ಟಾಪ್ 4 ನ್ಯೂಸ್ ಶಿವಮೊಗ್ಗ ಜಿಲ್ಲೆ
– ಮೀನು ಹಿಡಿಯಲು ಹೋದವರ ಕಾರು ಆಕ್ಸಿಡೆಂಟ್!
– ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಘಟನೆ
– ಸಾಗರ : ಅಪಘಾತದಲ್ಲಿ ಗಾಯಗೊಂಡಿದ್ದ ಯಕ್ಷಗಾನ ಭಾಗವತ ವೇಣುಗೋಪಾಲ ಸಾವು
– ಶಿವಮೊಗ್ಗ: ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆ: ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
– ಹೊಸ ನಗರ: ಪುನೀತ್ ಧ್ವಜಸ್ಥಂಭ ಕೆಡವಿ ವಿಕೃತ ಮೆರೆದ ಕಿಡಿಗೇಡಿಗಳು!
NAMMUR EXPRESS NEWS
ತೀರ್ಥಹಳ್ಳಿ: ಮೀನು ಹಿಡಿಯಲು ಹೋಗಿದ್ದ ಐದು ಮಂದಿಯಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಮೀನು ಹಿಡಿಯಲು ಹೋದವರ ಕಾರು ಲೈಟ್ ಕಂಬ ಹಲಸಿನ ಮರಕ್ಕೆ ಗುದ್ದಿದೆ. ಕಂಬ ಬಿದ್ದಿದೆ, ಇಬ್ಬರು ಗಂಭೀರ ಹಾಗೂ ಮೂವರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ಕೌರಿಬೈಲು ಮೂಲದ ಐವರು ಸ್ನೇಹಿತರು ಮರ ಗೆಲಸ ಮಾಡಿಕೊಂಡಿದ್ದರು. ಮತ್ತಗ ಹಿನ್ನೀರಲ್ಲಿ ಮೀನು ಹಿಡಿಯಲು ಹೋಗಿದ್ದರು ಎಂದು ತಿಳಿದು ಬಂದಿದೆ. ಆಗುಂಬೆ ಠಾಣೆ ಪೊಲೀಸರು ಪ್ರಕರಣ ದಾಖಳಿಸಿದ್ದಾರೆ.
– ಸಾಗರ : ಯಕ್ಷಗಾನ ಭಾಗವತ ವೇಣುಗೋಪಾಲ ಇನ್ನಿಲ್ಲ
ಸಾಗರ : ಅಪಘಾತದಲ್ಲಿ ಗಾಯಗೊಂಡಿದ್ದ ಸಿಗಂದೂರು ಶ್ರೀ ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊಸನಗರ ತಾಲೂಕಿನ ಪುರಪ್ಪೆಮನೆ ಕೆಳಮನೆ ಗ್ರಾಮದ ಕೆ.ಜಿ. ವೇಣುಗೋಪಾಲ (44) ಸಾವನ್ನಪ್ಪಿದ್ದಾರೆ. ರಾತ್ರಿ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹಸು ಅಡ್ಡ ಬಂದಿದ್ದು ಆಯತಪ್ಪಿ ಬೈಕ್ನಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಮೃತರು ತಂದೆ, ಭಾಗವತ ಕೆ.ಜಿ.ರಾಮರಾವ್, ತಾಯಿ ಹಾಗೂ ಓರ್ವ ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ, ಮಂದಾರ್ತಿ ಮೇಳದ ಭಾಗವತರಾಗಿಯೂ ಕೆಲಸ ಮಾಡಿದ್ದರು. ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಗುರುಗಳಾಗಿಯೂ ಕೆಲಸ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದರು. ರಂಗ ಪ್ರದರ್ಶನ ಹಾಗೂ ಭಾಗವತಿಕೆಗಳೆರಡರಲ್ಲೂ ಅವರು ತಮ್ಮ ಛಾಪು ತೋರಿಸಿದ್ದರು. ಬಯಲಾಟದ ಪ್ರಸಂಗಗಳಿಗೂ ಭಾಗವತರಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಗಮನ ಸೆಳೆದಿದ್ದರು.
– ಶಿವಮೊಗ್ಗ : ಸರ್ಕಾರಿ ಶಾಲೆ ಸಮೀಪ ಅಸ್ವಸ್ಥರಾಗಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು!
ಶಿವಮೊಗ್ಗ: ಸರ್ಕಾರಿ ಶಾಲೆಯೊಂದರ ಬಳಿ ಪತ್ತೆಯಾದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಆಕೆ ಮೃತಳಾಗಿದ್ದು, ಆಕೆಯ ಗುರುತು ಪತ್ತೆಗಾಗಿ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆಯನ್ನ ನೀಡಿದ್ದಾರೆ. ಅದರ ವಿವರ ಹೀಗಿದೆ. ಕಳೆದ ಜೂನ್ 10 ರಂದು ಬೆಳಗ್ಗೆ 10.00 ಕ್ಕೆ ಶಿವಮೊಗ್ಗದ ಸೋಗಾನೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸುಮಾರು 60 ರ ವಯಸ್ಸಿನ ಮಹಿಳೆ ಅನಾರೋಗ್ಯದಿಂದ ನರಳುತ್ತಿದ್ದನ್ನ ಸ್ಥಳೀಯರು ಗಮನಿಸಿದ್ದಾರೆ. ಆ ಬಳಿಕ ಸಾರ್ವಜನಿಕರ ಸಹಾಯದಿಂದ ಆಕೆಯುನ್ನು ಅಂಬ್ಯುಲೇನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇದುವರೆಗೂ ಈಕೆಯ ಊರು ಹೊನ್ನಾಳಿ ಎಂದು ತಿಳಿದಬಂದಿದ್ದು ಹೆಸರು, ವಿಳಾಸ, ವಾರಸುದಾರರ ಪತ್ತೆಯಾಗಿರುವುದಿಲ್ಲ ಈ ಸಂಬಂಧ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
– ಹೊಸನಗರ: ಪುನೀತ್ ಧ್ವಜಸ್ಥಂಭ ಕೆಡವಿದ ಕಿಡಿಗೇಡಿಗಳು!
ಹೊಸನಗರ : ಪಟ್ಟಣದ ನಗರ ರಸ್ತೆಯ ರಾಜ್ಯ ಹೆದ್ದಾರಿ 766 ಸಿ ಮೆಸ್ಕಾಂ ಕಛೇರಿ ಎದುರಿನ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿದ್ದ 70 ಅಡಿ ಎತ್ತರದ ಧ್ವಜಸ್ಥಂಭವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಹೊಸನಗರದ ಮಿತ್ರಕೂಟ ಕನ್ನಡ ಸಂಘ ಹಾಗೂ ರಾಜರತ್ನ ಡಾ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದವರು ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ 70 ಗಾಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿದ್ದರು. ರಾಷ್ಟ್ರೀಯ ದಿನಾಚರಣೆಗಳಲ್ಲಿ ರಾಷ್ಟ್ರಧ್ವಜ ಹಾಗೂ ಇತರೆ ದಿನಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು ಮಂಗಳವಾರ ರಾತ್ರಿ ತೀವ್ರ ವರ್ಷಧಾರೆ ನಡುವೆಯೂ ಯಾರೋ ಕಿಡಿಗೇಡಿಗಳು ಧ್ವಜಸ್ತಂಭವನ್ನು ಧ್ವಂಸಗೊಳಿಸಿರುವ ಘಟನೆ ಸಂಭವಿಸಿದೆ. ಈ ಘಟನೆ ಬೆಳಿಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇಂತಹ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.