ಶಿವಮೊಗ್ಗ ಜಿಲ್ಲೆಯ ಟಾಪ್ ನ್ಯೂಸ್
– ಶಿವಮೊಗ್ಗ: ಒಂಟಿ ಮಹಿಳೆ ಕೊಲೆ: ಕತ್ತು ಹಿಸುಕಿ ಕೊಂದವರು ಯಾರು?
– ಸೊರಬ: ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ
– ಶಿವಮೊಗ್ಗ: ಬಿಜೆಪಿ ನಾಯಕನಿಂದ ಅತ್ಯಾಚಾರ: ಕೇಸ್
– ಬಿಜೆಪಿ ವಿರುದ್ಧ ಕತ್ತೆಗಳ ಮೆರವಣಿಗೆ ಮಾಡಿದ ಕಾಂಗ್ರೆಸ್
– ತೀರ್ಥಹಳ್ಳಿ: ಅಪಘಾತಕ್ಕೆ ಮನೆ ಬಳಿಯೇ ಯುವಕ ಬಲಿ!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಒಂಟಿ ಮಹಿಳೆಯ ಕೊಲೆಯಾಗಿದೆ. ಕತ್ತು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ತಡರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಂಜರಿಕೊಪ್ಪದಲ್ಲಿ ಮಹಿಳೆಯ ಕೊಲೆಯಾಗಿದೆ. ಸಾವಿತ್ರಮ್ಮ (65) ಕೊಲೆಯಾದವರು. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಕೊಲೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಂತಕರ ಹುಡುಕಾಟವನ್ನು ನಡೆಸುತ್ತಿದ್ದಾರೆ.
ನಾಟಿ ಮಾಡಲು ಅಡ್ಡಿ; ಆತ್ಮಹತ್ಯೆಗೆ ವೃದ್ಧೆ ಯತ್ನ!
ಸೊರಬ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕುದುರೆಗಣಿ ಗ್ರಾಮದಲ್ಲಿ ಕೆಲವು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ವೃದ್ಧೆಯೊಬ್ಬರು ವಿಷ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬ ಸದಸ್ಯರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಭತ್ತ ನಾಟಿಗೆ ಸಿದ್ಧಪಡಿಸಿದ್ದ ಸಸಿ ಮಡಿಗಳನ್ನು ಬೆಳಗಿನಜಾವ ಗ್ರಾಮದ ಕೆಲವರು ಬದುವಿನ ಸಮೇತ ನಾಶಗೊಳಿಸಿದ್ದರು. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ವೃದ್ದೆ ಪುಟ್ಟಮ್ಮ (85) ಅವರು ಈ ಬೆಳವಣಿಗೆಯಿಂದ ಮತ್ತಷ್ಟು ನೊಂದುಕೊಂಡು ಗುರುವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮದುವೆಯಾಗುವುದಾಗಿ ರೇಪ್: ಬಿಜೆಪಿ ಪ್ರಮುಖನ ವಿರುದ್ಧ ಕೇಸ್
ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ಶರತ್ ಕಲ್ಯಾಣಿ ಎಂಬಾತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಶರತ್ ಕಲ್ಯಾಣಿಯು ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ‘ನಾನಿನ್ನು ಅವಿವಾಹಿತ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ’ ಎಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
7-8 ತಿಂಗಳಿಂದ ಮಹಿಳೆ ಜೊತೆ ನಿರಂತರ ಸಂಪರ್ಕದಲ್ಲಿದ್ದ ಶರತ್, ಸಂತ್ರಸ್ತ ಮಹಿಳೆಯು ಮದುವೆಯಾಗು ಎಂದು ಒತ್ತಾಯಿಸಿದರೆನ್ನಲಾಗಿದೆ. ಈ ವೇಳೆ ಶರತ್, ‘ನನಗೆ ಹಣಕಾಸಿನ ಸಮಸ್ಯೆ ಇದೆ. ಅದು ಬಗೆಹರಿದ ನಂತರ ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿದ್ದನು. ಅಲ್ಲದೆ, ಈಗ ನನಗೆ ಸಹಾಯ ಮಾಡು ಎಂದು ಕೇಳಿದ್ದ. ಈ ವೇಳೆ ಮಹಿಳೆಯು ಹಲವು ಬಾರಿ ಹಣ ನೀಡಿದ್ದು, ಒಟ್ಟು ನಾಲ್ಕು ಲಕ್ಷ ಹಣವನ್ನು ಶರತ್ಗೆ ನೀಡಿದ್ದರು. ನಂತರ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಶರತ್ ಆಕೆಯ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ, ಫೋನ್ ಸಂಪರ್ಕವನ್ನೂ ಕಡಿದುಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಕೇಳಲು ಮಹಿಳೆ ಗುಂಡಪ್ಪ ಶೆಡ್ಡಿನಲ್ಲಿರುವ ಶರತ್ ಕಲ್ಯಾಣಿಯ ಮನೆಗೆ ಹೋದಾಗ ಆತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇನ್ನೊಮ್ಮೆ ನಮ್ಮ ಮನೆ ಬಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ಕತ್ತೆಗಳ ಮೆರವಣಿಗೆ ಮಾಡಿದ ಕಾಂಗ್ರೆಸ್ l
ಶಿವಮೊಗ್ಗ : ಕತ್ತೆಗಳ ಮೆರವಣಿಗೆ ಮೂಲಕ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು. ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅನಗತ್ಯವಾಗಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಕಿಡಿಕಾರಿದರು.
ಬಿಜೆಪಿಯವರು ಕತ್ತೆಗಳು ಎಂದು ಜರಿದು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವನ್ನು ಇಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರು ಆಟವಾಡುತ್ತಿದ್ದಾರೆ. ಜನವಿರೋಧ ಪಕ್ಷವೆಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಅಭಿಮಾನಿಗಳ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮನೆ ಬಳಿಯೇ ಯುವಕ ಅಪಘಾತಕ್ಕೆ ಬಲಿ!
ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಲ್ಲಿ ಗುರುವಾರ ಅಪಘಾತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ರಂಜಿತ್ (36) ಮೃತ ಯುವಕ. ತೀರ್ಥಹಳ್ಳಿಯಿಂದ ಮನೆಗೆ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ಪತ್ನಿ, ಮಕ್ಕಳಿದ್ದಾರೆ.