ಕರಡಿ ಪ್ರತ್ಯಕ್ಷ, ಓರ್ವನ ಮೇಲೆ ದಾಳಿ
• ನಟ ದರ್ಶನ್ ವಿರುದ್ಧ ಗ್ರಾಪಂ ಸದಸ್ಯೆಯಿಂದ ದೂರು
• ಆನಂದಪುರ ಸಮೀಪ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು.!!
• ಕೊಟ್ಟಿಗೆಯಲ್ಲಿ 12 ಅಡಿಯ ಕಾಳಿಂಗ ಸರ್ಪ
• ರೈಲಿಗೆ ಸಿಲುಕಿದ ಎಮ್ಮೆ ಇಂಟರ್ಸಿಟಿ 2 ಗಂಟೆ ವಿಳಂಬ
NAMMUR EXPRESS NEWS
ಶಿವಮೊಗ್ಗ: ನಗರದ ಗೊಪಾಳ ಗೌಡ ಬಡಾವಣೆಯಲ್ಲಿರುವ ಎಫ್ ಬ್ಲಾಕ್ ಡಿವಿಜಿ ಪಾರ್ಕ್ ಬಳಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು ವಾಕಿಂಗ್ ಗೆ ತೆರಳಿದ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಮಲೆನಾಡ ಭಾಗದಲ್ಲಿ ಕರಡಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಇಂದು ಬೆಳ್ಳಿಗೆ ವಾಕಿಂಗ್ ಹೋಗುತ್ತಿದ್ದ ತುಕಾರಾಮ್ ಶೆಟ್ಟಿ ಎಂಬುವರ ಮೇಲೆ ದಾಳಿ ಮಾಡಿದೆ. ಸಧ್ಯಕ್ಕೆ ಅವರ ಹೊಟ್ಟೆಗೆ ಗಿಬರಿದ್ದು ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ದಾಳಿನಿಂದ ಕರಡಿ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಕರಡಿ ಹಿಡಿಯುವ ಕಾರ್ಯಾಚರಣೆಗೆ ಇಳಿದಿದೆ. ಕರಡಿ ದಾಳಿ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ ತುಕಾರಾಂ ಶೆಟ್ಟಿ, ನಾಯಿಗಳು ಓಡಿಸಿಕೊಂಡು ಬಂದವು. ಓಡಿ ಬಂದ ಕರಡಿ ನನ್ನ ಮೇಲೆ ಎಗರಿ ಪರಚಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಗೋಪಾಳ ಗೌಡ ಎಫ್ ಬ್ಲಾಕ್ ನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.
ನಟ ದರ್ಶನ್ ವಿರುದ್ಧ ಗ್ರಾಪಂ ಸದಸ್ಯೆಯಿಂದ ದೂರು
ಶಿವಮೊಗ್ಗ: ಚಿತ್ರ ನಟ ದರ್ಶನ್ ಅವರು ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಾ ಮನಸ್ಸು ಸ್ಥೀಮಿತದಲ್ಲಿ ಇರದವರಂತೆ ವರ್ತಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ತಾಲೂಕಿನ ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರ ಆರ್. ಮೋಹನ್ ಅವರ ನೇತೃತ್ವದ ಮಹಿಳಾ ನಿಯೋಗವು ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಮಹಿಳಾ ಆಯೋಗ, ಡಿಸಿಎಂ ಮತ್ತು ಸಿಎಂ ಗೆ ಮನವಿ ನೀಡಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗಳ ಮುಖಾಂತರ ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಫೆಬ್ರವರಿ 17ರಂದು ನಡೆದ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮದಲ್ಲಿ ಚಿತ್ರ ನಟ ದರ್ಶನ್ ಅವರು “ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಅವಳ ಅಜ್ಜಿನಾ ಬಡಿಯಾ” ಎಂದು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅವರು ತಮ್ಮ ಮಾತಿನ ಮೂಲಕ ಮಹಿಳೆಯರನ್ನು ಅವಮಾನಿಸಿದ್ದಾರೆ ಹಾಗೂ ಅಗೌರವಿಸಿದ್ದಾರೆ ಎಂದು ದೂರಲಾಗಿದೆ.
ಯುವ ಜನರಿಗೆ ಮಾದರಿಯಾಗಿರಬೇಕಾದ ನಾಯಕ ನಟ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ದರ್ಶನ್ ಅವರು ಕುಲಕ್ಕೆ ಕಳಂಕ ತರುವಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಅವರನ್ನು ವಿಚಾರಣೆ ನಡೆಸಿ ಆತ ಬಳಸಿರುವ ಪದಗಳು ಭಾವನೆ ಬಗ್ಗೆ ಮಾಹಿತಿ ಪಡೆದು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಹಿಂದೆ ಈ ನಟ ಹೆಂಡತಿಗೆ ಸಿಗರೇಟಿನಿಂದ ಸುಟ್ಟು ಮಾನಸಿಕ ಕಿರುಕುಳ ನೀಡಿ ಜೈಲುಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ಬಾಗಿಲು ತಟ್ಟಿದಾಗ ಬೆಡ್ ರೂಂ ಒಳಗೆ ಎಳೆದು ಕೊಂಡು ಬಟ್ಟೆ ಬಿಚ್ಚಿ ಕೂಡಿ ಹಾಕಬೇಕೆಂದು ಅಸಂಬದ್ಧ ಹೇಳಿಕೆ ನೀಡುವ ಮೂಲಕ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು.
ತೆರೆಯ ಮೇಲೆ ಹೆಣ್ಣನ್ನು ಗೌರವಿಸುವಂತೆ ಮಾತನಾಡುವ ನಟ ದರ್ಶನ್ ಸಾರ್ವಜನಿಕ ಕಾರ್ಯಕ್ರಮ ಹಾಗೂ ಮಾಧ್ಯಮಗಳ ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರನ್ನು ಅಗೌರವಿಸುವಂತಹ, ನಿಂದಿಸುವ, ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಲಾಗಿದೆ. ಶೃತಿ, ಆಶಾ, ಯಶೋಧಮ್ಮ, ನೇತ್ರ, ಸುನೀತಾ, ಸೌಮ್ಯ, ಮಾಲಾಬಾಯಿ, ಮಹಾದೇವಿ ಶಿಕಾರಿಪುರ ಮತ್ತಿತರರು ನಿಯೋಗದಲ್ಲಿದ್ದರು.
ಆನಂದಪುರ ಸಮೀಪ ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು…!!!
ಸಾಗರ : ತಾಲೂಕಿನ ಆನಂದಪುರ ಸಮೀಪದ ಗೌತಮಪುರದಲ್ಲಿ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿಕಾರಿಪುರದಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರದಿಂದ ಶಿಕಾರಿಪುರ ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಆನಂದಪುರ 112 ಪೊಲೀಸ್ ಸಿಬ್ಬಂದಿಗಳು ತೆರಳಿದ್ದಾರೆ. ಆನಂದಪುರ ನಿವಾಸಿ ಭೀಮೇಶ್ ( 42 ) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ವೀಕ್ಷಿಸಿ ವಾಪಸ್ ಆಗುತ್ತಿದ್ದ ವೇಳೆ ನಡೆದ ದುರ್ಘಟನೆ ಇದಾಗಿದೆ. ಇನ್ನೊಬ್ಬ ಸವಾರ ಪ್ರತಾಪ್ ಆನಂದಪುರ ರವರ ಎರಡು ಕಾಲುಗಳು ಮುರಿದಿದ್ದು ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.
ಕೊಟ್ಟಿಗೆಯಲ್ಲಿ 12 ಅಡಿಯ ಕಾಳಿಂಗ ಸರ್ಪ
ಶಿವಮೊಗ್ಗ : ತಾಲೂಕಿನ ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಲಾಗಿತ್ತು. ಉರಗ ರಕ್ಷಕ ಬೆಳ್ಳೂರು ನಾಗರಾಜ್ ಅವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪ ಸೆರೆ ಹಿಡಿದಿದ್ದಾರೆ. ಈ ಕಾಳಿಂಗ ಸರ್ಪವು 12 ಅಡಿ ಉದ್ದ, 7.5 ಕೆ.ಜಿ ತೂಕವಿತ್ತು. ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಯಿತು.
ರೈಲಿಗೆ ಸಿಲುಕಿದ ಎಮ್ಮೆ, ಇಂಟರ್ಸಿಟಿ 2 ಗಂಟೆ ವಿಳಂಬ
ಶಿವಮೊಗ್ಗ : ರೈಲಿಗೆ ಎಮ್ಮೆ ಸಿಲುಕಿದ್ದರಿಂದ ಬೆಂಗಳೂರು – ತಾಳಗುಪ್ಪ ರಾತ್ರಿ ರೈಲು ಎರಡು ಗಂಟೆ ವಿಳಂಬವಾಗಿದೆ. ಸೋಮಿನಕೊಪ್ಪ ಸಮೀಪ ಇಂಟರ್ಸಿಟಿ ರೈಲಿಗೆ ಕಳೆದ ರಾತ್ರಿ ಎಮ್ಮೆಯೊಂದು ಸಿಲುಕಿತ್ತು. ಇದನ್ನು ಗಮನಿಸಿ ಲೋಕೊ ಪೈಲೆಟ್ ರೈಲು ನಿಲ್ಲಿಸಿದ್ದರು. ರಾತ್ರಿ 10 ಗಂಟೆಗೆ ತಾಳಗುಪ್ಪ ತಲುಪಬೇಕಿದ್ದ ರೈಲು ರಾತ್ರಿ 12 ಗಂಟೆ ತಲುಪಿದೆ. ಇನ್ನು, ತಾಳಗುಪ್ಪ – ಮೈಸೂರು ರಾತ್ರಿ ಎಕ್ಸ್ಪ್ರೆಸ್ ರೈಲು ಕೂಡ 20 ನಿಮಿಷ ತಡವಾಗಿ ಸಂಚರಿಸಿತು.