ದಕ್ಷಿಣ ಕನ್ನಡದಲ್ಲಿ 2 ದಿನದಲ್ಲಿ ಮಳೆಗೆ 6 ಮಂದಿ ಬಲಿ!
– ಮಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಮತ್ತಿಬ್ಬರು ಸಾವು
– ರೊಸಾರಿಯೋ ಶಾಲೆ ಬಳಿ ವಿದ್ಯುತ್ ಶಾಕ್ ಹೊಡೆದು ದಾರುಣ ಸಾವು
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಮತ್ತೆರಡು ಅಮಾಯಕ ಜೀವಗಳು ಬಲಿಯಾಗಿದ್ದು, ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ.
ಮಂಗಳೂರು ನಗರದ ರೊಸಾರಿಯೋ ಶಾಲೆಯ ಹಿಂಭಾಗದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದನ್ನು ಸ್ಪರ್ಶಿಸಿದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಗೊಬ್ಬೆ ಹೊಡೆಯುತ್ತಿರುವುದನ್ನು ಕೇಳಿ ರಕ್ಷಿಸುವುದಕ್ಕೆ ಓಡಿ ಬಂದ ಮತ್ತೊಬ್ಬರು ಕೂಡ ವಿದ್ಯುತ್ ಶಾಕ್ಗೆ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಹಾಸನ ಜಿಲ್ಲೆಯ ಪಾಳ್ಯ ಹೋಬಳಿಯ ರಾಜು(50) ಹಾಗೂ ಪುತ್ತೂರು ತಾಲೂಕಿನ ರಾಮಕುಂಜದ ದೇವರಾಜ್(46) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಬುಧವಾರ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಎಲ್ಲರೂ ಕೂಡ ಮುಂಜಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರಬಹುದೆಂದು ಶಂಕಿಸಿದ್ದರು. ಆದರೆ, ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ ರಾತ್ರಿ ಈ ದುರ್ಘಟನೆ ಆಗಿದ್ದು, ಬೆಳಗ್ಗಿನ ತನಕ ಜೋರು ಮಳೆಯಿಂದಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಪೊಲೀಸರು ರಾಜು ಅವರ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.