ್ ಉರುಳಿ ಹಲವರಿಗೆ ಗಾಯ
NAMMUR EXPRESS NEWS
ಸೊರಬ : ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲಿಯೇ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. ತಾಲೂಕಿನ ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಈ ಶಾಲೆ ಶಿಕ್ಷಣ ಸಚಿವರ ತವರು ಕ್ಷೇತ್ರ ಕುಬಟೂರನಿಂದ 2 ಕಿಮಿ ದೂರದಲ್ಲಿದೆ. ಗೋಡೆ ಕುಸಿತಕ್ಕೆ ಬೆಂಚುಗಳು ಮುರಿದು ಹೋಗಿವೆ. ಶಾಲೆಯಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ತರಗತಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿದಿದೆ. ವಿದ್ಯಾರ್ಥಿಗಳಿಗೆ ಯಾವುದೇ ಅನಾಹುತವಾಗಿಲ್ಲ. ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂಬುದು ಪೋಷಕರ ಆರೋಪವಾಗಿದೆ. ಬಿಇಓ ರವರು ಬಂದು ತಪಾಸಣೆ ನಡೆಸಿದ್ದರು. ತಪಾಸಣೆ ನಡೆಸಿದ ಮರುದಿನವೇ ಈ ಘಟನೆ ನಡೆದಿದೆ.
ಕಾರಿಗೆ ಬಸ್ ಡಿಕ್ಕಿ ಶಿಕಾರಿಪುರ ಫಾದರ್ ಆಂಥೋಣಿ ಫೀಟರ್ ಸಾವು
ಶಿವಮೊಗ್ಗ : ಭೀಕರ ಅಪಘಾತವೊಂದರಲ್ಲಿ ಫಾದರ್ ಆಂಥೋಣಿ ಫೀಟರ್ ಸಾವನ್ನಪ್ಪಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳು ಸಾವನ್ನಪ್ಪಿದ್ದಾರೆ. ಮೂರುವರೆ ಹೊತ್ತಿಗೆ ಗಂಟೆಗೆ ನಡೆದಿದೆ. ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿ ಯಾಗಿದೆ. ದಾರಿಯಲ್ಲಿ ಅಡ್ಡಬಂದ ಎಮ್ಮೆಯೊಂದನ್ನ ತಪ್ಪಿಸಲು ಹೋದ ಕೆಎಸ್ಆರ್ಟಿಸಿ ಬಸ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಫಾದರ್ ಆಂಥೋಣಿ ಪೀಟರ್ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.
– ಸಾಗರ : ಯುವತಿ ಕೊಂದು ಹೂತಿಟ್ಟ ಯುವಕ
ಸಾಗರ ತಾಲ್ಲೂಕು ಆನಂದಪುರದಲ್ಲಿ ವಿಫಲಗೊಂಡ ಪ್ರೀತಿ ಪ್ರೇಮ ಮದುವೆ ಪ್ರಕರಣದಲ್ಲಿ ಯುವತಿಯೊಬ್ಬಳ ಕೊಲೆಯಾಗಿದೆ. ಘಟನೆಯ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಕಳೆದ ಕೆಲದಿನಗಳ ಹಿಂದೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣವೊಂದು ದಾಖಲಾಗಿತ್ತು. ಅದರ ಬೆನ್ನಲ್ಲೆ ಈ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಸಾಗರ ಮೂಲದ ಯುವಕ ಹಾಗೂ ಕೊಪ್ಪ ತಾಲ್ಲೂಕು ಯುವತಿ ಪರಸ್ಪರ ಪ್ರೀತಿಸಿದ್ದರು (ಹೆಸರು ನೈಜವಾದುದಲ್ಲ) ಇಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದು ಯುವತಿ ದಲಿತ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ. ಪರಸ್ಪರ ಮದುವೆಯಾಗಿದ್ದ ಜೋಡಿ ಅನಧಿಕೃತವಾಗಿ (ಪತಿಯ ಮನೆಯಲ್ಲ) ಕೊಪ್ಪದಲ್ಲಿ ವಾಸ ಮಾಡುತ್ತಿತ್ತು. ಈ ನಡುವೆ ಇಬ್ಬರ ನಡುವೆ ಪರಸ್ಪರ ಜಗಳವಾಗಿದೆ. ಯುವತಿ ತನ್ನನ್ನು ಸಾಗರದಲ್ಲಿರುವ ಆತನ ನಿವಾಸಕ್ಕೆ ಕರೆದೊಯ್ಯುವಂತೆ ಪತಿಯನ್ನ ಕೇಳಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳದ ಬೆನ್ನಲ್ಲೆ ಯುವಕ ಯುವತಿಯನ್ನ ಆಕೆಯ ತಾಯಿಯ ಮನೆಗೆ ಹೋಗುವಂತೆ ಸೂಚಿಸಿದ್ದಾನೆ. ಮನೆಯಲ್ಲಿ ಎಲ್ಲರನ್ನ ಒಪ್ಪಿಸಿ ಮನೆ ತುಂಬಿಸಿಕೊಳ್ಳುವುದಾಗಿ ಹೇಳಿದ್ದನಂತೆ. ಆದರೆ ಹುಡುಗಿ ಆತನ ಮಾತು ನಂಬಿ ತನ್ನ ತಾಯಿ ಮನೆಗೆ ಹೋಗಲು ಸಿದ್ಧಳಿರಲಿಲ್ಲ. ಇದೇ ವಿಚಾರವಾಗಿ ಸಾಗರಕ್ಕೆ ಬಂದು ಯುವತಿ ಗಲಾಟೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವಿನ ಕಲಹ ತಾರಕಕ್ಕೇರಿದೆ. ಅಲ್ಲದೆ ಯುವತಿ ಸಾಗರದಿಂದ ಹೆದ್ದಾರಿಪುರಕ್ಕೆ ಬಂದು ನಿಂತು ಯುವಕನ ಜೊತೆಗೆ ಮಾತನಾಡಿದ್ದಾಳೆ. ಅಲ್ಲಿಯು ಇಬ್ಬರ ನಡುವೆ ಗಲಾಟೆಯಾಗಿದೆ, ಈ ವೇಳೆ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದು, ಬಿದ್ದ ಏಟು ತಿನ್ನಲಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಇದಿಷ್ಟು ನಡೆದ ಘಟನೆ ಎಂದು ಮೂಲಗಳು ಹೇಳಿವೆ. ಕೊಪ್ಪ ಪೊಲೀಸರು ಶಿವಮೊಗ್ಗದ ಆನಂದಪುರ ಪೊಲೀಸ್ ಸ್ಟೇಷನ್ನ್ನ ಸಂಪರ್ಕಿಸಿದ್ದು ಹೆದ್ದಾರಿಪುರದಲ್ಲಿ ಮಹಜರ್ ನಡೆಸ್ತಿದ್ದಾರೆ. ಆರೋಪಿಯನ್ನ ವಶಕ್ಕೆ ಪಡೆದಿರುವ ಅವರು ವಿಚಾರಣೆ ನಡೆಸಿದಾಗ ಯುವತಿಯನ್ನ ಕೊಂದು ಆಕೆಯನ್ನು ಆನಂದಪುರದ ಮುಂಬಾಳು ಸಮೀಪ ಹುಗಿದು ಹಾಕಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಯುವತಿಯ ಶವವನ್ನು ಮೇಲಕ್ಕೆ ತೆಗೆದು ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.
– ಶಿವಮೊಗ್ಗ : ಆಗುಂಬೆ, ಜೋಗದಲ್ಲಿ ಟೂರಿಸ್ಟ್ಗೂ ಬಿತ್ತು ಫೈನ್
ಶಿವಮೊಗ್ಗದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ. ಇದಕ್ಕೆ ಪೊರಕ ಸಾಕ್ಷಿ ಎಂಬಂತೆ ನಾಲ್ಕು ಪ್ರಕರಣಗಳು ಇಲ್ಲಿದೆ. ಶಿವಮೊಗ್ಗ ಸಂಚಾರಿ ಪೊಲೀಸರು ದ್ವಿಚಕ್ರವಾಹನವೊಂದು 12 ಬಾರಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದನ್ನ ಪತ್ತೆ ಹಚ್ಚಿದ್ದಾರೆ. ಅಲ್ಲದೆ ಆ ವಾಹನದ ಮಾಲೀಕರಿಂದ ₹-12000/- ದಂಡ ವಿಧಿಸಿದ್ದಾರೆ. ಇನ್ನೊಂದೆಡೆ ಕಾರೊಂದು 14 ಬಾರಿ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ ಆರೋಪ ಎದುರಿಸಿದ್ದು, ಈ ಸಂಬಂದ ₹-14500/ ದಂಡ ವಿದಿಸಲಾಗಿದೆ. ಇನ್ನೊಂದೆಡೆ ಶರಾವತಿ ಕಣಿವೆ ಪ್ರದೇಶದಲ್ಲಿ ಪ್ರದೇಶದಲ್ಲಿ ಇತ್ತೀಚೆಗೆ ಪಾನಮತ್ತನಾಗಿ ವಾಹನ ಚಲಾಯಿಸಿದ ಸಂತೋಷ ಎಂಬಾತನಿಗೆ ಸಾಗರದ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಈತನ ವಿರುದ್ಧ ಕಾರ್ಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅತ್ತ ಆಗುಂಬೆಯಲ್ಲಿ ಕುಡಿದು ವಾಹನ ಚಲಾಯಿಸಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನಿಗೆ ನ್ಯಾಯಲಯ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಆಗುಂಬೆ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ವಿಚಾರದಲ್ಲಿ ಕೇಸ್ ದಾಖಲಿಸಿದ್ದ ಪ್ರಕರಣ ಇದಾಗಿತ್ತು.
ಕೊಲ್ಲೂರು ಘಾಟಿಯಲ್ಲಿ ಶಾಲಾ ಬಸ್ ಉರುಳಿ ಹಲವರಿಗೆ ಗಾಯ
ಶಿವಮೊಗ್ಗ : ಕೊಲ್ಲೂರು ಘಾಟಿಯಲ್ಲಿ ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ ಖಾಸಗಿ ಬಸ್ ಒಂದು ರಸ್ತೆಯ ಪಕ್ಕಕ್ಕೆ ಉರುಳಿದೆ. ವಿದ್ಯಾರ್ಥಿಗಳೇ ಹೆಚ್ಚಿದ್ದ ಬಸ್ನಲ್ಲಿ ಯಾವುದೇ ಸಾವು ನೋವುಗಳಾಗದಿದ್ದರೂ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಶಿವಮೊಗ್ಗದಿಂದ ಸಾಗರದ ಮೂಲಕ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಘಾಟಿಯಲ್ಲಿ ಪ್ರಯಾಣಿಸುವಾಗ ಅವಘಡ ಸಂಭವಿಸಿದೆ. ಶಾಲಾ ಮಕ್ಕಳಿಗೆ ಗಾಯಗಳಾಗಿವೆ. ಘಟನೆಗೆ ಬ್ರೇಕ್ ಫೇಲ್ ಎಂದು ಹೇಳಲಾಗುತ್ತಿದೆ. ಆದರೆ ಅಪಘಾತಕ್ಕೆ ಟಯರ್ ಗಳು ಸವದಿದ್ದರೂ ಗಾಡಿ ಚಲಾಯಿಸಿದ ಪರಿಣಾಮ ಘಟನೆ ನಡೆದಿರುವುದಾಗಿ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಟಯರ್ ಸವದಿರುವ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದರೂ ಚಾಲಕ ವಾಹನ ಚಲಾಯಿಸಿದ ಪರಿಣಾಮ ಘಟನೆ ನಡೆದಿದೆ ಎಂದು ಸಾಗರ ತಾಲೂಕಿನ ತುಮರಿ ಭಾಗದ ಸಾಮಾಜಿಕ ಹೋರಾಟಗಾರರೊಬ್ಬರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.