ಮಕ್ಕಳಿಗೆ ಬೈಕ್ ಕೊಟ್ಟರೆ ಹುಷಾರ್!
– ಶಿವಮೊಗ್ಗ: ಬಾಲಕನಿಗೆ ಬೈಕ್ ಕೊಟ್ಟ ಅಪ್ಪನಿಗೆ 30 ಸಾವಿರ ದಂಡ!
– ಶಿಕಾರಿಪುರ: ಚೂರಿ ಇರಿತ: ಇಬ್ಬರು ಅರೆಸ್ಟ್?
– ಚಿಕ್ಕಮಗಳೂರು: ಲಂಚ ತೆಗೆದುಕೊಂಡು ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿ!
– ಮಲೆನಾಡಲ್ಲಿ ಹೆಚ್ಚಾಗುತ್ತಿದೆ ಮಂಗನ ಕಾಯಲೆ!
NAMMUR EXPRESS NEWS
ಶಿವಮೊಗ್ಗ; ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದಿದ್ದರೂ ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದ ತಾಯಿಗೆ ಇಲ್ಲಿನ 3ನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹30 ಸಾವಿರ ದಂಡ ವಿಧಿಸಿದೆ. ಕಳೆದ ಜನವರಿ 30ರಂದು ಪೂರ್ವ ಸಂಚಾರ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ನಗರದ ಎಸ್ ಪಿಎಂ ರಸ್ತೆಯ ಕೋಟೆ ಆಂಜನೇಯನ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಬಾಲಕ ವಾಹನ ಚಾಲನಾ ಪರವಾನಗಿ ಇಲ್ಲದೆ ಸ್ಕೂಟರ್ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ. ಈ ಸಂಬಂಧ ವಾಹನದ ಮಾಲೀಕರಾದ ಬಾಲಕನ ತಾಯಿಯ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. ಆರೋಪ ಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.
ಮಲೆನಾಡಲ್ಲಿ ಹೆಚ್ಚುತ್ತಿದೆ ಮಂಗನ ಕಾಯಲೆ!
ಚಿಕ್ಕಮಗಳೂರು: ಮಂಗನ ಕಾಯಿಲೆ (ಕೆಎಫ್ಡಿ) ದೃಢಪಟ್ಟಿದ್ದ ಶೃಂಗೇರಿ ತಾಲ್ಲೂಕಿನ ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ಸುಬ್ಬಯ್ಯ ಗೌಡ ಮಣಿಪಾಲ್ನ ಆಸ್ಪತ್ರೆಯಲ್ಲಿ ಇತ್ತೀಚಿಗೆ ನಿಧನರಾದ ಘಟನೆ ನಡುವೆ ಮಲೆನಾಡಲ್ಲಿ ಮಂಗನ ಕಾಯಲೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಲೆ ಉಲ್ಬಣ ಆಗುತ್ತಿದೆ. ಈ ಹಿನ್ನೆಲೆ ಆಡಳಿತ ಕೂಡ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಕೆಲವು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಲಂಚ: ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಕ ಅರೆಸ್ಟ್!
ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಕ ಬಸವರಾಜು ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ ಬಸ್ ಚಾಲಕನಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಸವರಾಜು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆ ಚಾಲಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಚಾಲಕ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಸವರಾಜುನನ್ನು ಬಂಧಿಸಿದ್ದಾರೆ.
ಶಿಕಾರಿಪುರದಲ್ಲಿ ಚೂರಿ ಇರಿತ: ಇಬ್ಬರ ಬಂಧನ
ಶಿಕಾರಿಪುರ: ಪಟ್ಟಣದ ದೊಡ್ಡಪೇಟೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದನ್ನು ಆಕ್ಷೇಪಿಸಿದ ವಿಚಾರಕ್ಕೆ ವಾಗ್ವಾದ ನಡೆದು ಯುವಕನಿಗೆ ಚಾಕು ಇರಿಯಲಾಗಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದೊಡ್ಡಪೇಟೆ ನಿವಾಸಿ, ಕುಮದ್ವತಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಸುಶೀಲ್ (23) ಚಾಕು ಇರಿತಕ್ಕೊಳಗಾದವರು. ಮುಬಾರಕ್ ಹಾಗೂ ಜೀಶಾನ್ ಬಂಧಿತರು.ಸುಶೀಲ್ಗೆ ಬೇರೆ ಕೋಮಿನ ನಾಲ್ವರು ಯುವಕರ ತಂಡ ಮಂಗಳವಾರ ರಾತ್ರಿ ಚಾಕುವಿನಿಂದ ಇರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.