ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ ಇನ್ನಿಲ್ಲ
– ರಾಜ್ಯದ ಹಲವು ಪತ್ರಿಕೆಯ ವಿತರಕರಾಗಿ ಸೇವೆ
– ಭದ್ರಾವತಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆ!
– ಜ್ಯೂಸ್’ಗೆ ಇಲಿ ಪಾಷಾಣ ಬೆರೆಸಿಕೊಂಡು ಕುಡಿದು ಸಾವು
– ಸಾಗರ: ಸಾಲ ಕಿರಿಕ್: ಆಟೋ ಚಾಲಕ ನೇಣಿಗೆ ಶರಣು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಹಿರಿಯ ಪತ್ರಕರ್ತ ಶೀನಪ್ಪ ಭಂಡಾರಿ (77) ಹೃದಯಾಘಾತದಿಂದ ಗುರುವಾರ ನಿಧನರಾದರು. ಕನ್ನಡಪ್ರಭ, ಉದಯವಾಣಿ, ಛಲಗಾರ ಪತ್ರಿಕೆ ಸೇರಿದಂತೆ ಅನೇಕ ಪತ್ರಿಕೆಗಳ ವರದಿಗಾರರಾಗಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ರಾಜ್ಯದ ಅನೇಕ ಪತ್ರಿಕೆಗಳ ವಿತರಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಜಾವಾಣಿ, ಉದಯವಾಣಿ, ವಿಜಯಕರ್ನಾಟಕ, ವಿಜಯವಾಣಿ, ಕನ್ನಡಪ್ರಭ, ಸುಧಾ, ಮಯೂರ, ಕರ್ಮವೀರ ಸೇರಿದಂತೆ ಅನೇಕ ಪತ್ರಿಕೆಗಳ ವಿತರಕರಾಗಿದ್ದರು. ಅಗ್ರಹಾರ ಹೋಬಳಿಯ ಸವಿತಾ ಸಮಾಜದ ಕಾರ್ಯದರ್ಶಿಯಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಸಮಾಜದ ಸೇವೆ ಸಲ್ಲಿಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗುರುವಾರ ಕೋಣಂದೂರಿನಲ್ಲಿ ನಡೆಯಲಿದೆ.
ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆ
ಭದ್ರಾವತಿ: ಪೋಷಕರು ಕೆಲಸಕ್ಕೆ ಹೋಗು ಎಂದು ಹೇಳಿದ ಸಣ್ಣ ಕಾರಣಕ್ಕಾಗಿ ತಾಲೂಕಿನ ಕೋಡಿಹಳ್ಳಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಸಾಗರ್(21) ಎಂದು ಗುರುತಿಸಲಾಗಿದೆ. ಮನೆಯವರು ಕೆಲಸಕ್ಕೆ ಹೋಗು ಎಂದು ಹೇಳಿದ್ದಕ್ಕಾಗಿ ಯುವಕ ಮನನೊಂದಿದ್ದಾನೆ. ಇದರಿಂದಾಗಿ ಜ್ಯೂಸ್’ಗೆ ಇಲಿ ಪಾಷಾಣ ಬೆರೆಸಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಷಯ ತಿಳಿದ ಆತನ ಪೋಷಕರು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಆಟೋ ಚಾಲಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಮಾಸ್ತಿಕಲ್ಲು ಬಳಿ ನಡೆದಿದೆ. 38 ವರ್ಷದ ಆಟೋ ಚಾಲಕ ಶಶಿಕುಮಾರ್ ಮೃತ ದುರ್ದೈವಿ. ಶಶಿಕುಮಾರ್ ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ, ಮೂಲತಃ ಮಲ್ಲಂದೂರು ನಿವಾಸಿಯಾಗಿರುವ ಶಶಿ, ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ.ಸಾಲದ ಬಡ್ಡಿ ಹೆಚ್ಚಾದ ಹಿನ್ನೆಲೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.