ನಶೆಯಲ್ಲಿದ್ದ ಮೆಡಿಕಲ್ ವಿದ್ಯಾರ್ಥಿಯಿಂದ ಆಕ್ಸಿಡೆಂಟ್!
– ಶಿವಮೊಗ್ಗದಲ್ಲಿ ಘಟನೆ: ಜನರಿಂದ ಧರ್ಮದೇಟು
– ಹೊಸನಗರ: 15ರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು!
– ಶಿಕಾರಿಪುರ: ಐಫೋನ್ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ : ನಾಲ್ಕೇ ಗಂಟೆಯಲ್ಲಿ ಅರೆಸ್ಟ್
– ಸಾಗರ: ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!
– ಸಾಗರ: ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ
NAMMUR EXPRESS NEWS
ಶಿವಮೊಗ್ಗ: ನಶೆಯಲ್ಲಿದ್ದ ಮೆಡಿಕಲ್ ವಿದ್ಯಾರ್ಥಿಯೊಬ್ಬ ಕಾರಿನಲ್ಲಿ ಐದಾರು ಕಡೆ ಅಪಘಾತ ಮಾಡಿದ್ದಾನೆ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಮೆಡಿಕೆಲ್ ವಿದ್ಯಾರ್ಥಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಹೊಳೆಹೊನ್ನೂರು ರಸ್ತೆಯಲ್ಲಿ ಜಾವಳ್ಳಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುವಾಗ ನಾಲ್ಕೈದು ಕಡೆ ಅಪಘಾತ ಮಾಡಿದ್ದಾನೆ. ಗುರುಪುರದ ಶಾಂತಮ್ಮ ಲೇಔಟ್ನಲ್ಲಿ ಭದ್ರಾವತಿಯ ಲೋಯರ್ ಹುತ್ತದ ನವೀನ್ ಕುಮಾರ್ ಮತ್ತು ಅವರ ಪತ್ನಿ ತೆರಳುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದಾರೆ. ಅಷ್ಟು ಹೊತ್ತಿಗೆ ಮೆಡಿಕಲ್ ವಿದ್ಯಾರ್ಥಿಯನ್ನು ಹಿಂಬಾಲಿಸಿ ಬಂದ ಸಾರ್ವಜನಿಕರು ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿದ್ದ ಮೆಡಿಕೆಲ್ ವಿದ್ಯಾರ್ಥಿಯನ್ನು ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್ ವಿದ್ಯಾರ್ಥಿ ನಶೆಯಲ್ಲಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಮದ್ಯ ಸೇವಿಸಿದ್ದನೊ, ಗಾಂಜಾ ಮತ್ತಿನಲ್ಲಿದ್ದನೊ ಅನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು
15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆ 25 ವರ್ಷದ ಯುವಕನಿಗೆ ಇಲ್ಲಿನ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. 2022ರಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ನೊಂದ ಬಾಲಕಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಹೊಸನಗರ ಠಾಣೆ ಸಿಪಿಐ ಬಿ.ಸಿ.ಗಿರೀಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿ ದರು. ವಿಚಾರಣೆ ನಡೆಸಿದ ನ್ಯಾಯಾಧಿಶರಾದ ಲತಾ ಆರೋಪಿಗೆ ಶಿಕ್ಷೆ ವಿಧಿಸಿ ಅದೇಶಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ 4 ತಿಂಗಳು ಸಾದಾ ಸೆರೆವಾಸದ ಶಿಕ್ಷೆ ವಿಧಿಸಿದ್ದಾರೆ.
ಐಫೋನ್ ಖರೀದಿಗೆ ಲಕ್ಷ ಲಕ್ಷ ರೂ. ಹಣ ಕದ್ದಿದ್ದ ವಿದ್ಯಾರ್ಥಿ ನಾಲ್ಕೇ ಗಂಟೆಯಲ್ಲಿ ಅರೆಸ್ಟ್
ಶಿಕಾರಿಪುರ : ದೂರು ನೀಡಿದ ನಾಲ್ಕೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಎರಡು ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಾಳೆಕೊಪ್ಪ ಗ್ರಾಮದ ಹನುಮಂತ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಹನುಮಂತ ನಾಯ್ಕ ಅವರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಘಟನೆ ಸಂಭವಿಸಿತ್ತು. ಮನೆ ಬಾಗಿಲಿನ ಬೀಗ ಹಾಕಿ ಅದನ್ನು ಬಾಗಿಲಿನ ಬಳಿ ಇರಿಸಿದ್ದರು. ಅದೇ ಬೀಗ ಬಳಸಿ ಮನೆಯೊಳಗೆ ಹೋಗಿದ್ದ ಯುವಕ 2,05,000 ರೂ. ನಗದು ಕಳವು ಮಾಡಿ ಯುವಕ ತಲೆಮರೆಸಿಕೊಂಡಿದ್ದ.
ಸಿಸಿಟಿವಿ ಪರಿಶೀಲಿಸಿದಾಗ ತಮ್ಮೂರಿಗೆ ಆಗಾಗ ಬರುತ್ತಿದ್ದ ಚನ್ನಗಿರಿ ಮೂಲದ ಕಾಲೇಜು ವಿದ್ಯಾರ್ಥಿ ಎಂದು ಗೊತ್ತಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದೂರು ದಾಖಲಾದ ಕೇವಲ 4 ಗಂಟೆಯ ಒಳಗಾಗಿ ಆರೋಪಿಯ ಬಂಧನವಾಗಿದೆ. ಐಫೋನ್ ಖರೀದಿಗಾಗಿ ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಇನ್ಸ್ಪೆಕ್ಟರ್ ಆರ್.ಆರ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಓಸಿ (ಮಟ್ಕಾ) ಆಡುತ್ತಿದ್ದ ಇಬ್ಬರು ಅರೆಸ್ಟ್!
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ ಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿ ಕಟ್ಟಿ. ಓಸಿ (ಮಟ್ಕಾ) ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮ್ರೆಡ್ಡಿ ಹಾಗೂ ಶಿವಮೊಗ್ಗ ಜಿಲ್ಲಾ 2ನೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾದ ಕಾರಿಯಪ್ಪರವರ ಆದೇಶದ ಮೇರೆಗೆ ಸಾಗರ ಪೊಲೀಸ್ ಉಪಾಧಿಕ್ಷಕರಾದ ಗೋಪಾಲ ಕೃಷ್ಣ ಟಿ.ನಾಯಕ್ ಇವರ ಮಾರ್ಗದರ್ಶನದಂತೆ ಸಾಗರ ಪೇಟೆ ಪೊಲೀಸ್ ಠಾಣೆಯ ಸಿಪಿಐ ಸೀತಾರಾಂ ಜೆ.ಬಿ. ರವರ ಮಾರ್ಗದರ್ಶನದಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ ಪಿ. ಎಸ್.ಐ ನಾಗರಾಜ ಟಿ.ಎಂ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ ಶ್ರೀನಿವಾಸ ಪಿಸಿ ಮಂಜುನಾಥ್ ಮತ್ತು ಯೋಗೀಶ್ ಅವರನ್ನೊಳಗೊಂಡ ತಂಡ ಕಾನೂನು ಬಾಹಿರವಾಗಿ ಓಸಿ ಮಟ್ಕಾ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ.ಮಂಜಪ್ಪ ನಾಯ್ಕ ಮತ್ತು ಶಿವಕುಮಾರ ಎಂಬ ಇಬ್ಬರನ್ನು ಬಂಧಿಸಿ ಅರೋಪಿತರಿಂದ 3000/- ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಇಬ್ಬರು ಆರೋಪಿಗಳ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಿಡ್ಜ್ ಕೆಳಗೆ ತೇಲುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆ!
ಸಾಗರ ತಾಲೂಕು ಕೆರೆಹಳ್ಳಿ ವರದಾ ನದಿ ಬ್ರಿಡ್ಜ್ ಕೆಳಗೆ ಅಪರಿಚಿತ ಮೃತ ದೇಹ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣ ಸೊರಬ ಅಗ್ನಿಶಾಮಕದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ದೇಹವನ್ನು ಮೇಲಕ್ಕೆ ಎತ್ತಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿಯಾದ ಮಹಾಬಲೇಶ್ವರ, ಮಂಜುನಾಥ್, ಶ್ರೀಶೈಲ ತ್ರಿಫಲಕಟ್ಟಿ ,ಅರುಣ್ ಕೆ ಎಂ ,ಚೇತನ್ ಸಂದಿಪ್ ರಾಥೋಡ್, ವಿಜಯ್ ನೆಸರಗಿ ಹಾಜರಿದ್ದರು.