1 ವರ್ಷ ಪೂರೈಸಿದ ಶಿವಮೊಗ್ಗ ವಿಮಾನ ನಿಲ್ದಾಣ
– ಅಲ್ಪಾವಧಿಯಲ್ಲೇ ಉತ್ತಮ ಸ್ಪಂದನೆ
– ನಾಮಕರಣ ಭಾಗ್ಯವೇ ಇಲ್ಲ!
NAMMUR EXPRESS NEWS
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಬಂದಿಳಿದು, ವಿಮಾನ ನಿಲ್ದಾಣ ಉದ್ಘಾಟಿಸಿದ ಶಿವಮೊಗ್ಗ ಏರ್ಪೋರ್ಟ್ ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಅಂದಿನಿಂದ ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಗತಿಸಿದೆ. ಈ ಅಲ್ಪ ಅವಧಿಯಲ್ಲಿ ವಾಯುಯಾನ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳು ಸ್ಥಾಪನೆಗೊಂಡಿವೆ. ರಾಜ್ಯದಲ್ಲಿರುವ ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳು ಆರಂಭವಾದರೂ ನಿರೀಕ್ಷಿತ ಸ್ಪಂದನೆ ಇಲ್ಲ. ಒಂದೆರಡು ವಿಮಾನಗಳು ಸಂಚರಿಸಿದರೆ ಅದೇ ಹೆಚ್ಚು. ಆದರೆ, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಈ ವಿಚಾರದಲ್ಲಿ ಭಿನ್ನ ಎನಿಸಿಕೊಂಡಿದೆ. ಮಧ್ಯ ಕರ್ನಾಟಕದ ಕೈಮರದಂತಿರುವ ಇಲ್ಲಿ ವಿಮಾನಗಳ ಹಾರಾಟದ ನಿರೀಕ್ಷೆ ದಿಟವಾಗಿದೆ.
ಬರೀ ಆರು ತಿಂಗಳ ಅವಧಿಯಲ್ಲಿ(ಆ.31, 2023ರಿಂದ ಫೆ.26, 2024ರ ವರೆಗೆ) ವಿಮಾನಗಳು 288 ಸಲ ಆಗಮನ ಮತ್ತು ನಿರ್ಗಮನವಾಗಿವೆ. ಹೈದರಾಬಾದ್, ತಿರುಪತಿ, ಗೋವಾ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಂದ ಶಿವಮೊಗ್ಗಕ್ಕೆ 11,681 ಜನ, ಶಿವಮೊಗ್ಗದಿಂದ ವಿವಿಧೆಡೆ 13,401 ಜನ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಸರಾಸರಿ ಶೇ.50ಕ್ಕೂ ಅಧಿಕ ಆಸನಗಳು ಭರ್ತಿ ಆಗಿರುತ್ತಿವೆ. ತಜ್ಞರ ಪ್ರಕಾರ, ವಿಮಾನ ಹಾರಾಟ ಆರಂಭಗೊಂಡ ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾರ್ಗಗಳಿಗೆ ವಿಮಾನ ಸಂಚಾರ ಲಭ್ಯವಾಗಿದ್ದಲ್ಲದೇ ಜನಸ್ಪಂದನೆಯೂ ನಿರೀಕ್ಷೆಯಷ್ಟಿದೆ. ಇದು ಉತ್ತಮ ಬೆಳವಣಿಗೆಯಾಗಿದೆ.
ನಾಮಕರಣ ಭಾಗ್ಯವೇ ಇಲ್ಲ!
ವಿಚಿತ್ರವೆಂದರೆ, ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಹಾಗೂ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಿ ಆರು ತಿಂಗಳು ಗತಿಸಿದೆ. ಆದರೆ, ಇದುವರೆಗೆ ನಾಮಕರಣ ಭಾಗ್ಯ ಪ್ರಾಪ್ತವಾಗಿಲ್ಲ. ಯಾವುದೇ ವಿಮಾನ ನಿಲ್ದಾಣಕ್ಕೆ ಹೆಸರು ಅಂತಿಮಗೊಳಿಸಬೇಕಾದರೆ, ಕೇಂದ್ರ ಸರಕಾರ ಕ್ಯಾಬಿನೆಟ್ನಲ್ಲಿಆ ವಿಷಯವನ್ನು ತರಬೇಕು. ಅಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಗೆಜೆಟ್ ಹೊರಡಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಿಂದ ‘ಕುವೆಂಪು’ ಅವರ ಹೆಸರಿಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಕೇಂದ್ರದಲ್ಲಿ ಹೆಸರು ನನೆಗುದಿಗೆ ಬಿದ್ದಿದೆ. ತಾತ್ಕಾಲಿಕವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಎಂದು ನಮೂದಿಸಿದ್ದು, ಇದಿನ್ನು ಅಂತಿಮವಾಗಿಲ್ಲ. ಹೆಸರೇ ಇಲ್ಲದ ನಿಲ್ದಾಣದಿಂದ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ಶೀಘ್ರವೇ ನೈಟ್ಲ್ಯಾಂಡಿಂಗ್
ಶಿವಮೊಗ್ಗ ನಿಲ್ದಾಣದಿಂದ ವಿಮಾನಗಳ ಸಂಚಾರ ಆರಂಭವಾಗಿರುವುದರಿಂದ ನೈಟ್ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲು ವಿಳಂಬವಾಗುತ್ತಿದೆ. ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕೆಲಸವನ್ನು ಶೀಘ್ರವೇ ಮುಗಿಸಲಾಗುವುದು ಎನ್ನುತ್ತಾರೆ ವಿಮಾನ ನಿಲ್ದಾಣ ಅಧಿಕಾರಿಗಳು. ನೈಟ್ ಲ್ಯಾಂಡಿಂಗ್ ಕಾಮಗಾರಿ ಪೂರ್ಣಗೊಂಡ ಬಳಿಕ ದೂರ ಮಾರ್ಗದ ವಿಮಾನಗಳ ಸಂಚಾರವೂ ಆರಂಭವಾಗಲಿದೆ.