ಅಡಿಕೆ ಚೇಣಿ ಹೋದ ಮೂವರ ದುರ್ಮರಣ!
– ಟೂತ್ಪೇಸ್ಟ್, ಸ್ಟ್ರಾದಲ್ಲಿ ಗಾಂಜಾ ಪತ್ತೆ!
– ಶಿವಮೊಗ್ಗ ಜೈಲಲ್ಲಿ ವಸ್ತು ಕೊಡಲು ಹೋಗಿ ಜೈಲು ಸೇರಿದ!
– ತೀರ್ಥಹಳ್ಳಿ: ಬೆಜ್ಜವಳ್ಳಿ ಜಾತ್ರೆಯಲ್ಲಿ ಅಂದರ್ ಬಾಹರ್
– ಸಾಲ ವಾಪಸ್ ಕೇಳಿದ್ದಕ್ಕೆ ಕತ್ತಿಯಿಂದ ಕಡಿದ ಮಹಿಳೆ!
NAMMUR EXPRESS NEWS
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಚೇಣಿ ವಾಹನ ಪಲ್ಟಿ ಹೊಡೆದು ಮೂವರು ಸಾವು ಕಂಡಿದ್ದಾರೆ. ಅಡಿಕೆ ಸಾಗಿಸ್ತಿದ್ದ ಮಹೀಂದ್ರಾ ಬೊಲೆರೋ ಪಿಕಪ್ ವಾಹನ ಪಲ್ಟಿಯಾಗಿ ಘಟನೆಯಲ್ಲಿ ಭದ್ರಾವತಿ ತಾಲ್ಲೂಕಿನ ಮೂವರು ಸಾವನ್ನಪ್ಪಿದ್ದಾರೆ. ಚಿನ್ನಿಕಟ್ಟೆ ಜೋಗದ ಬಳಿ ಘಟನೆ ಭದ್ರಾವತಿ ತಾಲೂಕಿನ ಚಂದನಕೆರೆಯ ಮಂಜುನಾಥ (40), ನಾಗರಾಜ್ (42), ಗೌತಮ್ (19) ಮೃತ ದುರ್ದೈವಿಗಳಾಗಿದ್ದಾರೆ.
ಇವರು ಚಂದನಕರೆಯಿಂದ ಶಿಕಾರಿಪುರ ತಾಲೂಕು ಅರಿಶಿಣಗೆರೆಗೆ ತೆರಳಿದ್ರು. ಅಲ್ಲಿನ ತೋಟವೊಂದರಲ್ಲಿ ಅಡಕೆ ಕೊಯ್ಲು ಮುಗಿಸಿಕೊಂಡ ವಾಪಸ್ ಬರುವಾಗ ಘಟನೆ ಸಂಭವಿಸಿದೆ. ಸವಳಂಗ ಮಾರ್ಗವಾಗಿ ಚಂದನಕೆರೆಗೆ ಬರುತ್ತಿದ್ದಾಗ ಚಿನ್ನಿಕಟ್ಟೆ ಜೋಗದ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಸುರೇಶ್, ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಲ್ಟಿಯಾದ ರಭಸಕ್ಕೆ ಬೊಲೆರೋ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಟೂತ್ಪೇಸ್ಟ್, ಸ್ಟ್ರಾದಲ್ಲಿ ಗಾಂಜಾ ಪತ್ತೆ!
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ರಹಸ್ಯ ಬಯಲಾಗಿದೆ. ಕೇಂದ್ರ ಕಾರಾಗೃಹ ಶಿವಮೊಗ್ಗ ಮುಖ್ಯ ಅದೀಕ್ಷಕರು ದೂರೊಂದನ್ನು ನೀಡಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಜ.11ರಂದು ಭದ್ರಾವತಿಯ ನಿವಾಸಿ ಔರಂಗಜೇಬ ಎಂಬವರ ಪುತ್ರ ತಯೀಬ್ ಎಂಬಾತ ಜೈಲಿನಲ್ಲಿದ್ದ ಗಣೇಶ ಎಂಬವರನ್ನ ನೋಡಲು ಬಂದಿದ್ದನಂತೆ. ಈ ವೇಳೆ ಆತನ ಬಳಿಯಲ್ಲಿದ್ದ ಪ್ಲಾಸ್ಟಿಕ್ ಕವರ್ ಹಾಗೂ ಅದರಲ್ಲಿದ್ದ ವಸ್ತುಗಳನ್ನ ಕೆಎಸ್ಐಎಸ್ಎಫ್ ಸಿಬ್ಬಂದಿ ಅಕ್ಸೆಸ್ ಕಂಟ್ರೋಲ್ನಲ್ಲಿ ಪರಿಶೀಲಿಸಿದ್ಧಾರೆ.
ಈ ವೇಳೆ ಆರೋಪಿ ತಂದಿದ್ದ ಟೂತ್ಪೇಸ್ಟ್ ನಲ್ಲಿ ಅನುಮಾನಸ್ಪದ ವಸ್ತು ಇರುವುದು X-Ray ಬ್ಯಾಗೇಜ್ ಸ್ಕ್ಯಾನರ್ ನಲ್ಲಿ ಗೊತ್ತಾಗಿದೆ. ಹಾಗಾಗಿ ಟೂತ್ ಪೇಸ್ಟ್ ತೆಗೆದು ಪರಿಶೀಲಿಸಿದ್ದಾರೆ. ಈ ವೇಳೆ ಅದರಲ್ಲಿ ಸ್ಟ್ರಾಗಳು ಕಂಡು ಬಂದಿವೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ತಕ್ಷಣ ಆರೋಪಿಯನ್ನು ಹಿಡಿದ ಭದ್ರತಾ ಸಿಬ್ಬಂದಿಯು ಆರೋಪಿಯನ್ನು ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆತನ ವಿರುದ್ಧ ಕೇಸ್ ಆಗಿದ್ದು, ಜೈಲಿಗೆ ಮಾದಕವಸ್ತು ಸಾಗಿಸಲು ಬಂದು ಅದೇ ಜೈಲಿಗೆ ಅತಿಥಿಯಾಗಿದ್ದಾನೆ.
ಬೆಜ್ಜವಳ್ಳಿ ಜಾತ್ರೆಯಲ್ಲಿ ಅಂದರ್ ಬಾಹರ್!
ಶಿವಮೊಗ್ಗ ಜಿಲ್ಲೆ ಬೆಜ್ಜವಳ್ಳಿ ಜಾತ್ರೆಯ ನಡುವೆ ಸ್ಟಾಲ್ ಹಾಕಿ ಇಸ್ಪೀಟ್ ಅಂದರ್ ಬಾಹರ್ ಆಡಿಸ್ತಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ದಾಳಿ ನಡೆಸಿ ಸ್ಟಾಲ್ಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣವನ್ನು ಸಹ ದಾಖಲಿಸಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. ಯಾರ ವಿರುದ್ಧ ದಾಖಲಾಗಿದೆ. ಇಸ್ಪೀಟ್ ಆಡಿಸುತ್ತಿರುವ ಟೀಂ ಯಾವುದು ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೆ ಗೊತ್ತಾಗಬೇಕಿದೆ. ಹಳ್ಳಿಗರಿಗೆ ಮೋಸದ ಆಟವಾದರೆ, ಇದರಲ್ಲಿ ಇಸ್ಪೀಟ್ ಎಲೆಗಳನ್ನು ತೆಗೆದಿಟ್ಟು ಬೇರೆ ಎಲೆ ಬರುವಂತೆ ಮಾಡಿ ಮೋಸಮಾಡುತ್ತಾರೆ. ಹಳ್ಳಿಜನಗಳಿಗೆ ಅಂದರ್ ಬಾಹರ್ನ ಒಳಗಿನ ಕರಾಮತ್ತು ಗೊತ್ತಿರುವುದಿಲ್ಲ. ಹೀಗಾಗಿ ಮೋಸ ಹೋಗುತ್ತಾರೆ.
ಸಾಲ ವಾಪಸ್ ಕೇಳಿದ್ದಕ್ಕೆ ಕತ್ತಿಯಿಂದ ಕಡಿದ ಮಹಿಳೆ
ತರೀಕೆರೆ: ಸಾಲ ಮರು ಪಾವತಿ ವಿಚಾರದಲ್ಲಿ ಮಹಿಳೆ ಬೀಸಿದ ಮಚ್ಚಿನಿಂದ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವೀನ್ (40) ಮೃತಪಟ್ಟಿದ್ದಾರೆ. ಕರಕುಚ್ಚಿ ಗ್ರಾಮದ ನವೀನ್ ಮತ್ತು ಜ್ಯೋತಿಬಾಯಿ ಸಂಬಂಧಿಕರಾಗಿದ್ದು, ಕಳೆದ ಐದು ವರ್ಷಗಳ ಹಿಂದೆ ಜ್ಯೋತಿಬಾಯಿ ತನ್ನ ಸಂಬಂಧಿ ನವೀನ್ ಹತ್ತಿರ ಮನೆಕಟ್ಟಲು 5 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲ ಮರು ಪಾವತಿ ವಿಚಾರದಲ್ಲಿ ವಿವಾದ ಏರ್ಪಟ್ಟಿತ್ತು. ಜ.2 ರಂದು ಗ್ರಾಮದ ನಾಗ್ಯನಾಯ್ಕ ಎಂಬಾತ ಜ್ಯೋತಿಬಾಯಿ ಸಾಲದ ಹಣವನ್ನು ಹಿಂದಿರುಗಿಸಲಿದ್ದಾರೆ ಎಂದು ನವೀನ್ ನನ್ನು ಜ್ಯೋತಿಬಾಯಿ ಮನೆಗೆ ಕರೆ ತಂದಿದ್ದಾನೆ.
ಅಲ್ಲಿ ನವೀನ್ ಮೇಲೆ ಮಾರಕಾಸ್ತ್ರದಿಂದ ಜ್ಯೋತಿ ಬಾಯಿ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ನವೀನ್ ಕೂಗಾಡುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಕೂಡಲೇ ಗ್ರಾಮಸ್ಥರು ನವೀನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ನವೀನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ನವೀನ್ ಕುಟುಂಬಸ್ಥರು ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅಂಗಾಂಗ ದಾನದ ಬಳಿಕ ನವೀನ್ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.